ಬಿಜೆಪಿಯಲ್ಲಿ ಸಾಧ್ಯವಾಗದನ್ನ ಸಿದ್ದರಾಮಯ್ಯ ಸರ್ಕಾರ ಮಾಡಿ ತೋರಿಸಿದೆ: ಅಶೋಕ ಪಟ್ಟಣ

Published : Feb 25, 2024, 08:49 PM IST
ಬಿಜೆಪಿಯಲ್ಲಿ ಸಾಧ್ಯವಾಗದನ್ನ ಸಿದ್ದರಾಮಯ್ಯ ಸರ್ಕಾರ ಮಾಡಿ ತೋರಿಸಿದೆ: ಅಶೋಕ ಪಟ್ಟಣ

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ಮಂಜೂರಾಗಿದ್ದ ಸುರೇಬಾನ ಪೊಲೀಸ್‌ ಠಾಣೆ ಉದ್ಘಾಟನೆ ಬಿಜೆಪಿ ಸರ್ಕಾರದಲ್ಲಿ ಸಾಧ್ಯವಾಗಲಿಲ್ಲ. ಈಗ ಸಿಎಂ ಸಿದ್ದರಾಮಯ್ಯನವರ ಎರಡನೇ ಅವಧಿಯಲ್ಲಿ ಠಾಣೆ ಉದ್ಘಾಟನೆಗೊಳ್ಳುತ್ತಿದೆ. ಇದು ಕಾಂಗ್ರೆಸ್‌ನ ಅಭಿವೃದ್ಧಿಯ ಬದ್ಧತೆ ತೋರಿಸುತ್ತದೆ: ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ

ರಾಮದುರ್ಗ(ಫೆ.25):  ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ ಮಂಜೂರಾಗಿದ್ದ ಸುರೇಬಾನ ಪೊಲೀಸ್‌ ಠಾಣೆ ಉದ್ಘಾಟನೆ ಬಿಜೆಪಿ ಸರ್ಕಾರದಲ್ಲಿ ಸಾಧ್ಯವಾಗಲಿಲ್ಲ. ಈಗ ಸಿಎಂ ಸಿದ್ದರಾಮಯ್ಯನವರ ಎರಡನೇ ಅವಧಿಯಲ್ಲಿ ಠಾಣೆ ಉದ್ಘಾಟನೆಗೊಳ್ಳುತ್ತಿದೆ. ಇದು ಕಾಂಗ್ರೆಸ್‌ನ ಅಭಿವೃದ್ಧಿಯ ಬದ್ಧತೆ ತೋರಿಸುತ್ತದೆ ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ತಾಲೂಕಿನ ಸುರೇಬಾನದಲ್ಲಿ ಶನಿವಾರ ನೂತನ ಪೊಲೀಸ್‌ ಠಾಣೆಯನ್ನು ಉದ್ಘಾಟಿಸಿ ಮಾತನಾಡಿ, ಅಪರಾಧಗಳು ಹೆಚ್ಚಿರುವ ಕಡೆ ಪೊಲೀಸ್‌ ಠಾಣೆ ನಿರ್ಮಿಸಬೇಕು ಎಂದು ಸರ್ಕಾರದ ನಿಯಮ ಇದೆ. ಆದರೆ, ಇದು ಜನಸಂಖ್ಯೆ ಆಧಾರಿತ ಹೊಸ ಪೊಲೀಸ್‌ ಠಾಣೆಯಾಗಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಅಭಿವೃದ್ಧಿಯಲ್ಲಿ ಎಂದೂ ರಾಜಕೀಯ ಮಾಡುವುದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ರಾಮದುರ್ಗ ಠಾಣೆಗೆ ಹೆಚ್ಚುವರಿ ಕೆಲಸಗಳು ಬೀಳುತ್ತಿದ್ದವು. ಸುಮಾರು 30 ಕಿ.ಮೀ. ದೂರ ಕ್ರಮಿಸಿ ಠಾಣೆಗೆ ದೂರುಗಳನ್ನು ದಾಖಲಿಸಲು ಜನರು ಪರದಾಡುತ್ತಿದ್ದರು. ನೂತನ ಠಾಣೆಯಿಂದ ಜನರಿಗೆ ನೆಮ್ಮದಿಯುಂಟಾಗಿದ್ದು, ಒಂದು ವರ್ಷದೊಳಗಾಗಿ ಠಾಣೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಅಲ್ಲಲ್ಲಿಯೇ ಇತ್ಯರ್ಥ ಮಾಡಿಕೊಳ್ಳುವುದು ರೂಢಿಯಾಗಿದೆ. ಅಸಹಜ ಸಾವು ಸಂಭವಿಸಿದರೂ ಪ್ರಕರಣ ದಾಖಲಿಸಿ ಗ್ರಾಮಸ್ಥರಿಗೆ ನ್ಯಾಯ ದೊರಕಿಸಿಕೊಡಲು ಗ್ರಾಮಸ್ಥರೇ ಮುಂದಾಗಬೇಕು. ಅಪರಾಧ ಪ್ರಕರಣಗಳಲ್ಲಿ ಪೊಲೀಸ್‌ರ ಮೇಲೆ ಒತ್ತಡ ತರುವುದಿಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮಾತನಾಡಿ, ಶಾಂತ, ಸುವ್ಯವಸ್ಥಿತ ಸಮಾಜ ನಿರ್ಮಿಸಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಎಲ್ಲರೂ ಸೇರಿ ಶಾಂತಿಯುತ ಸುಂದರ ಸಮಾಜ ನಿರ್ಮಿಸಲು ಪ್ರಯತ್ನಿಸೋಣ ಎಂದು ಹೇಳಿದರು.

