ಚಿತ್ತಾಪುರ ಬಿಜೆಪಿ ಅಭ್ಯರ್ಥಿ ರಾಠೋಡ್‌ರಿಂದ ಖರ್ಗೆ ಕುಟುಂಬದ ಹತ್ಯೆ ಸಂಚು: ಸುರ್ಜೇವಾಲಾ ಆರೋಪ

By Kannadaprabha News  |  First Published May 7, 2023, 8:02 AM IST

ಬಿಜೆಪಿ ತನ್ನ ದ್ವೇಷದ ಮೂಲಕ ಕರ್ನಾಟಕದ ಮಣ್ಣಿನ ಮಗ, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬವನ್ನು ಕೊಲ್ಲುವ ಸಂಚು ರೂಪಿಸಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಗಂಭೀರ ಆರೋಪ ಮಾಡಿದ್ದಾರೆ.


ಬೆಂಗಳೂರು (ಮೇ.07): ‘ಬಿಜೆಪಿ ತನ್ನ ದ್ವೇಷದ ಮೂಲಕ ಕರ್ನಾಟಕದ ಮಣ್ಣಿನ ಮಗ, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬವನ್ನು ಕೊಲ್ಲುವ ಸಂಚು ರೂಪಿಸಿದೆ. ಸಾಕಷ್ಟುಕುತಂತ್ರಗಳ ಹೊರತಾಗಿಯೂ ಯಶಸ್ಸು ಕಾಣದ ಬಿಜೆಪಿ ಕೊನೆಯದಾಗಿ ತಮ್ಮ ಬತ್ತಳಿಕೆಯಿಂದ ಹತ್ಯೆ ಅಸ್ತ್ರ ಪ್ರಯೋಗಿಸಿದೆ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ಬೆನ್ನಲ್ಲೇ ಲೋಕಸಭೆ ಮಾಜಿ ಸ್ಪೀಕರ್‌ ಮೀರಾಕುಮಾರಿ ನೇತೃತ್ವದ ನಿಯೋಗವು ಈ ಬಗ್ಗೆ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ವಿರುದ್ಧ ದೂರು ದಾಖಲಿಸಿದೆ. ಕೂಡಲೇ ಅಗತ್ಯ ಕಾನೂನು ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸಬೇಕು. ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಠೋಡ್‌ ಅವರದ್ದು ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದಾರೆ. ಆಡಿಯೋದಲ್ಲಿ ಹತ್ಯೆ ಬಗ್ಗೆ ರಾಠೋಡ್‌ ಆಡಿದ್ದಾರೆ ಎನ್ನಲಾದ ಮಾತುಗಳಿವೆ. ‘ಎಐಸಿಸಿ ಅಧ್ಯಕ್ಷರನ್ನು ಹತ್ಯೆ ಮಾಡಲು ಸಂಚು ರೂಪಿಸುವುದು ಅಪಾಯಕಾರಿ ನಡೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ. ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿದ್ದ ಬಿಜೆಪಿ ಇದೀಗ ನಾಯಕರ ಹತ್ಯೆಗೂ ಮುಂದಾಗಿದ್ದು, ಇದಕ್ಕೆ 6.5 ಕೋಟಿ ಕನ್ನಡಿಗರು ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.

