Lok Sabha Election 2024: ಬಿಜೆಪಿ-ಜೆಡಿಎಸ್‌ನದು ನ್ಯಾಚುರಲ್‌ ಅಲೈಯನ್ಸ್, ಜಗದೀಶ ಶೆಟ್ಟರ್‌

By Kannadaprabha NewsFirst Published Apr 5, 2024, 5:00 AM IST
Highlights

ನರೇಂದ್ರ‌ ಮೋದಿಯವರು ದೇವೆಗೌಡರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ರಾಜ್ಯ ಮಟ್ಟದಲ್ಲಿ ಈಗಾಗಲೇ ಸಮನ್ವಯ ಸಭೆ ಆಗಿದೆ. ಈಗ ಜಿಲ್ಲಾ ಮಟ್ಟದಲ್ಲೂ ಸಭೆ ಮಾಡಿದ್ದೇವೆ. ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಜೆಡಿಎಸ್ ನವರು ಸಹಕಾರ ನೀಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡ ಬೆಳಗಾವಿ ಲೋಕಸಭೆ ಅಭ್ಯರ್ಥಿ ಜಗದೀಶ ಶೆಟ್ಟರ್‌

ಬೆಳಗಾವಿ(ಏ.05):  ಜೆಡಿಎಸ್ ಮುಖಂಡರ, ಕಾರ್ಯಕರ್ತರ ಜೊತೆಗೆ ನಾವು ಕೆಲಸ ಪ್ರಾರಂಭಿಸಿದ್ದೇವೆ. ಪ್ರವಾಸ ಮಾಡಿದ ಕಡೆ ಜೆಡಿಎಸ್ ಮುಖಂಡರು ಬಿಜೆಪಿಗೆ ಸಾಥ್ ನೀಡುತ್ತಿದ್ದಾರೆ. ರಾಷ್ಟ್ರೀಯ ನಾಯಕರ ಜತೆಗೆ ಮೈತ್ರಿ ಮಾಡಿಕೊಂಡು ನಮ್ಮ‌ ಜತೆ ಜೆಡಿಎಸ್ ಕೈ ಜೋಡಿಸಿದ್ದಾರೆ. ಇದೊಂದು ನ್ಯಾಚುರಲ್ ಅಲೈಯನ್ಸ್ ಎಂದ ಬೆಳಗಾವಿ ಲೋಕಸಭೆ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹೇಳಿದರು.

ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರ ಸಮನ್ವಯ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನಿಂದಲೂ ಜೆಡಿಎಸ್ ಕಾಂಗ್ರೆಸ್ ವಿರೋಧಿ ನಿಲುವು ಹೊಂದಿದೆ. ಬಿಜೆಪಿ ಜತೆಗೆ ಜೆಡಿಎಸ್ ಹೊಂದಾಣಿಕೆ ಹೊಸದಲ್ಲ. ಹಿಂದೆಯೂ ಹೊಂದಾಣಿಕೆ ಮಾಡಿಕೊಂಡಿವೆ. ನರೇಂದ್ರ‌ ಮೋದಿಯವರು ದೇವೆಗೌಡರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ರಾಜ್ಯ ಮಟ್ಟದಲ್ಲಿ ಈಗಾಗಲೇ ಸಮನ್ವಯ ಸಭೆ ಆಗಿದೆ. ಈಗ ಜಿಲ್ಲಾ ಮಟ್ಟದಲ್ಲೂ ಸಭೆ ಮಾಡಿದ್ದೇವೆ. ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಜೆಡಿಎಸ್ ನವರು ಸಹಕಾರ ನೀಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ಹುಬ್ಬಳ್ಳಿ ಜನ್ಮಭೂಮಿ, ಬೆಳಗಾವಿ ನನ್ನ ಕರ್ಮಭೂಮಿ-ಶೆಟ್ಟರ್; ಮೊದಲು ಮನೆ ಅಡ್ರೆಸ್ ತೋರಿಸಲಿ ಎಂದ ಹೆಬ್ಬಾಳ್ಕರ್

