ರಾಜ್ಯದಲ್ಲಿ ಎಲ್ಲಾ ಭ್ರಷ್ಟಾಚಾರ, ಅನಾಚಾರ ಮಾಡಿ ಅಧಿಕಾರ ಕಳೆದುಕೊಂಡವರು ನೀವು (ಬಿಜೆಪಿಯವರು). ರಾಜಕೀಯಕ್ಕಾಗಿ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದೀರಿ. ನಿಮ್ಮ ಎಲ್ಲಾ ಹಗರಣ ಹೊರತೆಗೆಯುತ್ತೇನೆ. ಭೋವಿ ನಿಗಮದಿಂದ ಹಿಡಿದು ಎಲ್ಲಾ ಅಕ್ರಮಗಳನ್ನೂ ಹೊರಗೆಡವುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆ (ಜು.19): ರಾಜ್ಯದಲ್ಲಿ ಎಲ್ಲಾ ಭ್ರಷ್ಟಾಚಾರ, ಅನಾಚಾರ ಮಾಡಿ ಅಧಿಕಾರ ಕಳೆದುಕೊಂಡವರು ನೀವು (ಬಿಜೆಪಿಯವರು). ರಾಜಕೀಯಕ್ಕಾಗಿ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದೀರಿ. ನಿಮ್ಮ ಎಲ್ಲಾ ಹಗರಣ ಹೊರತೆಗೆಯುತ್ತೇನೆ. ಭೋವಿ ನಿಗಮದಿಂದ ಹಿಡಿದು ಎಲ್ಲಾ ಅಕ್ರಮಗಳನ್ನೂ ಹೊರಗೆಡವುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಈ ಹೇಳಿಕೆ ವಿಧಾನಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ಗದ್ದಲ ಸೃಷ್ಟಿಸಿತು.
ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು, ‘100 ಪರ್ಸೆಂಟ್ ಸರ್ಕಾರ...’ ‘ಪೇ-ಸಿಎಂ’ ಎಂದು ಆರೋಪ ಮಾಡಿದರು. ಆದರೆ, ಅಶ್ವತ್ಥನಾರಾಯಣ್ ಹದ್ದು ಮೀರಿ ಮಾತನಾಡುತ್ತಿದ್ದು, ಅವರನ್ನು ಸದನದಿಂದ ಅಮಾನತು ಮಾಡುವಂತೆ ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಈ ವೇಳೆ ಎರಡೂ ಪಕ್ಷಗಳ ಸದಸ್ಯರ ನಡುವೆ ತೀವ್ರ ಆರೋಪ-ಪ್ರತ್ಯಾರೋಪ ನಡೆಯಿತು.ಮೊದಲಿಗೆ ವಾಲ್ಮೀಕಿ ನಿಗಮದ ಹಗರಣ ಕುರಿತ ಚರ್ಚೆಯಲ್ಲಿ ಮಾತನಾಡಿದ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ‘ಸರ್ಕಾರ ದಲಿತರ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.
ವಾಲ್ಮೀಕಿ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು: ವಿಜಯೇಂದ್ರ
ಮಧ್ಯ ಪ್ರವೇಶಿಸಿದ ಸಿದ್ದರಾಮಯ್ಯ, ‘ದಲಿತ ಪದ ಬಳಕೆ ಮಾಡುವಂತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಎಂದು ಹೇಳಿ’ ಎಂದಾಗ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಡಾ.ಸಿ.ಎನ್ ಅಶ್ವತ್ಥ್ನಾರಾಯಣ್, ಸುರೇಶ್ ಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ‘ಅಹಿಂದ’ ಮೂಲಕ ದಲಿತ ಎಂಬುದನ್ನು ಬಳಸಿದ್ದೇ ನೀವಲ್ಲವೇ ಎಂದು ತಿರುಗೇಟು ನೀಡಿದರು.ಸಿದ್ದರಾಮಯ್ಯ, ‘ಬಿಜೆಪಿಯವರಿಗೆ ಆ ಪದ ಬಳಸುವ ನೈತಿಕತೆಯಿಲ್ಲ. ಅವರು ಸಾಮಾಜಿಕ ನ್ಯಾಯದ ವಿರೋಧಿಗಳು’ ಎಂದು ದೂರಿದರು. ಅಶ್ವತ್ಥನಾರಾಯಣ್ ಮಧ್ಯಪ್ರವೇಶಿಸಿ ನಿಮ್ಮ ಸರ್ಕಾರದಲ್ಲೇ ದಲಿತರ ಹಣ ಲೂಟಿ ಆಗಿದೆಯೆಲ್ಲಾ ಎಂದಾಗ ಸಿಟ್ಟಾದ ಸಿದ್ದರಾಮಯ್ಯ, ‘ಹೇ ಅಶ್ವತ್ಥನಾರಾಯಣಗೌಡ, ನಿಮ್ಮ ಹಗರಣಗಳು ಏನೇನಿವೆ ಎಂದು ತೆಗೆಯಬೇಕಾ? ಎಲ್ಲವನ್ನೂ ತೆಗೆಯುತ್ತೇನೆ’ ಎಂದು ಗುಡುಗಿದರು.
