Karnataka Politics: 'ಜನವಿರೋಧಿ ಬಿಜೆಪಿ ಸರ್ಕಾರದ ಕೌಂಟ್‌ಡೌನ್‌ ಶುರು'

By Kannadaprabha News  |  First Published Dec 17, 2021, 11:45 AM IST

*  ಜನವಿರೋಧಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ
*  ಭೈರತಿ ಬಸವರಾಜರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹ
*  ಕಾಂಗ್ರೆಸ್‌ ಅಧಿಕಾರಕ್ಕೆ ತರುವವರೆಗೆ ವಿರಮಿಸುವುದಿಲ್ಲ
 


ಹಾವೇರಿ(ಡಿ.17):  ಹಾನಗಲ್ಲ ಉಪಚುನಾವಣೆ(Hanagal Byelection) ಹಾಗೂ ವಿಧಾನ ಪರಿಷತ್‌ ಚುನಾವಣೆಯ(Vidhan Parishat Election) ಗೆಲುವಿನ ಸಂದೇಶ ಹೊತ್ತು ಭ್ರಷ್ಟ, ಜನವಿರೋಧಿ ಸರ್ಕಾರದ ವಿರುದ್ಧ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ಬಿಜೆಪಿ ಸರ್ಕಾರದ(BJP Government) ಕೌಂಟ್‌ಡೌನ್‌ ಹಾನಗಲ್ಲ ಉಪಚುನಾವಣೆಯಿಂದಲೇ ಶುರುವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಪರಿಷತ್‌ ಚುನಾವಣೆಯ ವಿಜೇತ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ಹೇಳಿದರು.

ನಗರದ ಕೃಷ್ಣ ಕಲ್ಯಾಣಮಂಟಪದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗಳಲ್ಲಿ ಜನರು ಕೊಟ್ಟಿರುವ ಈ ತೀರ್ಪು ಮುಂದಿನ ವಿಧಾನಸಭೆ ಚುನಾವಣೆಯ(Assembly Election) ದಿಕ್ಸೂಚಿಯೂ ಆಗಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವವರೆಗೆ ವಿರಮಿಸುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬರೀ ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಇದು ಜನರಿಗೂ ಗೊತ್ತಾಗಿ ಚುನಾವಣೆಗಳಲ್ಲಿ ತಕ್ಕ ಉತ್ತರವನ್ನು ಬಿಜೆಪಿಗೆ(BJP) ನೀಡುತ್ತಿದ್ದಾರೆ. ಯಾವಾಗ ಚುನಾವಣೆ ಬರುತ್ತದೆಯೋ ಈ ಬಿಜೆಪಿಯನ್ನು ಯಾವಾಗ ತೊಲಗಿಸಬೇಕು ಎಂದು ಜನರು ಕಾಯುತ್ತಿದ್ದಾರೆ ಎಂದರು.

Tap to resize

Latest Videos

undefined

MLC Election: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾಯಕ 6 ವರ್ಷ ಉಚ್ಚಾಟನೆ

ಅತಿವೃಷ್ಟಿ ಪೀಡಿತರಿಗೆ ಪರಿಹಾರ ಸಿಕ್ಕಿಲ್ಲ

ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟ ಮತ್ತು ನಿರ್ಜೀವವಾಗಿದೆ. ನೆರೆ ಹಾಗೂ ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರಿಗೆ(Farmers) ನಯಾ ಪೈಸೆ ಪರಿಹಾರ ಕೊಡುತ್ತಿಲ್ಲ. ಇವರು ಅಧಿಕಾರಕ್ಕೆ ಬಂದ ನಂತರ ಒಬ್ಬ ಬಡವರಿಗೂ ಮನೆ ಕೊಟ್ಟಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಕಾಂಗ್ರೆಸ್‌(Congress) ಹೆಚ್ಚಿನ ಅಧಿಕಾರ ನೀಡಿದರೆ ಅದನ್ನು ಕಸಿಯುವ ಯತ್ನವನ್ನು ಬಿಜೆಪಿ ಮಾಡುತ್ತಿದೆ. ಸದಸ್ಯರ ಗೌರವ ಧನ ನೀಡುತ್ತಿಲ್ಲ. ನರೇಗಾ ಯೋಜನೆಯಲ್ಲಿ ಕೂಲಿ ಮಾಡಿದವರಿಗೆ ಹಣ ನೀಡುತ್ತಿಲ್ಲ.

