ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು 60% ಕಮಿಷನ್ ಪಡೆಯುತ್ತಿದೆ ಮತ್ತು ಗುತ್ತಿಗೆದಾರರಿಗೆ ಬಾಕಿ ಹಣವನ್ನು ಪಾವತಿಸದ ಕಾರಣ ಅವರು ದಯಾಮರಣಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರು (ಜ.07): ನಮ್ಮ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮನೆಹಾಳ ಸರ್ಕಾರ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು 60% ಕಮಿಷನ್ ಪಡೆಯುತ್ತಿದೆ ಮತ್ತು ಗುತ್ತಿಗೆದಾರರಿಗೆ ಬಾಕಿ ಹಣವನ್ನು ಪಾವತಿಸದ ಕಾರಣ ಅವರು ದಯಾಮರಣಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಮಾಚಲ ಪ್ರದೇಶದಂತೆ ಕರ್ನಾಟಕ ಕೂಡ ಅಧೋಗತಿಗೆ ಹೋಗುತ್ತಿದೆ. ಈ ಸರ್ಕಾರ 60% ಕಮೀಷನ್ ಪಡೆಯುವ ಸರ್ಕಾರವಾಗಿದೆ. ಬೆಂಗಳೂರಿನಲ್ಲಿ ಮನೆ ಕಟ್ಟುವಾಗ 30-40 ಸೈಟ್‌ಗೆ ಮನೆ ಕಟ್ಟಲು ಅನುಮತಿ ಪಡೆಯಬೇಕೆಂದರೆ 10 ಲಕ್ಷ ರೂ. ಕಮೀಷನ್ ಕೊಡಬೇಕು. ಇನ್ನು 60-40 ಅಡಿ ನಿವೇಶನದಲ್ಲಿ ಮನೆ ಕಟ್ಟುವುದಕ್ಕೆ ಅನುಮತಿ ಪಡೆಯಲು 20 ಲಕ್ಷ ರೂ. ಕಮೀಷನ್ ಕೊಡಬೇಕು. ಇನ್ನು ಅಪಾರ್ಟ್‌ಮೆಂಟ್ ನಿರ್ಮಾಣದ ಅನುಮತಿಗೆ ಶೇ.15 ಪರ್ಸೆಂಟ್ ಕಮಿಷನ್ ಕೊಡಬೇಕು. ಕಳೆದ 6 ತಿಂಗಳ ಹಿಂದೆಯೆ ಈ ರೇಟ್ ಫಿಕ್ಸ್ ಆಗಿದೆ ಎಂದು ಆರೋಪ ಮಾಡಿದರು.
ಸರ್ಕಾರದ ಬಳಿ ಹಣ ಇಲ್ಲ. ಹೀಗಾಗಿ, ತಾವು ಮಾಡಿದ ಕೆಲಸದ ಬಿಲ್ ಬಾರದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ದಯಮರಣಕ್ಕೆ ಅರ್ಜಿ ಹಾಕಿದ್ದಾರೆ. ರಾಜ್ಯದ ಗುತ್ತಿಗೆದಾರರಿಗೆ ಕೊಡಬೇಕಾಗಿರುವ 32,000 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಇಂದಿನಿಂದ ಆಶಾ ಕಾರ್ಯಕರ್ತೆರು ಹೋರಾಟ ಮಾಡುತ್ತಿದ್ದಾರೆ. ಸರ್ಕಾರದ ಬಳಿ ರೈತರು ಬೆಳೆದ ತೊಗರಿ ಖರೀದಿಗೆ ಹಣ ಇಲ್ಲ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಪ್ರಕಾರ ಇಲ್ಲಿ ತನಕ ಖರ್ಚು ಮಾಡಿದ್ದೆ ಶೇ.55 ಮಾತ್ರ ಖರ್ಚು ಮಾಡಿದೆ. ಇನ್ನು ಮುಂದಿನ ಬಜೆಟ್ ಮಂಡನೆಗೆ ಕೇವಲ 2 ತಿಂಗಳು ಬಾಕಿ ಇದ್ದರೂ ಶೇ.45 ಅನುದಾನ ಹಂಚಿಕೆಯನ್ನು ಬಾಕಿ ಉಳಿಸಿಕೊಂಡಿದೆ. ಇದು ಮನೆಹಾಳ ಸರ್ಕಾರ ಎಂಬುದಕ್ಕೆ ಇದಿಷ್ಟು ಸಾಕ್ಷಿ ಸಾಕು. ಸಿದ್ದರಾಮಯ್ಯ ಬಜೆಟ್‌ನಲ್ಲಿ ಎಷ್ಟು ಮೋಸ ಮಾಡಿದ್ದಾರೆ ನೀವೇ ನೋಡಿ ಎಂದು ಹೇಳಿದರು.
