ಈ ಬಾರಿ ಬಿಜೆಪಿಗೆ ಲಿಂಗಾಯತ ವೋಟ್‌ಗಳ ಬಗ್ಗೆ ಖಂಡಿತಾ ಆತಂಕವಿಲ್ಲ ಎಂದಿರುವ ಅಮಿತ್ ಶಾ, ಬೇರೆಲ್ಲಾ ಸಮುದಾಯಗಳಿಗಿಂತ ಫಲಾನುಭವಿಗಳ ಸಮುದಾಯವೇ ಈ ಬಾರಿಯ ನಮ್ಮ ವೋಟರ್‌ಗಳು ಎಂದಿದ್ದಾರೆ.
ಬೆಂಗಳೂರು (ಏ.30): ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಪಕ್ಷವನ್ನು ತೊರೆದ ಬಳಿಕ ಬಿಜೆಪಿಗೆ ದೊಡ್ಡ ಆತಂಕ ಎದುರಾಗಿದ್ದು, ಲಿಂಗಾಯತ ಮತ ಬ್ಯಾಂಕ್ ಬಗ್ಗೆ. ಈ ಬಗ್ಗೆಯೂ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ಅಜಿತ್ ಹನುಮಕ್ಕನವರ್ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರಶ್ನೆ ಮಾಡಿದರು. ಇದಕ್ಕೆ ಒಂದೇ ಮಾತಿನಲ್ಲಿ ಉತ್ತರ ನೀಡಿದ ಅಮಿತ್ ಶಾ, ಕಾಂಗ್ರೆಸ್ ಏನು ಮಾಡಿದೆ ಅಂತಾ ಲಿಂಗಾಯತರು ಅವರಿಗೆ ವೋಟ್ ಹಾಕ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. 'ನಿಮಗೆ ಲಿಂಗಾಯತ ವೋಟ್ ಬ್ಯಾಂಕ್‌ನ ಟೆನ್ಷನ್ ಇದೆ ಅನಿಸುತ್ತೆ?' ಎನ್ನುವ ಪ್ರಶ್ನೆಗೆ, 'ಸ್ವಲ್ಪವೂ ಟೆನ್ಷನ್ ಇಲ್ಲ.. ಕಾಂಗ್ರೆಸ್ ಏನು ಮಾಡಿದೆ ಅಂತಾ ಲಿಂಗಾಯತರು ಅವರಿಗೆ ವೋಟ್ ಹಾಕ್ತಾರೆ? ಕಾಂಗ್ರೆಸ್ 70 ವರ್ಷಗಳಲ್ಲಿ ಇಬ್ಬರು ಲಿಂಗಾಯತ ಮುಖ್ಯಮಂತ್ರಿಗಳನ್ನ ನೀಡಿದೆ. ಇಬ್ಬರನ್ನು ಅವಮಾನಿಸಿ ತೆಗೆದು ಹಾಕಿದ್ರು. ಒಬ್ಬರನ್ನ ಇಂದಿರಾ ಗಾಂಧಿ ತೆಗೆದು ಹಾಕಿದ್ರು.. ವೀರೇಂದ್ರ ಪಾಟೀಲ್ ಅವರನ್ನ ರಾಜೀವ್ ಗಾಂಧಿ ಏರ್ಪೋರ್ಟ್ನಲ್ಲೇ ತೆಗೆದು ಹಾಕಿದ್ರು. ನಮ್ಮ ಮುಖ್ಯಮಂತ್ರಿ ಲಿಂಗಾಯತರೇ, ಯಡಿಯೂರಪ್ಪರಂತಹ ಮಹಾನ್ ನಾಯಕರು ನಮ್ಮೊಂದಿಗೆ ಇದ್ದಾರೆ. ನಮ್ಮ ಜೊತೆ ಒಂದು ಬಲವಾದ ಅನುಭಂದವಿದೆ. ಲಿಂಗಾಯತ ಟೆನ್ಷನ್ ಎಂಬ ಪ್ರಶ್ನೆಯೇ ಉದ್ಬವಿಸೋದಿಲ್ಲ' ಎಂದು ಹೇಳಿದರು.
