ಕಾಂಗ್ರೆಸ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಪೈಕಿ ಬಿಲ್ಲವ ಸಮುದಾಯಕ್ಕೆ ಕೇವಲ 6 ಸೀಟ್ ನೀಡಲಾಗಿದೆ. ಆದರೆ 32 ಸೀಟ್‌ಗಳನ್ನು ಲಿಂಗಾಯತರಿಗೆ ನೀಡಿದ್ದಾರೆ. ಹೆಚ್ಚಿನ ಜನಸಂಖ್ಯೆಯಿರುವ ಬಿಲ್ಲವ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದ ಪ್ರಣವಾನಂದ ಸ್ವಾಮೀಜಿ
ಮಂಗಳೂರು(ಮಾ.27): ಮುಂಬರುವ ಚುನಾವಣೆಯಲ್ಲಿ ಬಿಲ್ಲವ, ಈಡಿಗ, ನಾಮಧಾರಿ ಸಮುದಾಯಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಕನಿಷ್ಠ ತಲಾ 10 ಸೀಟ್ ಕೊಡಲೇಬೇಕು. ನಮ್ಮ ಸಮುದಾಯಕ್ಕೆ ಟಿಕೆಟ್ ಹಂಚಿಕೆಯಲ್ಲಿ ಅನ್ಯಾಯ ಮಾಡಿದರೆ ಮುಂದಿನ ದಾರಿ ಹುಡುಕಬೇಕಾದೀತು ಎಂದು ಕಲಬುರಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಎಚ್ಚರಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಪೈಕಿ ಬಿಲ್ಲವ ಸಮುದಾಯಕ್ಕೆ ಕೇವಲ 6 ಸೀಟ್ ನೀಡಲಾಗಿದೆ. ಆದರೆ 32 ಸೀಟ್‌ಗಳನ್ನು ಲಿಂಗಾಯತರಿಗೆ ನೀಡಿದ್ದಾರೆ. ಹೆಚ್ಚಿನ ಜನಸಂಖ್ಯೆಯಿರುವ ಬಿಲ್ಲವ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದರು.
ಬಿಲ್ಲವರ 3 ಬೇಡಿಕೆ ಈಡೇರಿಸಿದರೆ ಪಾದಯಾತ್ರೆ ವಾಪಸ್: ಪ್ರಣವಾನಂದ ಶ್ರೀ
ದಕ್ಷಿಣ ಕನ್ನಡದಲ್ಲಿ 8 ಕ್ಷೇತ್ರಗಳಲ್ಲಿ 6ರಲ್ಲಿ ಅತೀ ಹೆಚ್ಚು ಮತದಾರರು ಬಿಲ್ಲವ ಸಮುದಾಯದವರೇ ಇರುವಾಗ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ ಬೆಳ್ತಂಗಡಿ ಒಂದೇ ಕ್ಷೇತ್ರದಲ್ಲಿ ಬಿಲ್ಲವ ಅಭ್ಯರ್ಥಿಯನ್ನು ಘೋಷಿಸಲಾಗಿದೆ. ಒಕ್ಕಲಿಗರು ನಿರ್ಣಾಯಕರಾಗಿರುವ ಮಂಡ್ಯದಂತಹ ಜಿಲ್ಲೆಯಲ್ಲಿ ಎಲ್ಲ ಸ್ಥಾನಗಳಿಗೆ ಒಕ್ಕಲಿಗರನ್ನೇ ಆಯ್ಕೆ ಮಾಡುವಾಗ, 6 ಕ್ಷೇತ್ರಗಳಲ್ಲಿ ಬಿಲ್ಲವರು ಬಹುಸಂಖ್ಯಾತ ಮತದಾರರಾಗಿರುವ ದ.ಕ ಜಿಲ್ಲೆಯಲ್ಲಿ ಬಿಲ್ಲವರನ್ನೇ ಆಯ್ಕೆ ಮಾಡಲು ಯಾಕೆ ಸಾಧ್ಯವಿಲ್ಲ? ಜಿಲ್ಲೆಯಲ್ಲಿ ಇನ್ನೂ ಕನಿಷ್ಠ 2 ಸೀಟ್‌ಗಳನ್ನು ಬಿಲ್ಲವರಿಗೆ ನೀಡದಿದ್ದರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಬಹುದು ಎಂದು ಪ್ರಣವಾನಂದ ಸ್ವಾಮೀಜಿ ಎಚ್ಚರಿಸಿದರು.
ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಜೆ.ಸುವರ್ಣ, ಪ್ರಧಾನ ಕಾರ್ಯದರ್ಶಿ ಲೋಕನಾಥ ಪೂಜಾರಿ, ಉಪಾಧ್ಯಕ್ಷ ಸುರೇಶ್ಚಂದ್ರ ಕೋಟ್ಯಾನ್ ಇದ್ದರು.