ಬಿಹಾರಕ್ಕೆ ಭೇಟಿ ನೀಡಲು ಅಮಿತ್ ಶಾಗೆ ನಿತೀಶ್ ಮತ್ತು ಲಾಲು ಅವರಿಂದ ಪಾಸ್‌ಪೋರ್ಟ್‌ ಅಗತ್ಯವಿಲ್ಲ!

By Santosh NaikFirst Published Sep 23, 2022, 1:01 PM IST
Highlights

ಮಹಾಘಟಬಂಧನ್ ಸರ್ಕಾರ ರಚಿಸುವ ಸಲುವಾಗಿ ಜೆಡಿಯು ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದ ನಂತರ ಅಮಿತ್ ಶಾ ಬಿಹಾರಕ್ಕೆ ಇದು ಮೊದಲ ಭೇಟಿಯಾಗಿದೆ. ಇದರ ಬೆನ್ನಲ್ಲಿಯೇ ಅಮಿತ್‌ ಶಾ ಭೇಟಿಯ ಬಗ್ಗೆ ಬಿಹಾರ ರಾಜಕೀಯದಲ್ಲಿ ತಳಮಳ ಆರಂಭವಾಗಿದೆ. 

ಪಾಟ್ನಾ (ಸೆ 23): ಮಾಜಿ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಗುರುವಾರ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಿಹಾರಕ್ಕೆ ಬರಲು, ಇಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಥವಾ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಂದ ಪಾಸ್‌ಪೋರ್ಟ್‌ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಶುಕ್ರವಾರ ಅಮಿತ್‌ ಶಾ ಪೂರ್ಣಿಯಾ ಜಿಲ್ಲೆಯಲ್ಲಿ ಮತ್ತು ಕಿಶನ್‌ಗಂಜ್‌ ಜಿಲ್ಲೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದಲ್ಲಿನ ಕೋಮು ಸಾಮರಸ್ಯವನ್ನು ಹಾಳು ಮಾಡಲು ಅಮಿತ್‌ ಶಾ ಬಿಹಾರಕ್ಕೆ ಬರುತ್ತಿದ್ದಾರೆ ಎಂದು ಜೆಡಿಯು ಹಾಗೂ ಆರ್‌ಜೆಡಿ ಟೀಕೆ ಮಾಡಿದೆ. “ಮಹಾಘಟಬಂಧನ್ ನಾಯಕರು ಅಸಮರ್ಥರಾಗಿದ್ದಾರೆ. ಅವರಿಗೆ ಅಮಿತ್ ಶಾ ಬಿಹಾರಕ್ಕೆ ಬರುತ್ತಿರುವುದರಿಂದ ತಳಮಳ ಶುರುವಾಗಿದೆ ಹಾಗಾಗಿ ಅಮಿತ್‌ ಶಾ ಬಿಹಾರಕ್ಕೆ  ಯಾಕೆ ಬರುತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಮಿತ್‌ ಶಾ ಬಿಹಾರಕ್ಕೆ ಬರುವ ನಿಟ್ಟಿನಲ್ಲಿ ಮಹಾಘಟಬಂದನ್‌ನ ನಾಯಕರಿಗೆ ಯಾವುದೇ ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಬಿಹಾರ ಎನ್ನುವುದು ದೇಶದ ಅವಿಭಾಜ್ಯ ಅಂಗ. ದೇಶದ ಯಾವುದೇ ವ್ಯಕ್ತಿಯಾಗಲಿ, ಗೃಹ ಸಚಿವರಾಗಲಿ ಬಿಹಾರಕ್ಕೆ ಬರಲು ಇವರಿಂದ ಪಾಸ್‌ಪೋರ್ಟ್‌ನ ಅಗತ್ಯವಿಲ್ಲ ಎಂದು ಟೀಕಿಸಿದ್ದಾರೆ.

ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ರಾಜಕೀಯ ಲಾಭಕ್ಕಾಗಿ ಒಗ್ಗೂಡಿದ್ದಾರೆ. ಭ್ರಷ್ಟಾಚಾರದಲ್ಲಿ ರಾಜಿ ಮಾಡಿಕೊಂಡು ಬಿಹಾರ ಜನತೆಯ ಜನಾದೇಶಕ್ಕೆ ವಂಚಿಸಿದ್ದಾರೆ. ಈ ವಿಷಯವನ್ನು ಎತ್ತಿ ತೋರಿಸಲು ಅಮಿತ್ ಶಾ ಇಲ್ಲಿಗೆ ಬರುತ್ತಿದ್ದಾರೆ. ದೇಶದ ಜನತೆ 2024ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಿದ್ದು, 2025ರಲ್ಲಿ ಬಿಹಾರದಲ್ಲಿ ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚಿಸಲಿದೆ ಎಂದು ಹೇಳಿದರು.

ಅಮಿತ್‌ ಶಾ ಅವರ ಸಮಾವೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ "ಅಮಿತ್ ಶಾ ಅವರ ಬಿಹಾರ ಭೇಟಿಯ ಉದ್ದೇಶ ಎಲ್ಲರಿಗೂ ತಿಳಿದಿದೆ. ಕೋಮು ಸಾಮರಸ್ಯವನ್ನು ಹಾಳು ಮಾಡಲು ಅವರು ಇಲ್ಲಿಗೆ ಬರುತ್ತಿದ್ದಾರೆ ಮತ್ತು ನಿಷ್ಪ್ರಯೋಜಕ ಮತ್ತು ಅರ್ಥಹೀನ ವಿಷಯಗಳ ಬಗ್ಗೆ ಮಾತನಾಡುತ್ತಾರೆ." ಎಂದು ಟೀಕಿಸಿದ್ದಾರೆ.

“ಕೇಂದ್ರದ ನರೇಂದ್ರ ಮೋದಿ ಸರ್ಕಾರ ತನ್ನ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ, ಅವರು (ಶಾ) ಬಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಲು ಬರುತ್ತಿಲ್ಲ, ನರೇಂದ್ರ ಮೋದಿ ಸರ್ಕಾರವು ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳ ತನ್ನ ಚುನಾವಣಾ ಭರವಸೆಯನ್ನು ಮರೆತು ಜನರನ್ನು ವಂಚಿಸಿದೆ. ದೇಶದ ಮತ್ತು ಬಿಹಾರದ ಜನರನ್ನು ದಾರಿತಪ್ಪಿಸಲು ಅಮಿತ್‌ ಶಾ ಇಲ್ಲಿಗೆ ಬರುತ್ತಿದ್ದಾರೆ ಎಂದು ತೇಜಸ್ವಿ ಹೇಳಿದರು.
 

click me!