ಹಾನಗಲ್ಲ ಉಪಚುನಾವಣೆಯಲ್ಲಿನ ಸೋಲಿನ ನಂತರ ಸರ್ಕಾರಕ್ಕೆ ಸೋಲಿನ ಭಯ ಕಾಡುತ್ತಿದೆ. ಅದಕ್ಕಾಗಿ ಜಿಪಂ ಹಾಗೂ ತಾಪಂಗಳ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ಕಾಂಗ್ರೆಸ್‌ ಸ್ಥಳೀಯ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದಿತು. ಆದರೆ ಆ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಇವರಿಂದ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ದೇಶದ ಜನರು ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಪ್ರಧಾನಿ ಮೋದಿ(Narendra Modi) ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಬರೀ ಭಾಷಣದ ಮೂಲಕ ಜನರನ್ನು ಮರಳು ಮಾಡುವ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಬೆಲೆ ನಿಯಂತ್ರಿಸುವ ಶಕ್ತಿ ಕೇಂದ್ರ ಸರ್ಕಾರಕ್ಕಿಲ್ಲ(Central Government). ಇವರ ಮೇಲೆ ಜನರಿಟ್ಟ ನಂಬಿಕೆಗಳೆಲ್ಲಾ ಹುಸಿಯಾಗಿದ್ದು, ಚುನಾವಣೆಗಾಗಿ ಜನರು ಕಾಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಎಂದರು.

ಭೈರತಿ ಬಸವರಾಜ ರಾಜೀನಾಮೆಗೆ ಆಗ್ರಹ

400 ಕೋಟಿ ರು.ಗಳ ಭೂಹಗರಣದಲ್ಲಿ ಸಿಲುಕಿರುವ ಭ್ರಷ್ಟ ಸಚಿವ ಭೈರತಿ ಬಸವರಾಜ ವಿರುದ್ಧ ಚರ್ಚೆಗೆ ವಿಧಾನ ಪರಿಷತ್‌ನಲ್ಲಿ ಅವಕಾಶ ಕೇಳಿದರೆ ನಮ್ಮ ಸದಸ್ಯರನ್ನು ಅಮಾನತು ಮಾಡಿರುವುದು ಖಂಡನೀಯ. ಭೂಹಗರಣದ ಆರೋಪ ಎದುರಾಗಿರುವ ಭೈರತಿ ಬಸವರಾಜ ಕೂಡಲೇ ರಾಜೀನಾಮೆ ಕೊಡಬೇಕು. ಇಲ್ಲವಾದರೆ ಸಿಎಂ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

MLC Election: ಸುಳ್ಳು ಹೇಳುವ ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ: ಸಲೀಂ ಅಹ್ಮದ್‌

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ(Corruption) ತಾಂಡವವಾಡುತ್ತಿದೆ. ಗುತ್ತಿಗೆದಾರರೇ ಶೇ. 40ರಷ್ಟು ಕಮೀಶನ್‌ ಕೊಡಬೇಕು ಎಂದು ಪ್ರಧಾನಿಗೆ ದೂರು ಕೊಟ್ಟಿರುವುದು ಇತಿಹಾಸದಲ್ಲೇ ಮೊದಲು. ಪ್ರಧಾನಿಗಳಿಗೆ ನೈತಿಕತೆಯಿದ್ದರೆ ಕೂಡಲೇ ಇದರ ತನಿಖೆಗೆ ಮುಂದಾಗಿ, ಸರ್ಕಾರವನ್ನು ವಜಾಗೊಳಿಸಲು ಶಿಫಾರಸು ಮಾಡಬೇಕು. ಮುಖ್ಯಮಂತ್ರಿ ಬೊಮ್ಮಾಯಿ(Basavaraj Bommai) ಅವರು 2013ರಿಂದ ತನಿಖೆಗೆ ಕೊಡುವುದಾರೆ ಅದಕ್ಕೂ ನಮ್ಮ ಸ್ವಾಗತವಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಇವರ ಸರ್ಕಾರದ ಭ್ರಷ್ಟಾಚಾರವನ್ನು ನಾವು ಬಹಿರಂಗಗೊಳಿಸಿದ್ದೇವೆ. ಆ ಸಮಯದಲ್ಲಿ ವಿಪಕ್ಷದಲ್ಲಿದ್ದ ಬಿಜೆಪಿ ಯಾಕೆ ಸುಮ್ಮನಿತ್ತು. ವಿರೋಧ ಪಕ್ಷದ ಕೆಲಸವನ್ನು ಸಹ ಇವರು ಸರಿಯಾಗಿ ಮಾಡಿಲ್ಲ ಎಂಬ ಅರ್ಥ ಬರುತ್ತದೆ ಎಂದರು.

ಮಾಜಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಶಾಸಕ ಬಿ.ಎಚ್‌. ಬನ್ನಿಕೋಡ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಪ್ರಮುಖರಾದ ಡಿ. ಬಸವರಾಜ, ಕೊಟ್ರೇಶಪ್ಪ ಬಸೇಗಣ್ಣಿ, ಪ್ರಕಾಶಗೌಡ ಪಾಟೀಲ, ಸದಾನಂದ ಡಂಗನವರ, ಸಂಜೀವಕುಮಾರ ನೀರಲಗಿ, ಡಾ. ಸಂಜಯ ಡಾಂಗೆ, ಎಸ್‌ಎಫ್‌ಎನ್‌ ಗಾಜಿಗೌಡ್ರ, ಎಂ.ಎಂ. ಮೈದೂರ, ಪ್ರಭು ಬಿಷ್ಟನಗೌಡ್ರ ಇತರರು ಇದ್ದರು.
 

click me!