ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ ಎಂದು ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಮಂಡ್ಯ (ಜೂ.30): ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ ಎಂದು ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು. ಚಂದ್ರಶೇಖರ್ ಸ್ವಾಮೀಜಿಯ ಅಭಿಪ್ರಾಯ ಅವರ ವೈಯಕ್ತಿಕ. ಈಗ ಸಿದ್ದರಾಮಯ್ಯ ಸಿಎಂ ಖುರ್ಚಿಯಲ್ಲಿ ಕುಳಿತಿದ್ದಾರೆ. ಸಿಎಂ ಖುರ್ಚಿ ಖಾಲಿ ಎಲ್ಲಿದೆ?. ಖಾಲಿ ಇರುವಾಗ ಚರ್ಚೆ ಮಾಡಬೇಕು. ಖಾಲಿ ಇಲ್ಲದಿರುವಾಗ ಚರ್ಚೆ ಅಗತ್ಯವಿಲ್ಲ. ಸ್ವಾಮೀಜಿ ಅಭಿಪ್ರಾಯ ತಪ್ಪು ಅನ್ನೋಕೆ ಆಗಲ್ಲ. ಈಗಾಗಲೇ ಹೈಕಮಾಂಡ್ ಸಿದ್ದರಾಮಯ್ಯ ಸಿಎಂ ಎಂದು ತೀರ್ಮಾನ ಮಾಡಿ ಆಗಿದೆ ಎಂದು ಹೇಳಿದರು.
ಒಕ್ಕಲಿಗರು, ಲಿಂಗಾಯತರು, ದಲಿತರು ಕೇಳ್ತಿದ್ದಾರೆ. ಅವರು ಕೇಳುವುದರಲ್ಲಿ ತಪ್ಪೇನಿದೆ. ನಮ್ಮದು ಹೈಕಮಾಂಡ್ ಪಕ್ಷ. ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಹೈಕಮಾಂಡ್ ಹಾಕಿದ ಗೆರೆಯನ್ನ ನಾವ್ಯಾರು ದಾಟುವುದಿಲ್ಲ. ಇದು ನಮ್ಮ ಪಕ್ಷದ ಪಾಲಿಸಿ. ಏನೇ ಇದ್ದರೂ ನಮ್ಮ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು. ಹಾಗೂ ಸಿಎಂ ವಿಚಾರ ಮಾತಾಡದಂತೆ ಸಚಿವ, ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷರ ಸೂಚನೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಆ ವಿಚಾರ ನನಗೆ ಗೊತ್ತಿಲ್ಲ ಎಂದು ಜಮೀರ್ ಅಹ್ಮದ್ ಸ್ಪಷ್ಟಪಡಿಸಿದರು.
ಸ್ಥಗಿತಗೊಂಡ ಕಾಮಗಾರಿ ಶೀಘ್ರ ಆರಂಭಿಸಿ: ಇಲ್ಲಿನ ಚಾಮುಂಡೇಶ್ವರಿ ನಗರದಲ್ಲಿ ಸ್ಥಗಿತಗೊಂಡಿರುವ ಜಿ+3 (525) ಮನೆಗಳ ಕಾಮಗಾರಿಯನ್ನು ಪುನರಾರಂಭಿಸಬೇಕು ಎಂದು ವಸತಿ ಸಚಿವ ಜಮೀರ್ ಅಹ್ಮದಖಾನ್ ಅವರನ್ನು ಶಾಸಕ ಮಹೇಶ ಟೆಂಗಿನಕಾಯಿ ಆಗ್ರಹಿಸಿದ್ದಾರೆ. ಬೆಂಗಳೂರಲ್ಲಿ ಸಚಿವರನ್ನು ಭೇಟಿ ಮಾಡಿದ ಟೆಂಗಿನಕಾಯಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಚಾಮುಂಡೇಶ್ವರಿ ನಗರದಲ್ಲಿ ಜಿ+3 ಮನೆಗಳ ನಿರ್ಮಾಣ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದರಿಂದ ಈ ಮನೆಗಳಿಗಾಗಿ ₹ 50 ಸಾವಿರ ಪಾವತಿಸಿದರೂ ಫಲಾನುಭವಿಗಳು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲ್ಲ: ಸಚಿವ ಜಮೀರ್ ಅಹ್ಮದ್
ಮನೆಗಳು ಯಾವಾಗ ಸಿಗುತ್ತವೆ ಎಂದು ಪ್ರಶ್ನಿಸುತ್ತಿದ್ದಾರೆ. ಆದಕಾರಣ ಈ ಮನೆಗಳ ಕಾಮಗಾರಿಯನ್ನು ಪುನರಾರಂಭಿಸಬೇಕು. ಇದರೊಂದಿಗೆ ಕ್ಷೇತ್ರಕ್ಕೆ ಮಂಜೂರಾಗಿದ್ದ 650 ಮನೆಗಳ ನಿರ್ಮಾಣ ಕಾರ್ಯವನ್ನು ಶೀಘ್ರದಲ್ಲೇ ಪಾರಂಭಿಸಬೇಕೆಂದು ಮನವಿ ಮಾಡಿದರು.ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು, ಶೀಘ್ರದಲ್ಲೇ ಹುಬ್ಬಳ್ಳಿಗೆ ಬಂದು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ವೇಳೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ಪ್ರಸಾದ ಅಬ್ಬಯ್ಯ ಉಪಸ್ಥಿತರಿದ್ದರು.