ಬಿಜೆಪಿಯವರು ಬಜರಂಗ ಬಲಿ ಹೆಸರನ್ನು ಕೇವಲ ತಮ್ಮ ಮತ ಗಳಿಕೆಗೆ ಮಾತ್ರ ಬಳಸುತ್ತಾರೆ. ಆದರೆ, ನಾವು ಭ್ರಷ್ಟಾಚಾರ ತೊಲಗಿಸಲು ಈ ಘೋಷಣೆ ಕೂಗುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಹುಬ್ಬಳ್ಳಿ (ಮೇ.07): ಬಿಜೆಪಿಯವರು ಬಜರಂಗ ಬಲಿ ಹೆಸರನ್ನು ಕೇವಲ ತಮ್ಮ ಮತ ಗಳಿಕೆಗೆ ಮಾತ್ರ ಬಳಸುತ್ತಾರೆ. ಆದರೆ, ನಾವು ಭ್ರಷ್ಟಾಚಾರ ತೊಲಗಿಸಲು ಈ ಘೋಷಣೆ ಕೂಗುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಜೊತೆಗೆ, ‘ಜೈ ಬಜರಂಗ ಬಲಿ, ತೋಡದೋ ಭ್ರಷ್ಟಾಚಾರ ಕೇ ನಲ್ಲಿ’ (ಬಜರಂಗ ಬಲಿಗೆ ಜಯವಾಗಲಿ, ಭ್ರಷ್ಟಾಚಾರದ ನಳವನ್ನು ಕಿತ್ತು ಹಾಕಿ)’ ಎಂಬ ಘೋಷಣೆ ಕೂಗಿದ್ದಾರೆ. ಆ ಮೂಲಕ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಬಜರಂಗ ದಳ ನಿಷೇಧ ಕುರಿತ ಬಿಜೆಪಿ ಟೀಕೆಗೆ ತಿರುಗೇಟು ನೀಡಿದರು.
ನಗರದಲ್ಲಿ ಶನಿವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬೃಹತ್ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಖರ್ಗೆ, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು. ‘ಜೈ ಬಜರಂಗಬಲಿ ತೋಡದೋ ಭ್ರಷ್ಟಾಚಾರ ಕೇ ನಲ್ಲಿ’ ಎಂಬ ಘೋಷಣೆಯೊಂದಿಗೆ ತಮ್ಮ ಪ್ರಚಾರ ಭಾಷಣ ಆರಂಭಿಸಿದ ಖರ್ಗೆ, ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟರು.
ಚಿತ್ತಾಪುರ ಬಿಜೆಪಿ ಅಭ್ಯರ್ಥಿ ರಾಠೋಡ್‌ರಿಂದ ಖರ್ಗೆ ಕುಟುಂಬದ ಹತ್ಯೆ ಸಂಚು: ಸುರ್ಜೇವಾಲಾ ಆರೋಪ
ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಚಕಾರ ಎತ್ತುತ್ತಿಲ್ಲ. ‘ನ ಖಾವುಂಗಾ, ನ ಖಾನೆ ದೂಂಗಾ’ ಎನ್ನುತ್ತಾ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡುತ್ತಿದ್ದಾರೆ. ಅವರ ಪಕ್ಕದಲ್ಲೇ ಇದ್ದವರು ಭಾರೀ ಭಾರೀ ತಿನ್ನುತ್ತಿದ್ದಾರೆ. ಅವರ ಪರವಾಗಿ ಇದೀಗ ಪ್ರಚಾರಕ್ಕೆ ಬಂದಿದ್ದಾರೆ. ರಾಜ್ಯದಲ್ಲಿ ಇರುವುದು 40% ಸರ್ಕಾರ. ಈ ಬಗ್ಗೆ ಗುತ್ತಿಗೆದಾರರೇ ದೂರು ನೀಡಿದರೂ ಮೋದಿಯವರು ಕ್ರಮ ಕೈಗೊಳ್ಳಲಿಲ್ಲ. ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾದರೂ ಚಕಾರ ಎತ್ತುತ್ತಿಲ್ಲ ಎಂದು ಟೀಕಿಸಿದರು.
ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಕೇಂದ್ರ ಸರ್ಕಾರದಲ್ಲೇ 30 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಾಗಿವೆ. 25-30 ಕೋಟಿ ಜನ ನಿರುದ್ಯೋಗಿಗಳಾಗಿದ್ದಾರೆ. ರಾಜ್ಯದಲ್ಲೂ 2.5 ಲಕ್ಷ ಹುದ್ದೆಗಳು ಖಾಲಿಯಿವೆ. ಈ ಬಗ್ಗೆ ಮೋದಿ ಚಕಾರ ಎತ್ತುತ್ತಿಲ್ಲ. ಬಡವರಿಗೆ ಉದ್ಯೋಗ ನೀಡಿದರೆ ಆರ್ಥಿಕವಂತರಾಗುತ್ತಾರೆ ಎಂಬ ಭಯ ಅವರನ್ನು ಕಾಡುತ್ತಿರಬಹುದು ಎಂದು ವ್ಯಂಗ್ಯವಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಪ್ರಿಯಾಂಕ್ ಖರ್ಗೆ ಪತ್ನಿ ಆರೋಗ್ಯಕ್ಕಾಗಿ ವಿಶೇಷ ಪೂಜೆ: ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರ ಧರ್ಮಪತ್ನಿ ಶೃತಿ ಪ್ರಿಯಾಂಕ್ ಖರ್ಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಹದಿನೈದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಯುವ ಮುಖಂಡ ಖರ್ಗೆ ಕುಟುಂಬದ ಅಭಿಮಾನಿ ರವಿ ಗೌರ ಅವರು ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ಮಹಾರಾಜರ ದೇವಸ್ಥಾನದಲ್ಲಿ ವಿಶೇಷ ಮಹಾಪೂಜೆ ನಡೆಸಿದರು.
ಹಿಂದೂ ಅಸ್ಮಿತೆಗೆ ಕಾಂಗ್ರೆಸ್ ಏಟು: ಸಿಎಂ ಯೋಗಿ ಆದಿತ್ಯನಾಥ್ ಕಿಡಿ
ನಂತರ ಮಾತನಾಡಿದ ಅವರು ಸಧ್ಯ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುತ್ತಿವೆ. ಪ್ರಿಯಾಂಕ್ ಖರ್ಗೆ ಅವರು ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅತ್ತ ಅವರ ಕುಟುಂಬದಲ್ಲಿ ಪತ್ನಿ, ಸಹೋದರನಿಗೆ ಅನಾರೋಗ್ಯ ಕಾಡುತ್ತಿದೆ. ಎರಡು ಸಂದಿಗ್ಧ ಪರಿಸ್ಥಿತಿಗಳಲ್ಲಿ ಪ್ರಿಯಾಂಕ್ ಖರ್ಗೆ ಅವರು ಇದ್ದಾರೆ. ಜೊತೆಗೆ ಅವರ ಕುಟುಂಬಕ್ಕೆ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಜೀವ ಬೆದರಿಕೆ ಹಾಕಿರುವುದು ಇನ್ನಷ್ಟುಆತಂಕಕ್ಕೆ ಕಾರಣವಾಗಿದೆ. ಪ್ರಿಯಾಂಕ್ ಖರ್ಗೆ ಅವರ ಪತ್ನಿ ಶೃತಿ ಬೇಗ ಗುಣಮುಖರಾಗಿ ಮನೆಗೆ ಬರಲಿ, ಜೊತೆಗೆ ಅವರ ಕುಟುಂಬಕ್ಕೆ ಬೆದರಿಕೆ ಹಾಕಿದವರ ಮೇಲೆ ಕಠಿಣ ಕ್ರಮವಾಗಬೇಕೆಂದರು. ಈ ಸಂದರ್ಭದಲ್ಲಿ ಮುಖಂಡರಾದ ಜೈಭೀಮ್ ತಳಕೇರಿ, ಮಂಜನಾಥ ಹೊಸಮನಿ ಇದ್ದರು.