Tap to resize

Latest Videos

ಗ್ಯಾರಂಟಿ ಈಡೇರಿಸಿದ್ದೇವೆ: ಮೋದಿ ವಿರುದ್ಧ ಸೋನಿಯಾ ಗಾಂಧಿ ಕಿಡಿ

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನ ಕಾಂಗ್ರೆಸ್‌ ಪಕ್ಷಕ್ಕೆ ಸಂಪೂರ್ಣ ಬೆಂಬಲ ತೋರುತ್ತಿರುವುದರಿಂದ ಕಂಗೆಟ್ಟಿರುವ ಬಿಜೆಪಿಯು ಇಡೀ ಕುಟುಂಬದ ಹತ್ಯೆ ಮಾಡುವ ಮಟ್ಟಕ್ಕೆ ಇಳಿದಿದೆ. ಬಿಜೆಪಿ ಪಕ್ಷ ಮಲ್ಲಿಕಾರ್ಜು ಖರ್ಗೆ ಅವರ ಹತ್ಯೆಗೆ ಸಂಚು ರೂಪಿಸುವಷ್ಟುನೀಚ ಮಟ್ಟಕ್ಕೆ ಇಳಿಯುವುದಾದರೆ, ಅವರ ಹತ್ಯೆ ಮಾಡಿ. ಆ ಮೂಲಕವಾದರೂ ಬಿಜೆಪಿ ರಕ್ತದಾಹ ನೀಗುವುದಾದರೆ ಅವರನ್ನು ಹತ್ಯೆ ಮಾಡಿ’ ಎಂದು ಹರಿಹಾಯ್ದರು. ‘ನರೇಂದ್ರ ಮೋದಿ ಹಾಗೂ ಬೊಮ್ಮಾಯಿ ಅವರ ಆತ್ಮೀಯ ನೀಲಿ ಕಂಗಳ ಹುಡುಗ ಹಾಗೂ ರಾಠೋಡ್‌ ಅವರ ಆಡಿಯೋದಲ್ಲಿ ಈ ಸಂಚು ಸ್ಪಷ್ಟವಾಗಿದೆ. ಇದು ಕೇವಲ ಖರ್ಗೆ ಅವರ ಮೇಲಿನ ಸಂಚಲ್ಲ ಕನ್ನಡಿಗರ ಮೇಲಿನ ಸಂಚು’ ಎಂದು ದೂರಿದರು.

‘ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಖರ್ಗೆ ಅವರ ವಿರುದ್ಧ ದ್ವೇಷ ಕಾರುತ್ತಲೆ ಬಂದಿದೆ. ಖರ್ಗೆ ಅವರು ದಲಿತ ಹಾಗೂ ಕಾರ್ಮಿಕ ಕುಟುಂಬದಲ್ಲಿ ಜನಿಸಿ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಸ್ಥಾನದಿಂದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೆ ಬೆಳೆದು ಬಂದಿರುವುದನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಫೆ.27, 2023ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮದಲ್ಲಿ ಛತ್ರಿ ಕೆಳಗೆ ನಿಂತಿಲ್ಲ ಎಂದು ಹೇಳುವ ಮೂಲಕ ಖರ್ಗೆ ಅವರನ್ನು ಲೇವಡಿ ಮಾಡಿದ್ದರು.’

‘ಇನ್ನು 2023ರ ಮೇ 2 ರಂದು ಬಿಜೆಪಿ ರಾಜಸ್ತಾನದ ಶಾಸಕ ಹಾಗೂ ಪ್ರಧಾನ ಕಾರ್ಯದರ್ಶಿ ಮದನ್‌ ದಿಲಾವರ್‌ ಅವರು ಖರ್ಗೆ ಅವರಿಗೆ 80 ವರ್ಷ ವಯಸ್ಸಾಗಿದ್ದು, ದೇವರು ಅವರನ್ನು ಯಾವಾಗ ಬೇಕಾದರೂ ಕರೆಸಿಕೊಳ್ಳಬಹುದು ಎಂದು ಖರ್ಗೆ ಅವರ ಸಾವನ್ನು ಬಯಸಿದ್ದರು. ಈಗ ಬಿಜೆಪಿ ನಾಯಕರು ಬಹಿರಂಗವಾಗಿ ಖರ್ಗೆ ಹಾಗೂ ಅವರ ಕುಟುಂಬದ ಹತ್ಯೆಗೆ ಸಂಚು ರೂಪಿಸಿದ್ದಾರೆ’ ಎಂದು ಕಿಡಿ ಕಾರಿದರು.

‘ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೀರಾ?’ ಎಂಬ ಪ್ರಶ್ನೆಗೆ, ‘ಚುನಾವಣಾ ಆಯೋಗ ಕೇವಲ ಕಾಂಗ್ರೆಸ್‌ ನಾಯಕರಿಗೆ ಮಾತ್ರ ನೋಟಿಸ್‌ ನೀಡುತ್ತದೆ. ಅಮಿತ್‌ ಶಾ, ಮೋದಿ ಅವರು ಚುನಾವಣಾ ಆಯೋಗ ಹಾಗೂ ದೇಶದ ಕಾನೂನನ್ನು ನಿಯಂತ್ರಿಸುತ್ತಿದ್ದಾರೆ. ಬಿಜೆಪಿ ನಾಯಕರು ನಿರಂತರವಾಗಿ ಕಾನೂನು ಉಲ್ಲಂಘನೆ ಮಾಡುತ್ತಿದ್ದರೂ ಚುನಾವಣಾ ಆಯೋಗ ಯಾವ ಕ್ರಮ ಕೈಗೊಂಡಿದೆ?’ ಎಂದು ಮರು ಪ್ರಶ್ನೆ ಮಾಡಿದರು.

