ಕಾವೇರಿದ ಚುನಾವಣಾ ಕಣ| ಮತದಾರನ ಓಲೈಕೆಗಾಗಿ ರಾಜಕೀಯ ನಾಯಕರ ಕಸರತ್ತು| ಅರ್ಜುನನಾಗಿ ಬರಬೇಕಿತ್ತು, ಕೃಷ್ಣನಾಗಿ ಬಂದಿದ್ದೇನೆ: ಶಂಕರ್
ರಾಣೆಬೆನ್ನೂರು[ನ.18]: ನಾನು ಅರ್ಜುನನಾಗಿ ಯುದ್ಧಕ್ಕೆ ಬರಬೇಕಿತ್ತು. ಆದರೆ, ಶ್ರೀಕೃಷ್ಣನಾಗಿ ಚುನಾವಣೆಗೆ ಬಂದಿದ್ದೇನೆ. ಒಂದು ತಪ್ಪಿನಿಂದ ಹೀಗಾಗಿದ್ದು, ಕ್ಷೇತ್ರದ ಜನರ ಕ್ಷಮೆ ಕೋರುತ್ತೇನೆ. ಎಲ್ಲರೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ಎಂದು ಅನರ್ಹ ಶಾಸಕ, ಮಾಜಿ ಸಚಿವ ಆರ್.ಶಂಕರ್ ಹೇಳಿದರು.
ರಾಣಿಬೆನ್ನೂರಿನ ತಮ್ಮ ನಿವಾಸದಲ್ಲಿ ಬೆಂಬಲಿಗರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ನಾನು ಚುನಾವಣೆಗೆ ಹೆದರಿ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ಸೂಚನೆಗೆ ತಲೆಬಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ನಿರ್ಧಾರದಿಂದ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದರು.
ಕ್ಷೇತ್ರದ ಅಭಿವೃದ್ಧಿ ಸಲುವಾಗಿ ಬಿಜೆಪಿ ಸೇರಿದ್ದೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದ ಕಾರಣ ಅನರ್ಹತೆ ಆಗುವುದಿಲ್ಲ ಎಂದು ಭಾವಿಸಿದ್ದೆ. ಆದರೆ, ಸುಪ್ರೀಂ ಕೋರ್ಟ್ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು. ನಾನು ಚುನಾವಣೆಯನ್ನು ಎದುರಿಸಲು ಸಿದ್ಧವಾಗಿದ್ದು, ಕಾರ್ಯಕರ್ತರ ಒತ್ತಾಯದಂತೆ ಮುಖ್ಯಮಂತ್ರಿ ಬಳಿ ಬಿ ಫಾರಂ ಕೊಡಬೇಕು ಎಂದು ಒತ್ತಾಯ ಮಾಡಿದೆ. ಆದರೆ, ಮುಖ್ಯಮಂತ್ರಿಗಳು ನನ್ನನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ. ಹೀಗಾಗಿ ಎಲ್ಲರೂ ಸೇರಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ಎಂದು ಮನವಿ ಮಾಡಿದರು.
ಕೆಪಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಅವರಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ನಾನು ಬಿಜೆಪಿ ಸೇರಿರುವುದರಿಂದ ಕೆಪಿಜೆಪಿ ಕಾರ್ಯಕರ್ತರು ಬಿಜೆಪಿ ಸೇರಬೇಕು ಎಂದು ಹೇಳಿದರು.