ಈ ವೇಳೆ ಅಶ್ವತ್ಥನಾರಾಯಣ್ ಅವರು ಏರು ಧ್ವನಿಯಲ್ಲಿ ‘ಪೇ ಸಿಎಂ, 100 ಪರ್ಸೆಂಟ್ ಸರ್ಕಾರ’ ಎಂದು ಘೋಷಣೆ ಕೂಗುತ್ತಾ ‘ಏನು ಬೆದರಿಕೆ ಹಾಕುತ್ತಿದ್ದೀರಾ? ಯಾವ ಹಗರಣ ತೆಗೆಯುತ್ತೀರೋ ತೆಗೆಯಿರಿ’ ಎಂದು ಆಗ್ರಹಿಸಿದರು. ಆಕ್ರೋಶಗೊಂಡ ಸಿದ್ದರಾಮಯ್ಯ, ‘ನಿನಗಿಂತ ಜೋರು ಧ್ವನಿಯಲ್ಲಿ ಮಾತನಾಡಲು ನನಗೂ ಬರುತ್ತದೆ. ನೀವೆಲ್ಲಾ ಎದ್ದು ನಿಂತರೂ ನಾನು ಭಯಪಡುವುದಿಲ್ಲ. ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿದ್ದವರು ನಿಮ್ಮ ಪಕ್ಷದವರು. ನಿಮ್ಮ ಎಲ್ಲಾ ಹಗರಣ ಹೊರತೆಗೆಯುತ್ತೇನೆ. ತೆಗೆಯಲಾ? ಭ್ರಷ್ಟಾಚಾರ, ಅನಾಚಾರ ಮಾಡಿ ಅಧಿಕಾರ ಕಳೆದುಕೊಂಡ ನೀವು ನಮಗೆ ಹೇಳುತ್ತೀರಾ? ಎಪಿಎಂಸಿ ಹಗರಣ, ಭೋವಿ ನಿಗಮ, ಟ್ರಕ್ ಟರ್ಮಿನಲ್ ಹಗರಣ ಎಲ್ಲವನ್ನೂ ತೆಗೆಯುತ್ತೇನೆ’ ಎಂದು ಹೇಳಿದರು.
ಸ್ಕೈಡೆಕ್ ನಿರ್ಮಾಣ, ಸುರಂಗ ರಸ್ತೆ ಸೇರಿದಂತೆ ಬೆಂಗಳೂರು ಅಭಿವೃದ್ಧಿ ವಿಚಾರಗಳ ಬಗ್ಗೆ ಸಿಎಂ ಸಭೆ!
ದಿನೇಶ್ ಗುಂಡೂರಾವ್ ಕಿಡಿ: ಈ ವೇಳೆ ಮುಖ್ಯಮಂತ್ರಿಗಳ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದ ಅಶ್ವತ್ಥನಾರಾಯಣ್ ನಡೆಗೆ ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಸೇರಿ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ದಿನೇಶ್ ಗುಂಡೂರಾವ್ ಮಾತನಾಡಿ, ‘ಹಿಂದೆ ಉಪಮುಖ್ಯಮಂತ್ರಿ ಆಗಿದ್ದವರು. ನೀವೇನೂ ಅನಕ್ಷರಸ್ಥರಲ್ಲ. ನೀವು ಯಾವ ರೀತಿಯ ವೈದ್ಯರೋ ಗೊತ್ತಿಲ್ಲ. ಸದನದಲ್ಲಿ ಗೂಂಡಾಗಿರಿ ಮಾಡುವುದು ಬಿಡಿ’ ಎಂದಾಗ ಇಬ್ಬರ ನಡುವೆಯೂ ವಾಕ್ಸಮರ ನಡೆಯಿತು.