ನಿತೀಶ್ ನಾಯಕತ್ವದಲ್ಲೇ ಬಿಹಾರ ಎಲೆಕ್ಷನ್: ಅಮಿತ್ ಶಾ ಘೋಷಣೆ| ಅಸೆಂಬ್ಲಿ ಚುನಾವಣೆಗೆ ಗೃಹ ಸಚಿವ ರಣಕಹಳೆ| ಮೋದಿ ಸಾಧನೆ ಪ್ರಸ್ತಾಪಿಸಿ, ವಲಸಿಗರ ಓಲೈಕೆ
ನವದೆಹಲಿ(ಜೂ.08): ಅಕ್ಟೋಬರ್- ನವೆಂಬರ್‌ಗೆ ನಡೆಯಬೇಕಿರುವ ಮಹತ್ವದ ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಪ್ರಭಾವಿ ನಾಯಕರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ವಿಡಿಯೋ ಸಂವಾದ ಮೂಲಕ ವರ್ಚುವಲ್ ರಾರಯಲಿ ಉದ್ದೇಶಿಸಿ ಭಾಷಣ ಮಾಡಿದ ಅವರು, ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಯಕತ್ವದಲ್ಲೇ ಚುನಾವಣೆ ಎದುರಿಸಿ, ಮೂರನೇ ಎರಡರಷ್ಟುಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ ಎಂದು ಅದಮ್ಯ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಳೆದ 6 ವರ್ಷದ ಸಾಧನೆಗಳನ್ನು ಪ್ರಸ್ತಾಪಿಸಿದರು. ಕೆಲವು ನಾಯಕರು ಜನರ ದಾರಿತಪ್ಪಿಸಲು ಯತ್ನಿಸುತ್ತಿದ್ದಾರೆ. ಅಂತಹ ಮಾತುಗಳಿಂದ ಜನರು ಅದರಲ್ಲೂ ವಿಶೇಷವಾಗಿ ವಲಸಿಗ ಕಾರ್ಮಿಕರು ಅಂತರ ಕಾಯ್ದುಕೊಳ್ಳಬೇಕು. ಅಭಿವೃದ್ಧಿ ಹೊಂದಿದ ರಾಜ್ಯಗಳ ಬುನಾದಿಯನ್ನು ಗಮನಿಸಿದರೆ, ಅದರಲ್ಲಿ ಬಿಹಾರದ ಕಂಪು ಕಾಣುತ್ತದೆ ಎಂದು ವಲಸಿಗ ನೌಕರರನ್ನು ಪ್ರಶಂಸಿದರು.
‘ಬಿಹಾರ ಚುನಾವಣೆಗೂ ತಮ್ಮ ರಾರಯಲಿಗೂ ಯಾವುದೇ ಸಂಬಂಧವಿಲ್ಲ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಜನರ ಸ್ಥೈರ್ಯ ಹೆಚ್ಚಿಸಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರಲ್ಲಿ ರಾಜಕೀಯ ಹುಡುಕುವವರಿಗೆ ನನ್ನದೊಂದು ಪ್ರಶ್ನೆ. ರಾರಯಲಿ ಮಾಡದಂತೆ ನಿಮ್ಮನ್ನು ತಡೆದಿರುವವರು ಯಾರು? ದೆಹಲಿಯಲ್ಲಿ ಕುಳಿತು ನೀವೆಲ್ಲಾ ವಿಶ್ರಾಂತಿ ಪಡೆಯುತ್ತಿದ್ದೀರಿ’ ಎಂದು ಕಾಂಗ್ರೆಸ್ ಹೆಸರೆತ್ತದೆ ಚಾಟಿ ಬೀಸಿದರು.
ವಲಸಿಗರ ಸಮಸ್ಯೆಯನ್ನು ನಿರ್ವಹಿಸುವಲ್ಲಿ ನಿತೀಶ್ ಸರ್ಕಾರ ವಿಫಲವಾಗಿದೆ ಎಂದು ಅಸಮಾಧಾನಗೊಂಡಿರುವ ಬಿಜೆಪಿಯ ಮಿತ್ರ ಪಕ್ಷ ಎಲ್‌ಜೆಪಿ, ಒಂದು ವೇಳೆ ಬಿಜೆಪಿ ಏನಾದರೂ ಮುಖ್ಯಮಂತ್ರಿ ಅಭ್ಯರ್ಥಿ ಬದಲಿಸಿದರೆ ನಮ್ಮ ಬೆಂಬಲವಿದೆ ಎಂದು ಹೇಳಿತ್ತು. ಇದು ಸಂಚಲನಕ್ಕೆ ಕಾರಣವಾಗಿತ್ತು. ಇದೀಗ ಅಮಿತ್ ಶಾ ಅದಕ್ಕೆ ತೆರೆ ಎಳೆದಿದ್ದಾರೆ.
ಅಮಿತ್ ಶಾ ಅವರ ರಾರಯಲಿಯನ್ನು ಫೇಸ್‌ಬುಕ್, ಯುಟ್ಯೂಬ್, ನಮೋ ಆ್ಯಪ್ ಮೂಲಕ ಬಿಹಾರದ 72 ಸಾವಿರ ಮತಗಟ್ಟೆಗಳಲ್ಲಿ ಬಿತ್ತರಿಸಲಾಯಿತು. ಅಂದಾಜು 5 ಲಕ್ಷ ಮಂದಿ ಈ ರಾರಯಲಿ ವೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ.