
ಬೆಂಗಳೂರು (ಜು.17): ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ದೇವನಹಳ್ಳಿಯಲ್ಲಿ ನಡೆಯಬೇಕಿದ್ದ ಭೂಸ್ವಾಧೀನವನ್ನು ರೈತರ ಹಿತದೃಷ್ಟಿಯಿಂದ ಕೈಬಿಡಬೇಕಾಯಿತು. ಆದರೆ ಈ ಉದ್ಯಮಿಗಳಿಗೆ ಅವರು ಕೇಳಿದ ಕಡೆ ಜಮೀನು ಕೊಡಲಾಗುವುದು. ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಕರೆದಾಕ್ಷಣ ಯಾವ ಉದ್ಯಮಿಯೂ ಇಲ್ಲಿಂದ ಅಲ್ಲಿಗೆ ಹೋಗಲ್ಲ. ರಾಜ್ಯವು ವೈಮಾಂತರಿಕ್ಷ ವಲಯದಲ್ಲಿ ದೇಶದ ಶೇ.65ರಷ್ಟು ಪಾಲು ಹೊಂದಿದೆ. ಜಾಗತಿಕ ಮಟ್ಟದಲ್ಲಿ ನಮ್ಮದು ಮೂರನೇ ಅತ್ಯುತ್ತಮ ಕಾರ್ಯ ಪರಿಸರವಾಗಿದೆ. ಉದ್ಯಮಗಳಿಗೆ ಭೂಮಿ ಕೊಟ್ಟಮಾತ್ರಕ್ಕೆ ಅವು ಅಲ್ಲಿಗೆ ಹೋಗುವುದಿಲ್ಲ. ಕಾರ್ಯ ಪರಿಸರ ಕೂಡ ಮಹತ್ತ್ವದ ಪಾತ್ರ ವಹಿಸುತ್ತದೆ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ಬದಲಿ ಜಾಗದ ಬಗ್ಗೆ ಉದ್ಯಮಿಗಳಿಗೆ ರಾಜ್ಯ ಮಾಹಿತಿ ನೀಡಲಿ: ದೇವನಹಳ್ಳಿಯಲ್ಲಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ಕೊಡಲುದ್ದೇಶಿಸಿದ್ದ ಭೂಮಿಯ ಸ್ವಾಧೀನ ಪ್ರಕ್ರಿಯೆ ಕೈಬಿಟ್ಟ ತಕ್ಷಣ ಪಕ್ಕದ ಆಂಧ್ರದವರು ಸಂಪರ್ಕಿಸಲು ಮುಂದಾಗಿದ್ದಾರೆ. ಎಂಟು ಸಾವಿರ ಎಕರೆ ರೆಡಿ ಇದೆ ಎಂದಿದ್ದಾರೆ ಅಷ್ಟೆ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಜತೆಗೆ, ರಾಜ್ಯ ಸರ್ಕಾರವೇ ಬದಲಿ ವ್ಯವಸ್ಥೆ ಬಗ್ಗೆ ಕಂಪನಿಗಳಿಗೆ ಹೇಳಬೇಕಿತ್ತು ಎಂದು ತಿಳಿಸಿದ್ದಾರೆ.
ಉದ್ಯೋಗಾವಕಾಶ ಪಡೆಯಲು ಭಾಷಾ ಕೌಶಲ್ಯವೂ ಮುಖ್ಯ: ಇಡೀ ಜಗತ್ತೇ ಕರ್ನಾಟಕದತ್ತ ತಿರುಗಿ ನೋಡುತ್ತಿದೆ. ಮಕ್ಕಳಿಗೆ ಭಾಷಾ ಕೌಶಲ್ಯ ಬಹಳ ಮುಖ್ಯವಾಗಿದ್ದು, ಇಂಗ್ಲಿಷ್, ಜರ್ಮನ್, ಜಪಾನಿ ಹಾಗೂ ಇಟಾಲಿಯನ್ ಭಾಷೆ ಕಲಿತರೆ ಜಿಟಿಟಿಜಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಈ ದೇಶಗಳಲ್ಲಿ ಒಳ್ಳೆಯ ಅವಕಾಶಗಳಿವೆ. ಬಡ ವಿದ್ಯಾರ್ಥಿಗಳಿಗೆ ಭವಿಷ್ಯ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು. ತಾಲೂಕಿನ ನೆಲೋಗಲ್ಲ ಗ್ರಾಮದ ಬಳಿ ನಿರ್ಮಿಸಲಾಗಿರುವ ನೂತನ ಜಿಟಿಟಿಸಿ ತರಬೇತಿ ಸಂಕೀರ್ಣ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಬರುವ ದಿನಗಳಲ್ಲಿ ಎಂಜಿನಿಯರ್ ಶಿಕ್ಷಣಕ್ಕಿಂತ ಜಿಟಿಟಿಸಿ ಶಿಕ್ಷಣದಲ್ಲಿ ಹೆಚ್ಚು ಉದ್ಯೋಗವಕಾಶಗಳು ಸಿಗಲಿವೆ. ಕೈಗಾರಿಕೆಗಳಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಇಂಡಸ್ಟ್ರಿ ಲಿಂಕೇಜ್ ಸ್ಕೀಮ್ ಮಾಡಲಾಗಿದೆ. ಈ ಮೂಲಕ ಯುವ ಸಮೂಹಕ್ಕೆ ತರಬೇತಿ ನೀಡಬೇಕಿದೆ. ಕಲಿಕೆ ಜತೆಗೆ ಕೌಶಲ್ಯ ತರಬೇತಿ ಜಾರಿಗೆ ತರಲಾಗಿದ್ದು, ಹ್ಯಾಂಡ್ಸ್ ಒನ್ ಟ್ರೇನಿಂಗ್ ಮೂಲಕ ಜರ್ಮನಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ನಾಲ್ಕು ಭಾಷೆಗಳನ್ನು ಕಲಿತರೆ ದೇಶ, ವಿದೇಶದಲ್ಲೂ ಕೆಲಸ ಪಡೆದುಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಜಿಟಿಟಿಸಿ ಕೇಂದ್ರದಲ್ಲಿ ಜರ್ಮನಿ ಭಾಷೆ ಕಲಿಕೆಯನ್ನೂ ಪ್ರಾರಂಭಿಸಲಾಗುತ್ತಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.