ಲೋಕಸಭೆ ಅಭ್ಯರ್ಥಿಗಳ ಹಿನ್ನೆಲೆ ತಿಳಿಸಲು ಆ್ಯಪ್‌: ಚುನಾವಣಾಧಿಕಾರಿ ಮನೋಜ್ ಕುಮಾರ್

By Kannadaprabha NewsFirst Published Mar 18, 2024, 6:43 AM IST
Highlights

ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ಮತ್ತು ಸೇರ್ಪಡೆಗೊಳಿಸುವ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ ನಡೆಸಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸಲಹೆ ನೀಡಿದರು. 
 

ಬೆಂಗಳೂರು (ಮಾ.18): ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ಮತ್ತು ಸೇರ್ಪಡೆಗೊಳಿಸುವ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ ನಡೆಸಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸಲಹೆ ನೀಡಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅನುಸರಿಸಬೇಕಾದ ವಿಷಯಗಳ ಕುರಿತು ಭಾನುವಾರ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದ ಅವರು, ಸಲಹೆ-ಸೂಚನೆಗಳು, ಅಭಿಪ್ರಾಯಗಳನ್ನು ಸ್ವೀಕರಿಸಿ ಆಲಿಸಿದರು.

ತಳಮಟ್ಟದಲ್ಲಿ ಮತದಾರರ ಮಾಹಿತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅರಿತಿರುತ್ತಾರೆ. ಹೀಗಾಗಿ, ಮತದಾರರಿಗೆ ಸಮಸ್ಯೆಗಳಿದ್ದಲ್ಲಿ, ಪರಿಹರಿಸಿಕೊಳ್ಳಲು ಪ್ರತಿನಿಧಿಗಳು ನೆರವಾಗಬೇಕು. ವಿಳಾಸ ಬದಲಾವಣೆ, ತಿದ್ದುಪಡಿಗಳಿಗಾಗಿ ‘ವೋಟರ್ ಹೆಲ್ಪ್‌ಲೈನ್’ ಆ್ಯಪ್, ದೂರುಗಳನ್ನು ನೀಡಲು ‘ಸಿವಿಜಿಲ್’ ಆ್ಯಪ್ ಬಳಸಬಹುದು. ದೂರುದಾರರ ಗೌಪ್ಯತೆ ಕಾಪಾಡಲಾಗುತ್ತದೆ. ವಿಶೇಷ ಚೇತನರ ನೆರವಿಗಾಗಿ ‘ಸಕ್ಷಮ್’ ಆ್ಯಪ್ ಇದೆ. ಮತದಾನಕ್ಕೆ ವಾಹನ ಸೌಲಭ್ಯ ಬಳಸಿಕೊಳ್ಳಲು ಈ ಆ್ಯಪ್ ಬಳಸಬಹುದು ಎಂದು ಅವರು ವಿವರಿಸಿದರು. ಸಭೆಯಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಹಾಗೂ ಕೂರ್ಮಾ ರಾವ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವರಿಷ್ಠರು ಸೂಚನೆ ನೀಡಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ಜಗದೀಶ್ ಶೆಟ್ಟರ್‌

ಅಭ್ಯರ್ಥಿಗಳಿಗಾಗಿ ‘ಸುವಿಧಾ’ ಆ್ಯಪ್: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಾಮನಿರ್ದೇಶನ ಮತ್ತು ಅನುಮತಿ ಪ್ರಕ್ರಿಯೆಗೆ ನೆರವಾಗಲು ‘ಸುವಿಧಾ’ ಅಭ್ಯರ್ಥಿ ಆ್ಯಪ್ ಲಭ್ಯವಿದೆ. ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡರೆ ಅಭ್ಯರ್ಥಿತನಕ್ಕೆ ಸಂಬಂಧಿಸಿದ ಎಲ್ಲ ಅಪ್‌ಡೇಟ್‌ಗಳು ಸಿಗುತ್ತವೆ. ಪ್ರಚಾರಕ್ಕೆ ಅನುಮತಿ ಪತ್ರ ಡೌನ್‌ಲೋಡ್, ಅರ್ಜಿ ಸ್ಟೇಟಸ್, ನಾಮಪತ್ರ ಟ್ರ್ಯಾಕಿಂಗ್ ಸೇರಿದಂತೆ ಇನ್ನಿತರ ಸೇವೆಗಳನ್ನು ಕುಳಿತಲ್ಲೇ ಪಡೆದುಕೊಳ್ಳಬಹುದು.

ಅಭ್ಯರ್ಥಿಯ ಬಗ್ಗೆ ತಿಳಿಯಲು ‘ಕೆವೈಸಿ’ ಆ್ಯಪ್: ಅಭ್ಯರ್ಥಿಗಳ ಹಿನ್ನೆಲೆ, ಅಪರಾಧ ಹಿನ್ನೆಲೆ ಬಗ್ಗೆ ನಾಗರಿಕರಿಗೆ ತಿಳಿಸಲು ‘ಅಭ್ಯರ್ಥಿಯ ಬಗ್ಗೆ ತಿಳಿಯಿರಿ’ ಕೆವೈಸಿ-ಇಸಿಐ ಆ್ಯಪ್ ಅನ್ನು ಸಾರ್ವಜನಿಕರು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅಸಲಿ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಿ: ಆ್ಯಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಆ್ಯಪ್‌ಗಳು ಲಭ್ಯವಿದ್ದು, ಭಾರತೀಯ ಚುನಾವಣಾ ಆಯೋಗದ ಅಧಿಕೃತ ಆ್ಯಪ್‌ಗಳನ್ನೇ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಸಲಿಯನ್ನೇ ಹೋಲಿಕೆಯಾಗುವ, ನಕಲು ಆ್ಯಪ್‌ಗಳ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು. ಹೆಚ್ಚಿನ ಮಾಹಿತಿಗೆ ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಶೇ.50ರಷ್ಟು ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವುದು ಕಾಂಗ್ರೆಸ್ ಸರ್ಕಾರ: ಸಚಿವ ಸಂತೋಷ್‌ ಲಾಡ್

ಯಾರಿಗೆ? ಯಾವ ಆ್ಯಪ್?
- ಮತದಾರರ ಪಟ್ಟಿ ಕುರಿತು ಸಮಸ್ಯೆಗಳಿಗೆ- ವೋಟರ್ ಹೆಲ್ಪ್‌ಲೈನ್
- ಚುನಾವಣೆ ಸಂಬಂಧಿಸಿದ ದೂರುಗಳಿಗೆ- ಸಿವಿಜಿಲ್ ಆ್ಯಪ್
- ವಿಶೇಷ ಚೇತನ ಮತದಾರರ ನೆರವಿಗೆ- ಸಕ್ಷಮ್
- ಅಭ್ಯರ್ಥಿಗಳ ಬಗ್ಗೆ ತಿಳಿಯಲು- ಕೆವೈಸಿ- ಇಸಿಐ
- ಅಭ್ಯರ್ಥಿಗಳ ನೆರವಿಗೆ- ಸುವಿಧಾ ಆ್ಯಪ್

click me!