ಸಿಎಂ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಹೇಳುವುದಕ್ಕೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ನೀವು ಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷರನ್ನೋ ಇಲ್ಲವೆ ಹೈಕಮಾಂಡ್ ಅವರನ್ನು ಕೇಳಿದರೆ ಸರಿಯಾದ ಉತ್ತರ ಹೇಳಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.11): ಸಿಎಂ ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಹೇಳುವುದಕ್ಕೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ನೀವು ಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷರನ್ನೋ ಇಲ್ಲವೆ ಹೈಕಮಾಂಡ್ ಅವರನ್ನು ಕೇಳಿದರೆ ಸರಿಯಾದ ಉತ್ತರ ಹೇಳಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸಿಎಂ ಸ್ಥಾನ ಎರಡುವರೆ ವರ್ಷಕ್ಕೆ ಎಂದು ಹಂಚಿಕೆಯಾಗಿದೆಯೇ ಎಂಬ ವಿಷಯಕ್ಕೆ ಅವರು ಪ್ರತಿಕ್ರಿಯಿಸಿದರು. ಅದು ನಮಗೆ ಗೊತ್ತಿಲ್ಲ ಅದನ್ನು ನೀವು ಅವರನ್ನೇ ಕೇಳಬೇಕು, ಅವರನ್ನು ಕೇಳಿದರೆ ಸರಿಯಾದ ಉತ್ತರ ಸಿಗಬಹುದು ಎಂದರು. ಅದು ಅರ್ಧನೋ, ಪೂರ್ತಿನೋ. ಇಲ್ಲ 30 ತಿಂಗಳೋ 50 ತಿಂಗಳೋ ಎನ್ನುವುದು ಗೊತ್ತಿಲ್ಲ.
ಇದಕ್ಕೆ ಉತ್ತರವನ್ನು ನಾವು ಯಾರಿಂದ ಕೇಳಿ ಕೊಡಬೇಕು. ನಮ್ಮ ಹೈಕಮಾಂಡನ್ನೇ ಕೇಳಿ ಸರಿಯಾದ ಉತ್ತರ ಸಿಗಬಹುದು ಎಂದರು. ಜಾತಿ ಜನಗಣತಿ ವರದಿ ಜಾರಿ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಆಗುತ್ತಿರುವ ಚರ್ಚೆಗೆ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಬಿಲ್ಲು ಪಾಸ್ ಮಾಡಿದೆ ಎಂದರೆ ಎಲ್ಲರೂ ಒಪ್ಪಿಕೊಂಡಂತೆ, ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಅಂತ ಅಲ್ಲವೆ.? ವೈಯಕ್ತಿಕ ಅಭಿಪ್ರಾಯ ಇದ್ದರೆ ಅದು ಏನೇ ಇರಬಹುದು. ಮುಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ಇದೆ. ಆ ವೇಳೆ ಕ್ಯಾಬಿನೆಟ್ ಉಪಸಮಿತಿ ಮಾಡಬೇಕಾ, ಇಲ್ಲ ಸದನಕ್ಕೆ ಇಡಬೇಕಾ ಎನ್ನುವ ಚರ್ಚೆ ಇದೆ.
ಕಾಂಗ್ರೆಸ್‌ನಲ್ಲೂ ಬಣ ರಾಜಕೀಯವಿದೆ, ದಲಿತ ಶಾಸಕರು, ಸಚಿವರ ಸಭೆ ರದ್ದಾಗಿಲ್ಲ: ಸಚಿವ ಸತೀಶ್ ಜಾರಕಿಹೊಳಿ
ಇನ್ನು ಅಂತಿಮವಾಗಿ ಯಾವುದೇ ನಿರ್ಧಾರ ಆಗಿಲ್ಲ ಎಂದರು. ಆದರೆ ವರದಿ ಜಾರಿಗೆ ಒಕ್ಕಲಿಗ ಸಂಘಟನೆ ವಿರೋಧ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಒಕ್ಕಲಿಗರ ಸಂಘಟನೆ ವಿರೋಧ ಮಾಡುವುದು ಏಕೆ.? ಆ ವರದಿ ಇನ್ನೂ ಓಪನ್ ಆಗಿಲ್ಲ. ಅದರಲ್ಲಿ ಏನಿದೆ ಎನ್ನುವುದನ್ನು ನಾವು, ಅವರು ಯಾರು ನೋಡಿಲ್ಲ. ಅದಕ್ಕೆ ಏಕೆ ವಿರೋಧ ಎಂದು ಸಚಿವ ಸತೀಶ ಜಾರಕಿಹೊಳಿ ಅಮಾಧಾನ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಹಾಗೂ ವಿವಾದಿತ ಕೇಂದ್ರವಾಗಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಪರಿಶೀಲಿಸಿದರು.