ಇದನ್ನೂ ಓದಿ: ಡಿನ್ನರ್‌ಗೆ ಎಲ್ಲರನ್ನೂ ಏಕೆ ಕರೀಲಿಲ್ಲ ಅಂತ ಜಾರಕಿಹೊಳಿ ಕೇಳಿ: ಸಿದ್ದರಾಮಯ್ಯ
ಕಾಂಗ್ರೆಸ್‌ನವರು ಮಾತೆತ್ತಿದ್ದರೆ ಸಂವಿಧಾನ ಪುಸ್ತಕ ಹಿಡ್ಕೊತಾರೆ. ಸ್ವತಃ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿ, ಅವರ ಅಂತ್ಯಸಂಸ್ಕಾರಕ್ಕೆ ಇವರು ಜಾಗ ನೀಡಿಲ್ಲ. ಆದರೂ, ಅವರು ಬರೆದ ಸಂವಿಧಾನ ಪುಸ್ತಕ ಹಿಡ್ಕೊಂಡು ಓಡಾಡುತ್ತಾರೆ. ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಸ್ವಯಂ ಉದ್ಯೋಗ ಯೋಜನೆಗೆ ನಾವು 100 ಕೋಟಿ ರೂ. ನೀಡಿದ್ದೆವು. ಆದರೆ, ಅದರ ಪೂರ್ತಿ ಹಣವನ್ನು ಕೊಡದ ಕಾಂಗ್ರೆಸ್ ಕೇವಲ 45 ಕೊಟಿ ರೂ. ಹಣವನ್ನು ಮಾತ್ರ ಕೊಟ್ಟಿದೆ ಎಂದು ಹೇಳಿದರು.
ಸ್ವಯಂ ಉದ್ಯೋಗಕ್ಕೆ ಭೋವಿ ನಿಗಮಕ್ಕೆ ಬಿಜೆಪಿ 90 ಕೋಟಿ ರೂ. ಅನುದಾನ ನೀಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರ 55 ಕೋಟಿ ರೂ. ಕೊಟ್ಟಿದೆ. ಇನ್ನು ದೇವರಾಜ್ ಅರಸು ನಿಗಮಕ್ಕೆ ನಾವು 165 ಕೋಟಿ ರೂ. ಕೊಟ್ಟಿದ್ದೆವು. ಆದರೆ, ಇವರು ಕೇವಲ 100 ಕೋಟಿ ರೂ. ಕೊಟ್ಟಿದ್ದಾರೆ. ಮುಖ್ಯವಾಗಿ ಸಂಗ್ಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ 106 ಕೋಟಿ ರೂ. ಅನುದಾನ ಕೊಟ್ಟಿದ್ದೆವು. ಆದರೆ, ಸ್ವತಃ ಕುರುಬ ಸಮುದಾಯದ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಕೇವಲ 66 ಕೋಟಿ ರೂ. ಹಣವನ್ನು ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೊಟ್ಟಿದ್ದಾರೆ ಎಂದು ಆರ್. ಅಶೋಕ್ ಮಾಹಿತಿ ನೀಡಿದರು.
ಇದನ್ನೂ ಓದಿ: ಭಾಗ್ಯಲಕ್ಷ್ಮಿ, ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಕಾಂಗ್ರೆಸ್ ಪಕ್ಷ ನೀಡಿದ್ದಾ: ಬೊಮ್ಮಾಯಿ ಪ್ರಶ್ನೆ