ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆ ನೀಡಿ ಪ್ರಚಾರ ಪಡೆದ ಕಾಂಗ್ರೆಸ್ ಸರ್ಕಾರ, ಒಂದು ಕೈಯಲ್ಲಿ ಕೊಟ್ಟು, ಹತ್ತು ಕೈಯಲ್ಲಿ ಜನರಿಂದ ಕಸಿಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದ್ದಾರೆ.
ಶಿವಮೊಗ್ಗ (ಏ.13): ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆ ನೀಡಿ ಪ್ರಚಾರ ಪಡೆದ ಕಾಂಗ್ರೆಸ್ ಸರ್ಕಾರ, ಒಂದು ಕೈಯಲ್ಲಿ ಕೊಟ್ಟು, ಹತ್ತು ಕೈಯಲ್ಲಿ ಜನರಿಂದ ಕಸಿಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದ್ದಾರೆ. ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಟಿ.ಸೀನಪ್ಪ ವೃತ್ತದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧದ ಜನಾಕ್ರೋಶ ಯಾತ್ರೆಯ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದು ನುಡಿದಂತೆ ನಡೆದ ಸರ್ಕಾರ ಅಲ್ಲ, ಎಡವಿ ಬಿದ್ದ ಸರ್ಕಾರ ಎಂದು ಕಿಡಿ ಕಾರಿದರು.
ದೇಶದಲ್ಲಿ ಜನಸಾಮಾನ್ಯರ ಮೇಲೆ ಹೊರೆಯಾಗುವಂತಹ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಮೋದಿಯನ್ನು ವಿನಾಕಾರಣ ಟೀಕಿಸುತ್ತಿದ್ದಾರೆ. ಸಿದ್ದರಾಮಯ್ಯನವರು ಜನ ವಿರೋಧಿ ನೀತಿಯನ್ನು ಜಾರಿಗೆ ತಂದು ಬಡವರು, ಕೂಲಿ ಕಾರ್ಮಿಕರ ತಲೆಯ ಮೇಲೆ ಹೊರೆ ಹೊರೆಸುತ್ತಿದ್ದಾರೆ. ಆದ್ದರಿಂದ, ಕಾಂಗ್ರೆಸ್ ಸರ್ಕಾರವನ್ನು ಬುಡ ಸಮೇತ ಕಿತ್ತೊಗೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕೆಪಿಟಿಸಿಎಲ್ ಮಾರಲು ಹೊರಟಿದೆ: ವಿಜಯೇಂದ್ರ ಆರೋಪ
ಅಹಿಂದ ಹೆಸರೇಳಿಕೊಂಡು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಹಿಂದುಳಿದ ಸಮುದಾಯಗಳನ್ನು ಕಡೆಗಣಿಸಿ, ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಣ ನುಂಗಿ ಗ್ಯಾರಂಟಿ ಯೋಜನೆಗಳ ಅಮಲಿನಲ್ಲಿ ಕಾಂಗ್ರೆಸ್ ತೇಲುತ್ತಿದೆ ಎಂದು ಅವರು ಆರೋಪಿಸಿದರು. ಸಂಸದರಾದ ಗೋವಿಂದ ಕಾರಜೋಳ, ಕೋಟಾ ಶ್ರೀನಿವಾಸ ಪೂಜಾರಿ, ಬಿ.ವೈ.ರಾಘವೇಂದ್ರ, ಶಾಸಕ ಅರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ ಮತ್ತಿತರ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಅರೆಬೆಂದ ಕಾಂತರಾಜ ಆಯೋಗದ ವರದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತರಲು ಹೊರಟಿರುವ ಕಾಂತರಾಜ ಆಯೋಗದ ವರದಿಯು ಅರೆಬೆಂದ ಸಮೀಕ್ಷಾ ವರದಿ. ಸರ್ಕಾರದ ದುರಾಡಳಿತದ ಚರ್ಚೆ ಮುನ್ನೆಲೆಗೆ ಬಂದಾಗಲೆಲ್ಲಾ ಜಾತಿ ಜನಗಣತಿ ವರದಿ ವಿಚಾರವನ್ನು ಸಿದ್ದರಾಮಯ್ಯ ಮುಂದಿಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಜನಸಾಮಾನ್ಯರು ದಿನನಿತ್ಯ ಬಳಸುವ 50ಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಹಾಲು, ತೈಲ ಬೆಲೆಗಳೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತುಟ್ಟಿಯಾಗಿವೆ ಎಂದು ವಿಜಯೇಂದ್ರ ಆರೋಪಿಸಿದರು.