ಕಾಮಗಾರಿ ಇಷ್ಟೊಂದು ತಡವಾಗಿರುವುದು ಏಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ ಅವರು ತಡೆಗೋಡೆ ಕಾಮಗಾರಿ ಈಗಾಗಲೇ ಶೇ 75 ರಷ್ಟು ಆಗಿದೆ. 2 ವರ್ಷದಿಂದಲೂ ಈ ಕಾಮಗಾರಿ ಬಗ್ಗೆ ಶಾಸಕರಾದ ಮಂತರ್ ಗೌಡ ಅವರು ನನ್ನ ಗಮನಕ್ಕೆ ತಂದಿದ್ದರು. ಏಪ್ರಿಲ್ ತಿಂಗಳ ಒಳಗೆ ಕಾಮಗಾರಿ ಮುಗಿಸುತ್ತೇವೆ ಎಂದರು. ಇನ್ನು ಜರ್ಮನ್ ಟೆಕ್ನಾಲಜಿಯಲ್ಲಿ ಕಾಮಗಾರಿ ಮಾಡುತ್ತಿದ್ದು ಅದು ಕೊಡಗಿನ ಪರಿಸರಕ್ಕೆ ಸಾಧ್ಯವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಜರ್ಮನ್ ಟೆಕ್ನಾಲಜಿಯಲ್ಲೇ ಕಾಮಗಾರಿ ಮಾಡುವುದಾಗಿ ಎಂಜಿನಿಯರ್ಗಳು ಹೇಳಿದ್ದಾರೆ. ಹೀಗಾಗಿ ಏಪ್ರಿಲ್ ಅಂತ್ಯದ ಒಳಗೆ ಕಾಮಗಾರಿ ಮುಗಿಯಲಿದೆ ಎಂದರು.
ಕಾಂಗ್ರೆಸ್‌ನಲ್ಲಿ ಗೊಂದಲ ಇದೆಯಾ?: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು
ಇನ್ನು ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕಾಮಗಾರಿಯ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಆದರೆ ಆ ಇಲಾಖೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ತನಿಖಾ ವರದಿ ಬಂದ ಬಳಿಕ ಕ್ರಮ ಆಗುತ್ತದೆ ಎಂದರು. ಸಿಎಂ ಕೂಡ ಬಂದಾಗ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಮುಗಿಸುವುದಾಗಿ ಹೇಳಿದ್ದರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಇದುವರೆಗೆ ನಾಲ್ಕೈದು ಡೇಟ್ ಕೊಟ್ಟು ಕಾಮಗಾರಿ ಮುಗಿದಿಲ್ಲ. ಆದರೆ ಈ ಬಾರಿ ಹಾಗೆ ಆಗುವುದಿಲ್ಲ, ಏಪ್ರಿಲ್ ಅಂತ್ಯದೊಳಗೆ ಕಾಮಗಾರಿ ಮುಗಿಯಲಿದೆ. ಕಾಮಗಾರಿಗೆ ಹೆಚ್ಚಿನ ಅನುದಾನ ಬೇಕು ಎಂದು ಅಧಿಕಾರಿಗಳು ಹೆಚ್ಚಿನ ಅನುದಾನ ಕೇಳಿದ್ದಾರೆ. ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸಿ ಅನುದಾನ ಕೊಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.