ಆಡಿಯೋದಲ್ಲೇನಿದೆ?: ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್‌ ಅವರು ಬಿಜೆಪಿ ಮುಖಂಡರೊಬ್ಬರ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬವನ್ನು ‘ಸಾಫ್‌’ ಮಾಡುತ್ತೇನೆ ಎಂದು ಹೇಳುತ್ತಾರೆ. ‘ನನ್ನ ಮೇಲೆ 44 ಪ್ರಕರಣಗಳಿವೆ. ಅದರ ಪಟ್ಟಿಕೊಡುವಂತೆ ಕೇಳಿ’ ಎಂದು ರಾಠೋಡ್‌ ಹೇಳುತ್ತಾರೆ. ಅದಕ್ಕೆ ಬಿಜೆಪಿ ಮುಖಂಡ, ‘ಖರ್ಗೆ ಅವರ ಮೊಬೈಲ್‌ ನಂಬರ್‌ ಇದ್ದರೆ ಕೊಡಿ. ಅವರನ್ನೇ ಕೇಳುತ್ತೇನೆ’ ಎನ್ನುತ್ತಾರೆ. ಅದಕ್ಕೆ ರಾಠೋಡ್‌, ‘ಅವರ ನಂಬರ್‌ ನನ್ನಲ್ಲೂ ಇಲ್ಲ. ಇದ್ದರೆ ಖರ್ಗೆ ಮತ್ತು ಅವರ ಅವರ ಹೆಂಡತಿ, ಮಕ್ಕಳನ್ನು ಸಾಫ್‌ ಮಾಡುತ್ತೇನೆ. ಕರೆ ಮಾಡಿ ಬಾಯಿಗೆ ಬಂದಂತೆ ಬೈಯುತ್ತೇನೆ’ ಎನ್ನುತ್ತಾರೆ.

ಕಾಂಗ್ರೆಸ್‌ ಪಕ್ಷ ಸ್ಥಿಮಿತ ಕಳ್ಕೊಂಡಿದೆ: ಮಲ್ಲಿಕಾರ್ಜುನ ಖರ್ಗೆ ಅವರ ಹತ್ಯೆಗೆ ಮಣಿಕಂಠ ರಾಠೋಡ್‌ ಸಂಚು ರೂಪಿಸಿದ್ದಾರೆಂದು ಕಾಂಗ್ರೆಸ್‌ ಪಕ್ಷ ಆಡಿಯೋ ಬಿಡುಗಡೆ ಮಾಡಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ‘ಹತಾಶರಾಗಿ, ಸ್ಥಿಮಿತ ಕಳೆದುಕೊಂಡು ಕಾಂಗ್ರೆಸ್‌ ಪಕ್ಷ ಹೀಗೆ ವರ್ತಿಸುತ್ತಿದೆ’ ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಯಶವಂತಪುರದಲ್ಲಿ ಬಿಜೆಪಿ- ಕಾಂಗ್ರೆಸ್ಸಿಗರ ನಡುವೆ ಗಲಾಟೆ: ಕುಸುಮಾರನ್ನು ತಳ್ಳಾಡಿ, ದರ್ಪ ತೋರಿದ ಪೊಲೀಸರು?

ಖರ್ಗೆ ಮತ್ತು ಕುಟುಂಬಸ್ಥರ ಹತ್ಯೆ ಆಡಿಯೋ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಾಗುವುದು. ಆಡಿಯೋ ತಿರುಚಲಾಗಿದೆಯೇ ಎಂಬುದನ್ನು ನೋಡಬೇಕು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುವುದು.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕುಟುಂಬ ಸದಸ್ಯರನ್ನು ಸಾಫ್‌ ಮಾಡುತ್ತೇನೆ’ ಎಂದು ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ಹತ್ಯೆ ಬೆದರಿಕೆ ಒಡ್ಡಿರುವುದು ಅತ್ಯಂತ ಖಂಡನೀಯ. ಪೊಲೀಸರು ತಕ್ಷಣ ಆರೋಪಿ ರಾಠೋಡ್‌ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಖರ್ಗೆ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು’
- ಸಿದ್ದರಾಮಯ್ಯ, ವಿಧಾನಸಭೆ ವಿಪಕ್ಷ ನಾಯಕ

click me!