ಮಳೆಯ ಹೊಡೆತಕ್ಕೆ ತಣ್ಣಗಾದ ಜನಾಕ್ರೋಶ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಿದ್ದ ಜನಾಕ್ರೋಶ ಯಾತ್ರೆ, ಮಳೆಯ ಅಬ್ಬರಕ್ಕೆ ತಣ್ಣಗಾಯಿತು. ಸಭೆ ಆರಂಭವಾಗುತ್ತಿದ್ದಂತೆ ಗಾಳಿ, ಗುಡುಗು ಸಹಿತ ಭಾರಿ ಮಳೆ ಅಬ್ಬರಿಸಲು ಆರಂಭಿಸಿತು. ಮಳೆಯಲ್ಲೇ ವೇದಿಕೆ ಕಾರ್ಯಕ್ರಮ ನಡೆಯಿತು. ಸುರಿಯುವ ಮಳೆಯ ನಡುವೆಯೂ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ವಿಜಯೇಂದ್ರ ಮಳೆಯಲ್ಲೇ ಭಾಷಣ ಮುಂದುವರಿಸಿದರು. ಆದರೆ, ಭಾರಿ ಗಾಳಿಯಿಂದಾಗಿ ಜನಾಕ್ರೋಶ ಯಾತ್ರೆಯ ವೇದಿಕೆ ಅಲುಗಾಡಿತು. ವೇದಿಕೆ ಹಿಂಬದಿ ಅಳವಡಿಸಿದ್ದ ಫ್ಲೆಕ್ಸ್ ಮುರಿದು ಬೀಳುವಂತಾಯಿತು.
ರಾಜ್ಯದಲ್ಲಿರೋದು 80% ಭ್ರಷ್ಟಾಚಾರದ ಸರ್ಕಾರ: ವಿಜಯೇಂದ್ರ ಆರೋಪ
ಕೂಡಲೇ ಅಲ್ಲಿಗೆ ದೌಡಾಯಿಸಿದ ಬಿಜೆಪಿ ಕಾರ್ಯಕರ್ತರು ಫ್ಲೆಕ್ಸ್ ಹಿಡಿದರು. ಆದರೆ, ಗಾಳಿ ರಭಸಕ್ಕೆ ಫ್ಲೆಕ್ಸ್ ಮುರಿದು ಬಿತ್ತು. ಅಷ್ಟರಲ್ಲಿ ವೇದಿಕೆ ಮೇಲಿಂದ ಮುಖಂಡರು ಕೆಳಗಿಳಿದಿದ್ದರು. ಭಾರಿ ಮಳೆಯ ನಡುವೆಯೆ ವಿಜಯೇಂದ್ರ ಅವರನ್ನು ಹೆಗಲ ಮೇಲೆ ಹೊತ್ತ ಕಾರ್ಯಕರ್ತರು, ಗೋಪಿ ಸರ್ಕಲ್‌ನಲ್ಲಿ ಕುಣಿದರು. ಮಳೆಯಿಂದ ರಕ್ಷಣೆ ಪಡೆಯಲು ಅಕ್ಕಪಕ್ಕದ ಕಟ್ಟಡಗಳ ಅಡಿ ನಿಂತಿದ್ದ ಕಾರ್ಯಕರ್ತರು ಇದನ್ನು ಕಂಡು ಘೋಷಣೆ ಕೂಗಿದರು. ಅಲ್ಲದೆ ತಮ್ಮ ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದರು. ಗುಡುಗು, ಗಾಳಿ ಸಹಿತ ಮಳೆಯಿಂದಾಗಿ ಬಿಜೆಪಿ ಜನಾಕ್ರೋಶ ಯಾತ್ರೆ ಅರ್ಧಕ್ಕೆ ಮೊಟಕುಗೊಂಡಿತು.