ಜಿಲ್ಲೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಒಟ್ಟು 804 ಜನ ಜೀವ ಕಳೆದುಕೊಂಡಿದ್ದಾರೆ. ಅದರಲ್ಲಿ ಹೆಲ್ಮೆಟ್‌ ಧರಿಸದ ಬೈಕ್‌ ಸವಾರರ ಸಾವಿನ ಸಂಖ್ಯೆ 404 ರಷ್ಟಿದೆ. ಪೊಲೀಸರು ಯಾವುದೇ ಕಾನೂನು ಜಾರಿ ಮಾಡುವುದು ಜನರ ಪ್ರಾಣರಕ್ಷಣೆಗಾಗಿ ಹೊರತು ಕೇವಲ ದಂಡ ವಸೂಲಿ ಮಾಡುವುದಲ್ಲ ಎಂದರು.

ಲೋಕಸಭಾ ಚುನಾವಣೆಗೆ ನಮ್ಮ ಕುಟುಂಬದ ಯಾರೂ ಸ್ಪರ್ಧಿಸಲ್ಲ: ಸಚಿವ ಸತೀಶ ಜಾರಕಿಹೊಳಿ

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶೃತಿ ಎನ್.ಎಸ್., ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಬೈಕ್‌ ಅಪಘಾತಗಳು ಜರುಗಿ ಜನ ಸಾವನ್ನಪ್ಪುತ್ತಿದ್ದಾರೆ. ಬೈಕ್‌ ಸವಾರ ಮತ್ತು ಹಿಂಬದಿ ಸವಾರ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಲು ಸೂಚಿಸಿದರು.

ಅವರಾದಿ ಮಠದ ಶಿವಮೂರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಪರಪ್ಪ ಜಂಗವಾಡ ಪ್ರಸ್ತಾವಿಕ ಮಾತನಾಡಿದರು. ಮುಳ್ಳೂರಿನ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಮನಿಹಾಳದ ಗುರುದೇವ ಸಮರ್ಥ ಶಿವಾನಂದ ಸ್ವಾಮೀಜಿ, ತಹಸೀಲ್ದಾರ ಸುರೇಶ ಚವಲಾರ, ತಾಲೂಕು ಪಂಚಾಯತಿ ಇಒ ಬಸವರಾಜ ಐನಾಪೂರ, ಡಿವೈಎಸ್‌ಪಿ ಎಂ. ಪಾಂಡುರಂಗಯ್ಯ, ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಸುಣಗಾರ ಸೇರಿದಂತೆ ನೂರಾರು ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಿಪಿಐ ಈರಣ್ಣ ಪಟ್ಟಣಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಮಾರುತಿ ಜಂಗವಾಡ ಕಾರ್ಯಕ್ರಮ ನಿರೂಪಿಸಿದರು. ಸುರೇಬಾನ ಪಿಎಸ್‌ಐ ಎಸ್.ಎಚ್. ಪವಾರ ವಂದಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಂದಿನಿಂದ ಕಾವೇರಲಿದೆ ಉತ್ತರ ಕರ್ನಾಟಕದ ಚರ್ಚೆ-3 ದಿನ ವಿಧಾನಮಂಡಲದಲ್ಲಿ ಈ ಬಗ್ಗೆ ಕಲಾಪ
ಅಧಿವೇಶನದಲ್ಲಿ ನಾವು ರಾಜ್ಯದ ರೈತರಿಗೋಸ್ಕರ ಹೋರಾಡುತ್ತೇವೆ: ಆರ್‌.ಅಶೋಕ್‌