ಯಡಿಯೂರಪ್ಪರನ್ನ ನೀವು ತೆಗೆದ್ರೋ? ಅವರೇ ಬಿಟ್ಟರೋ ಅದು ಈಗ ಪ್ರಶ್ನೆಯಲ್ಲ.. ಅದು ತಪ್ಪು ನಿರ್ಧಾರ ಅನಿಸುತ್ತಾ ನಿಮಗೆ? ಎನ್ನುವ ಪ್ರಶ್ನೆಗೆ, 'ಸ್ವಲ್ಪವೂ ಇಲ್ಲ, ಯಡಿಯೂರಪ್ಪ ಅವರೇ ಸ್ವತಃ ನನಗೆ ಹೇಳಿದ್ದರು. ಪಾರ್ಟಿಯಲ್ಲಿ 75 ವರ್ಷದ ನಿಯಮವಿದೆ. ಪಾರ್ಟಿ ಯಾವಾಗ ಹೇಳುತ್ತೋ, ಆಗ ನಾನು ಬಿಡುತ್ತೇನೆ. ನಾವೇನು ನಿರ್ಧಾರ ಮಾಡಿರಲಿಲ್ಲ. ಆಗ ಸ್ವಲ್ಪ ಸಮಯ ಮುಂದೆ ಹೋಯ್ತು ಎಂದರು.
ಯಾವುದೇ ಬದಲಾವಣೆಗೆ ಒಂದು ಉದ್ದೇಶ ಖಂಡಿತಾ ಇರುತ್ತದೆ, ಈ ವಿಚಾರದಲ್ಲಿ ಉದ್ದೇಶ ಸಾಧನೆಯಾಯ್ತಾ? ಎನ್ನುವ ಪ್ರಶ್ನೆಗೆ, 'ಬದಲಾವಣೆಯ ಉದ್ದೇಶವಲ್ಲ, ಸಿಎಂ ಮಾಡಿಬಿಟ್ಟು ಮುಂದುವರೆಸಿಕೊಂಡು ಹೋಗೋ ಪಾರ್ಟಿಯಲ್ಲ, ಹಾಗಾದ್ರೆ ಸಾವಿರಾರು ಕಾರ್ಯಕರ್ತರು ಚುನಾವಣೆಗೆ ನಿಲ್ಲೋದೇ ಇಲ್ವಲ್ಲ, ದೊಡ್ಡ ನಾಯಕರಾಗ್ತಾರೆ. ಉದಾಹರಣೆಗೆ ಕುಶ್ಬಾಹು ಠಾಕ್ರೆ ಅವರು. ಯಾವುದೇ ಚುನಾವಣೆಗೆ ನಿಲ್ಲಲಿಲ್ಲ. ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಹಲವು ರಾಜ್ಯಗಳಲ್ಲಿ ತುಂಬಾ ಕಾರ್ಯಕರ್ತರಿದ್ದಾರೆ ಚುನಾವಣೆಗಳಲ್ಲಿ ಸ್ಪರ್ಧಿಸೋದೇ ಇಲ್ಲ.. ಹಾಗಂತ ಅವರ ಕೊಡುಗೆಯೇ ಇಲ್ಲ ಅಂತ ಅಲ್ಲ. ಯಡಿಯೂರಪ್ಪ ಸ್ವತಃ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ನೀವು ಖುಷಿಯಾಗಬೇಡಿ ಅಂತ ಹೇಳಿದ್ದರು. ಈ ಬಾರಿಯೂ ಸೋಲಿಸಿದ್ದೀನಿ.. ಮುಂದಿನ ಬಾರಿಯೂ ನಾವು ನಿಮ್ಮನ್ನ ಸೋಲಿಸ್ತೀವಿ ಅಂದ್ರು. ಒಂದು ಉತ್ಸಾಹದಲ್ಲಿ ಯಡಿಯೂರಪ್ಪ ಈ ಚುನಾವಣೆಯ ನೇತೃತ್ವ ವಹಿಸಿದ್ದಾರೆ' ಎಂದು ಬಿಎಸ್‌ವೈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಬಾರಿ ಕರ್ನಾಟಕದಲ್ಲಿ ಅಭಿವೃದ್ಧಿಯೇ ಚುನಾವಣೆ ವಿಷಯ ಅಂತಾ ನಿಮಗೆ ಅನಿಸುತ್ತಾ ಎನ್ನುವ ಪ್ರಶ್ನೆಗೆ, 'ತುಂಬಾ ಚರ್ಚೆಗಳಿವೆ.. ಸರ್ಜಿಕಲ್ ಸ್ಟ್ರೈಕ್‌ನಿಂದ ಖುಷಿಯಾಗಿದ್ದಾರೆ. ವಿಶ್ವದಲ್ಲಿ ಭಾರತದ ಸ್ಥಾನಮಾನದ ಬಗ್ಗೆ ಖುಷಿಯಾಗಿದ್ದಾರೆ. ಅಂತರಿಕ್ಷದಲ್ಲಿ ಭಾರತದ ಸಾಧನೆ ಬಗ್ಗೆಯೂ ಖುಷಿಯಾಗಿದ್ದಾರೆ. ಆದರೆ, ಕಾಂಗ್ರೆಸ್‌ಗೆ ವೋಟ್ ಹಾಕಲು ಕಾರಣಗಳು ಏನಿವೆ ತಿಳಿಸಿ' ಎಂದರು.
