*ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಪ್ರತಿಭಟನೆ
* ಪ್ರತಿಭಟನೆ ಮಾಡಿದವರ ವಿರುದ್ಧ ಸಚಿವ ಅಶ್ವತ್ಥ್ ನಾರಾಯಣ ಕೆಂಡಾಮಂಡಲ
* ರಾಜಕೀಯ ಮಾಡಬೇಕೆನ್ನುವವರು ಪಕ್ಷದ ಬ್ಯಾನರ್ ಇಟ್ಟುಕೊಂಡೇ ಪ್ರತಿಭಟನೆ ಮಾಡಬಹುದಿತ್ತು ಎಂದ ಟಾಂಗ್
ಬೆಂಗಳೂರು, (ಮಾ.13): ಮಲ್ಲೇಶ್ವರಂ ಕ್ಷೇತ್ರದಲ್ಲಿ ನಡೆಯುತ್ತಿರುವ ದೂರದೃಷ್ಟಿಯ ಅಭಿವೃದ್ಧಿ ಕಾಮಗಾರಿಗಳ ವಿರುದ್ಧ ಪ್ರತಿಭಟಿಸುತ್ತಿರುವ ಶಕ್ತಿಗಳ ಹಿಂದೆ ರಾಜಕೀಯ ದುರುದ್ದೇಶವಿದೆ. ಇದಕ್ಕೆ ಕ್ಷೇತ್ರದ ಜನರು ಸೊಪ್ಪು ಹಾಕಲ್ಲ' ಎಂದು ಸ್ಥಳೀಯ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ(Dr CN Ashwath Naraan) ಹೇಳಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಚಟುವಟಿಕೆಗಳಿಂದ (Development Workes) ಸಾರ್ವಜನಿಕರಿಗೆ ಅಡಚಣೆಯಾಗುತ್ತಿದೆ ಎಂದು ಭಾನುವಾರ ಕೆಲವರು ನಡೆಸಿರುವ ಪ್ರತಿಭಟನೆಯ ಸಂಬಂಧ ಅವರು ಹೀಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮಲ್ಲೇಶ್ವರಂನ 13 ಸರಕಾರಿ ಶಾಲೆಗಳ ಮಕ್ಕಳಿಗೆ ದೈಹಿಕ ಶಿಕ್ಷಣಕ್ಕೆ ಹೊಸ ವ್ಯವಸ್ಥೆ: ಅಶ್ವತ್ಥನಾರಾಯಣ
ರಾಜಕೀಯ ಮಾಡಬೇಕೆನ್ನುವವರು ಪಕ್ಷದ ಬ್ಯಾನರ್ ಇಟ್ಟುಕೊಂಡೇ ಪ್ರತಿಭಟನೆ ಮಾಡಬಹುದಿತ್ತು. ಪಕ್ಷದ ಬಾವುಟವನ್ಜು ಪಕ್ಕಕ್ಕೆ ಸರಿಸಿ, ಸ್ಥಳೀಯ ನಿವಾಸಿಗಳ ಹೆಸರಿನಲ್ಲಿ ಪ್ರತಿಭಟನೆ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ಮಲ್ಲೇಶ್ವರಂ ಕ್ಷೇತ್ರ 15 ವರ್ಷಗಳ ಹಿಂದೆ ಹೇಗಿತ್ತು? ಈಗ ಹೇಗಾಗಿದೆ ಎನ್ನುವುದನ್ನು ಇತಿಹಾಸದ ಪುಟಗಳನ್ನು ನೋಡಿ ಅರ್ಥ ಮಾಡಿಕೊಳ್ಳಬೇಕು. ಕುಡಿಯುವ ನೀರಿಗೆ ಬರ ಇತ್ತು, ಒಳಚರಂಡಿ ವ್ಯವಸ್ಥೆ ಹದಗೆಟ್ಟಿತ್ತು. ಇದ್ದ ಮೈದಾನಗಳು ಒಂದು ರೀತಿ ಡ್ರೈವಿಂಗ್ ಶಾಲೆಗಳಾಗಿದ್ದವು. ತಿಂಗಳುಗಟ್ಟಲೇ ವಸ್ತು ಪ್ರದರ್ಶನಗಳು ನಡೆಯುತ್ತಿದ್ದ ಮೈದಾನಗಳು ವರ್ಷದಲ್ಲಿ ಕೆಲ ದಿನ ಕೂಡ ಮಕ್ಕಳ ಆಟಕ್ಕೆ ಸಿಗುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬೇರೆಯೇ ಇದೆ. ವಾಸ್ತವ ತಿಳಿಯದೆ ರಾಜಕೀಯ ದುರುದ್ದೇಶದ ಇಂತಹ ಪ್ರತಿಭಟನೆಗಳು ಜನ ವಿರೋಧಿಯಾಗಿವೆ' ಎಂದು ಅವರು ಟೀಕಿಸಿದ್ದಾರೆ.
ಕ್ಷೇತ್ರದಲ್ಲಿ ಒಳಚರಂಡಿ ಕೊಳವೆ 60-70 ವರ್ಷಗಳಷ್ಟು ಹಳೆಯದಾಗಿದ್ದು ಶಿಥಿಲವಾಗಿದ್ದವು. ಜತೆಗೆ, ಇಲ್ಲಿನ ಮ್ಯಾನ್ ಹೋಲುಗಳು ಕೂಡ ತೀರಾ ಹಳೆಯದಾಗಿದ್ದು, ಸರಾಗವಾಗಿ ತ್ಯಾಜ್ಯ ನೀರು ಹರಿದು ಹೋಗುತ್ತಿರಲಿಲ್ಲ. ಈಗ ಇವೆಲ್ಲವನ್ನೂ ಬದಲಿಸಿ, ಹೊಸ ಕೊಳವೆ ಮತ್ತು ಪ್ರೀಕಾಸ್ಟ್ ಮ್ಯಾನ್-ಹೋಲುಗಳನ್ನು ಇಡೀ ಕ್ಷೇತ್ರದಲ್ಲಿ ಅಳವಡಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಬೇಕೆಂದರೆ ರಸ್ತೆ ಅಗೆಯುವುದು ಅನಿವಾರ್ಯವಾಗುತ್ತದೆ. ಆದರೆ, ಕ್ಷೇತ್ರದಲ್ಲಿ ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ, ಕೂಡಲೇ ಗುಂಡಿಗಳನ್ನು ಮುಚ್ಚಿಸಲಾಗುತ್ತಿದೆ ಎಂದು ಅಶ್ವತ್ಥ ನಾರಾಯಣ ಸ್ಪಷ್ಟನೆ ಕೊಟ್ಟಿದ್ದಾರೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸ್ಯಾಂಕಿ ಕೆರೆಯನ್ನು ವಾಯುವಿಹಾರಿಗಳ ಪಾಲಿಗೆ ಅತ್ಯುತ್ತಮ ತಾಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇವೆಲ್ಲ ಚಟುವಟಿಕೆಗಳನ್ನು ಸ್ಯಾಂಕಿ ಟ್ಯಾಂಕ್ ವಾಯುವಿಹಾರಿಗಳ ಸಂಘವನ್ನು ವಿಶ್ವಾಸಕ್ಕೆ ತೆಗೆದು ಕೊಂಡೇ ಮಾಡಲಾಗುತ್ತಿದ್ದು, ಒಂದು ತಿಂಗಳಲ್ಲಿ ಬಹುತೇಕ ಕಾಮಗಾರಿ ಪೂರ್ಣ ಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.