ಕೆಪಿಸಿಸಿ ಹೊಸ ಅಧ್ಯಕ್ಷರ ಜತೆಗೆ 4 ಕಾರ್ಯಾಧ್ಯಕ್ಷರ ನೇಮಕ?

By Suvarna NewsFirst Published Jan 6, 2020, 8:48 AM IST
Highlights

ಕೆಪಿಸಿಸಿ ಹೊಸ ಅಧ್ಯಕ್ಷರ ಜತೆಗೆ 4 ಕಾರ್ಯಾಧ್ಯಕ್ಷರ ನೇಮಕ? ಶೀಘ್ರದಲ್ಲೇ ಈ ಬಗ್ಗೆ ಸಭೆ ನಡೆಯಲಿದೆ: ಸತೀಶ್‌

ಬೆಳಗಾವಿ[ಜ.06]: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲಗೊಳಿಸುವ ಸಲುವಾಗಿ ಕೆಪಿಸಿಸಿಗೆ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸುವ ಸಾಧ್ಯತೆಯ ಬಗ್ಗೆ ಪಕ್ಷದ ಹಿರಿಯ ಮುಖಂಡ ಹಾಗೂ ಕೆಪಿಸಿಸಿ ಉನ್ನತ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಯಮಕನಮರಡಿ ಶಾಸಕ ಸತೀಶ್‌ ಜಾರಕಿಹೊಳಿ ಸುಳಿವು ನೀಡಿದ್ದಾರೆ. ಕೆಪಿಸಿಸಿಯಲ್ಲಿ ನಾಲ್ಕು ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸುವ ವಿಚಾರವಾಗಿ ಶೀಘ್ರದಲ್ಲೇ ಸಭೆ ಕರೆಯಲಿದ್ದು ಜಾತಿ, ಪ್ರಾದೇಶಿಕತೆ, ಸಮಾನತೆಯ ಆಧಾರದ ಮೇಲೆ ಆ ಹುದ್ದೆ ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೆಹಲಿಯಲ್ಲಿ ಕೆಲ ಮುಖಂಡರನ್ನು ಭೇಟಿ ಮಾಡಿದ್ದೇನೆ. ನಾಲ್ಕೈದು ಜನ ಪ್ರಮುಖರು ಸಭೆಗೆ ಬರಲಿಲ್ಲ. ಕೆಲ ಶಾಸಕರು ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್‌ ಪಕ್ಷ ಮತ್ತಷ್ಟುಬಲಗೊಂಡಿದೆ ಎಂದರು. ಪಕ್ಷದ ಬಲವರ್ಧನೆಗೆ ಎಲ್ಲರೂ ಒಗ್ಗಟ್ಟಾಗಿ ಹೋಗಲು ತೀರ್ಮಾನಿಸಿದ್ದು ಉಪಚುನಾವಣೆಯ ಸೋಲಿನಿಂದ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಇದೇ ವೇಳೆ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಒಂದು ವೇಳೆ ಹೈಕಮಾಂಡ್‌ ನನಗೆ ಜವಾಬ್ದಾರಿ ವಹಿಸಿದರೆ ನಿಭಾಯಿಸಲು ಸಿದ್ಧ ಎಂದು ಅವರು ಸ್ಪಷ್ಟಪಡಿಸಿದರು. ನಾನು ಯಾವುದೇ ಸ್ಥಾನಕ್ಕೆ ಲಾಬಿ ಮಾಡಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಹೈಕಮಾಂಡ್‌ ಮೇಲೆ ಎಲ್ಲ ಜವಾಬ್ದಾರಿ ಇದೆ. ಯಾರೇ ಕೆಪಿಸಿಸಿ ಅಧ್ಯಕ್ಷರಾದರೂ ಅವರಿಗೆ ಸಹಕಾರ ಕೊಡಲು ತೀರ್ಮಾನ ಮಾಡಿದ್ದೇನೆ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.

click me!