ಕಾಂಗ್ರೆಸ್‌ನ ವಿಷ ನುಂಗಿ, ಪ್ರಧಾನಿ ವಿಷಕಂಠ ಆಗಿದ್ದಾರೆ : ಚೌವ್ಹಾಣ್
ಕರ್ನಾಟಕದ ಮತದಾರ ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬದಲಿಸುತ್ತಾನಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಆ ತರ ಏನಿಲ್ಲ. ಒಮ್ಮೆ ಜನತಾದಳ ಸರ್ಕಾರ ಮೂರು ಸಲ ಹಿಂದಿಂದೆಯೇ ಆಯ್ಕೆ ಆಗಿದೆ. ಕಾಂಗ್ರೆಸ್ನ ಸರ್ಕಾರವು ಸತತವಾಗಿ 4 ಬಾರಿ ಆಯ್ಕೆ ಆಗಿದೆ' ಎಂದರು.
91 ಬಾರಿ ನನ್ನ ನಿಂದಿಸಿ ಇದೀಗ ಲಿಂಗಾಯಿತರನ್ನು ಕಳ್ಳರೆಂದು ಅವಮಾನಿಸಿದೆ; ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!
ಟ್ರೆಡಿಷನಲ್ ಎಲೆಕ್ಷನ್ ಅನಾಲಿಸಿಸ್ ಮೂಲಕ ನೋಡೋದಾದರೆ, ಮೋದಿಯವರ 9 ವರ್ಷದ ಕಾರ್ಯಕ್ರಮಗಳಿಂದಲೇ ಹೊಸ ಸಮುದಾಯ ಹುಟ್ಟಿಕೊಂಡಿದೆ. ಆ ಸಮುದಾಯದ ಹೆಸರು ಫಲಾನುಭವಿಗಳ ಸಮುದಾಯ, ಕರ್ನಾಟಕದಲ್ಲಿ ಸುಮಾರು 4.10 ಲಕ್ಷ ಜನರಿಗೆ ಮನೆ ಸಿಕ್ಕಿದೆ. ನಾನು ಅವರಲ್ಲಿ ಕೆಲವರನ್ನ ಭೇಟಿ ಮಾಡಿದೆ. ಅವರು ಹೇಳಿದ್ರು 60 ವರ್ಷಗಳ ನಂತರ ನಮಗೆ ಮನೆ ಸಿಕ್ಕಿದೆ ಅಂತ. ಅದರಲ್ಲೂ ವಿಶೇಷವಾಗಿ ಬಂಜಾರ ಸಮುದಾಯಕ್ಕೆ 60 ನಂತರ ಮನೆ ಸಿಕ್ಕಿದೆ. ಕರ್ನಾಟಕದಲ್ಲಿ ಸುಮಾರು 43 ಲಕ್ಷ ಜನರಿಗೆ ಜಲಜೀವನ್ ಮಿಷನ್‌ನಿಂದ ಜೀವನದಲ್ಲಿ ಮೊದಲ ಬಾರಿಗೆ ನಲ್ಲಿ ನೀರು ಸಿಕ್ಕಿದೆ. ಶುದ್ದ ನೀರು ಕುಡಿಯುತ್ತಿದ್ದಾರೆ. ಕರ್ನಾಟಕದಲ್ಲಿ 48 ಲಕ್ಷ ಕುಟುಂಬಗಳಿಗೆ 70 ವರ್ಷಗಳಿಂದ ಶೌಚಾಲಯವಿರಲಿಲ್ಲ. ಅವರಿಗೆಲ್ಲ ಮೊದಲ ಬಾರಿಗೆ ಶೌಚಾಲಯ ಸಿಕ್ಕಿದೆ. ಕರ್ನಾಟಕದಲ್ಲಿ ಕಿಸಾನ್ ಸಮ್ಮಾನ್ ನಿಧಿಯಲ್ಲಿ 54 ಲಕ್ಷ ರೈತರಿಗೆ ಪ್ರತಿ ವರ್ಷ 10 ಸಾವಿರ ಬ್ಯಾಂಕ್ ಖಾತೆಗೆ ತಲುಪುತ್ತಿದೆ.. ಯಾವುದೇ ಕಮಿಷನ್ ಇಲ್ಲದೆ ಇವೆಲ್ಲವೂ ಸಿಕ್ಕಿದೆ ಎಂದಿದ್ದಾರೆ.