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿವೆ. ಕಾಂಗ್ರೆಸ್‌ ಶಾಸಕರೇ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಮೈಸೂರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡರೆ ಸಿದ್ದರಾಮಯ್ಯನವರು ಸಿಎಂ ಸ್ಥಾನ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಅಲ್ಲಿಯೇ ಬಿಡಾರ ಹೂಡಿ ಮೈಸೂರು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ನಿಟ್ಟಿನಲ್ಲಿ ಪ್ರಚಾರ ನಡೆಸಿದ್ದಾರೆ. ಸಿದ್ದರಾಮಯ್ಯ ಇದು ನನ್ನ ಕೊನೆಯ ಚುನಾವಣೆ ಎಂದು ಕಳೆದ 10 ವರ್ಷಗಳಿಂದ ಹೇಳುತ್ತಿದ್ದಾರೆ. ಇದು ರಾಜಕೀಯದ ಗಿಮಿಕ್ ಎಂದು ಟೀಕಿಸಿದ ಅವರು, ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದರು.
ಲೋಕಸಭೆ ಚುನಾವಣೆ ಜಾತಿ, ಸಮಾಜದ ಮೇಲೆ ನಡೆಯದು. ರಾಷ್ಟ್ರೀಯ ವಿಚಾರಧಾರೆ ಹಾಗೂ ಮೋದಿ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಇಂಡಿಯಾ ಮೈತ್ರಿಕೂಟಕ್ಕೆ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಮೋದಿ ಅವರೇ ನಮ್ಮ ಗ್ಯಾರಂಟಿ ಎಂದು ಹೇಳಿದರು.

ರಾಮದುರ್ಗ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಸಂಪರ್ಕಿಸಿ, ಮಾತುಕತೆ ನಡೆಸಿದ್ದೇನೆ. ಯಾದವಾಡ ಮತ್ತು ಚಿಕ್ಕರೇವಣ್ಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಮಹಾದೇವಪ್ಪ ಯಾದವಾಡ ಕಾಂಗ್ರೆಸ್‌ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದ ಅವರು, ಎನ್‌ಡಿಎ ಒಕ್ಕೂಟದ ಜತೆಗೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿಯೂ ಜೆಡಿಎಸ್‌ನೊಂದಿಗೆ ಸಮನ್ವಯಸಭೆ ನಡೆಸಲಾಗಿದೆ. ಬಿಜೆಪಿ- ಜೆಡಿಎಸ್‌ ಕಾರ್ಯಕರ್ತರು ಒಗ್ಗಟ್ಟಿನೊಂದಿಗೆ ಪ್ರಚಾರ ನಡೆಸುತ್ತೇವೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಪಾರ ಗೌರವ ಹೊಂದಿದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಜೆಡಿಎಸ್‌ ಸಹಕಾರ ನೀಡುತ್ತಿದೆ ಎಂದರು.

ಶೆಟ್ಟರ್ ಬಗ್ಗೆ ಹೆಬ್ಬಾಳ್ಕರ್ ಹಗುರ ಮಾತು ಸರಿಯಲ್ಲ: ಮಂಗಲಾ ಅಂಗಡಿ

ಸುದ್ದಿಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಅನಿಲ ಬೆನಕೆ, ಮಹಾಂತೇಶ ಕವಟಗಿಮಠ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನಿ ಸೇರಿ ಗಣ್ಯರು ಪ್ರಚಾರದಲ್ಲಿ ಭಾಗಿ

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ಅ‍ವರಿಗೆ ಆಗಮಿಸುವಂತೆ ಮನವಿ ಮಾಡಲಾಗಿದೆ. ಶಾಸಕ ಬನಸಗೌಡ ಪಾಟೀಲ ಯತ್ನಾಳ ಕೂಡ ಪ್ರಚಾರಕ್ಕೆ ಆಗಮಿಸುವರು ಎಂದು ಹೇಳಿದರು.

click me!