
ಬೆಂಗಳೂರು[ಜ.04]: ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಪದೇ ಪದೇ ಪಾಕಿಸ್ತಾನದ ಜಪ ಮಾಡುವ ಮೋದಿ ಅವರೇ ನೀವು ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ ಪ್ರಧಾನಿಯೋ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀಕ್ಷ$್ಣವಾಗಿ ಪ್ರಶ್ನಿಸಿದ್ದಾರೆ.
ಅಲ್ಲದೆ, ಕೇಂದ್ರ ಕಟ್ಟಿಸಿಕೊಂಡ ತೆರಿಗೆಯ ಕರ್ನಾಟಕದ ಪಾಲು ಹಾಗೂ ನೆರೆ ಪರಿಹಾರದ ಹಣದ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಾಕಿಸ್ತಾನವನ್ನು ಕೇಳಬೇಕೋ ಅಥವಾ ಭಾರತೀಯ ಮತದಾರರಿಂದ ಆಯ್ಕೆಯಾದ ನಿಮ್ಮನ್ನು ಕೇಳಬೇಕೋ ಎಂದೂ ಅವರು ಕಿಚಾಯಿಸಿದ್ದಾರೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ರಾಜ್ಯ ಪ್ರವಾಸ ಮುಗಿಸಿ ನಿರ್ಗಮಿಸಿದ ಬೆನ್ನಲ್ಲೇ ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
-ಪೌರತ್ವ ವಿಷಯದಲ್ಲಿ ಪದೇ ಪದೇ ಪಾಕಿಸ್ತಾನದ ಜಪ ಮಾಡುವ ಮೋದಿ ಅವರೇ ನೀವು ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ ಪ್ರಧಾನಿಯೋ? ಪಾಕಿಸ್ತಾನದ ವಲಸಿಗರು, ನಿರಾಶ್ರಿತರು ನಿಮಗೆ ವೋಟು ಕೊಟ್ಟರೋ? ಭಾರತದ ಪ್ರಜೆಗಳು ವೋಟು ಕೊಟ್ಟರೋ? ಭಾರತೀಯ ಸಂವಿಧಾನದಿಂದ ಪ್ರಧಾನಿ ಹುದ್ದೆ ಸಿಕ್ಕಿತೋ, ಪಾಕಿಸ್ತಾನದ ಸಂವಿಧಾನದಿಂದ ಪ್ರಧಾನಿ ಹುದ್ದೆ ಸಿಕ್ಕಿತೋ?
-ಭಾರತೀಯರ ವೋಟು ಪಡೆದು ಸಂವಿಧಾನದ ಪ್ರಕಾರ ಪ್ರಧಾನಿಯಾದ ನಿಮಗೆ ಇಲ್ಲಿನ ರಾಜ್ಯಗಳ ಅಭಿವೃದ್ಧಿ ಆದ್ಯತೆಯೋ ಪಾಕಿಸ್ತಾನದವರಿಗೆ ಪೌರತ್ವ ನೀಡುವುದು ಆದ್ಯತೆಯೋ? ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ಕರ್ನಾಟಕಕ್ಕೆ ಕೊಡಬೇಕಾದ ಅನುದಾನ ಕೊಡಲಾಗದಿದ್ದರೂ ಪಾಕಿಸ್ತಾನದ ಮೇಲೆ ನಿಮಗೆ ಪ್ರೀತಿ ಉಕ್ಕುತ್ತಿರುವುದೇಕೆ? ಅಲ್ಲಿನವರ ಮೇಲೆ ಯಾಕಿಷ್ಟುಮಮಕಾರ?
-25 ಸಂಸದರನ್ನು ಕೊಟ್ಟಕರ್ನಾಟಕದಲ್ಲಿ ಉಂಟಾದ ನೆರೆಯಿಂದ 35 ಸಾವಿರ ಕೋಟಿ ರು. ನಷ್ಟವಾದರೂ ಕೊಟ್ಟಿದ್ದು ಚಿಕ್ಕಾಸು. ನರೇಗಾ ಬಾಕಿ ಕೊಟ್ಟಿಲ್ಲ. ತೆರಿಗೆಯಲ್ಲಿ ರಾಜ್ಯದ ಪಾಲು ಕೊಟ್ಟಿಲ್ಲ. ಬರ ಪರಿಹಾರವಿಲ್ಲ. ಇವುಗಳ ಬಗ್ಗೆ ಮಾತನಾಡಲಾಗದ ನೀವು ಮಾತಾಡುವುದು ಪಾಕಿಸ್ತಾನದ ಬಗ್ಗೆ. ಮೊದಲು ಪಾಕಿಸ್ತಾನದ ಜಪ ನಿಲ್ಲಿಸಿ ಕರ್ನಾಟಕಕ್ಕೆ ಬರಬೇಕಾದ ಹಣ ಕೊಡಿ ಎಂದು ಟೀಕಿಸಿದ್ದಾರೆ.
ಕೇಂದ್ರ ಕಟ್ಟಿಸಿಕೊಂಡ ತೆರಿಗೆಯ ಕರ್ನಾಟಕದ ಪಾಲನ್ನು ಹಾಗೂ ನೆರೆ ಪರಿಹಾರದ ಹಣವನ್ನು ಯಡಿಯೂರಪ್ಪ ಪಾಕಿಸ್ತಾನವನ್ನು ಕೇಳಬೇಕೋ ಅಥವಾ ಭಾರತೀಯ ಮತದಾರರಿಂದ ಆಯ್ಕೆಯಾದ ನಿಮ್ಮನ್ನು ಕೇಳಬೇಕೋ? ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ನಮಿಸಿ, ವಿದ್ಯಾರ್ಥಿಗಳ ಎದುರು ಭಾಷಣ ಮಾಡಿದ ನೀವು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಏನಾದರೂ ಸಲಹೆ ಕೊಟ್ಟಿರಾ? ಇಲ್ಲ. ಅದು ಬಿಟ್ಟು ಪಾಕಿಸ್ತಾನದ ಜಪ ಮಾಡುತ್ತೀರಿ. ಇದು ನಿಮ್ಮ ರಾಜಕೀಯ, ಅಧಿಕಾರದ ಆಸೆಯನ್ನು ಸಾಬೀತು ಮಾಡುತ್ತದೆ ಎಂದು ಟೀಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.