ನಾನು ರಾಮಮಂದಿರ ಪ್ರವೇಶಿಸಿದ್ದರೆ ಸಹಿಸುತ್ತಿದ್ದರೇ?: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

By Kannadaprabha NewsFirst Published Apr 20, 2024, 6:51 AM IST
Highlights

ನಾವು ಅಯೋಧ್ಯೆಗೆ ಹೋಗಬೇಡಿ ಎಂದು ಯಾರಿಗೂ ಹೇಳಿಲ್ಲ. ಯಾರಿಗೆ ಆಸ್ಥೆ (ನಂಬಿಕೆ) ಇದೆಯೋ ಅವರು ಹೋಗಲಿ. ನಾವು ಕೂಡ ಅನುಕೂಲಕರ ಸಮಯ ನೋಡಿಕೊಂಡು ಹೋಗುತ್ತೇವ. ‘ಪೂಜೆ ಮಾಡಲು ಅವಕಾಶ ಸಿಕ್ಕರೆ ನಾವು (ದಲಿತರು) ಎಲ್ಲ 33 ಕೋಟಿ ದೇವತೆಗಳನ್ನು ಪೂಜಿಸುತ್ತೇವೆ. ಏಕೆಂದರೆ ನಮಗೆ 33 ಕೋಟಿ ದೇವತೆಗಳಿದ್ದಾರೆ’ ಎಂದ ಖರ್ಗೆ

ನವದೆಹಲಿ(ಏ.20): ‘ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್‌ ಬಹಿಷ್ಕಾರ ಹಾಕಿತ್ತು ಹಾಗೂ ಈ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ’ ಎಂದು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಪರಿಶಿಷ್ಟರು ಎಂಬ ಕಾರಣಕ್ಕೆ ಮಂದಿರ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಿಲ್ಲ. ನೂತನ ಸಂಸತ್‌ ಭವನದ ಶಂಕುಸ್ಥಾಪನೆಯನ್ನು ಇದೇ ಕಾರಣಕ್ಕೆ ನೀವು ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್‌ರಿಂದ ನೆರವೇರಿಸಲಿಲ್ಲ. ಇನ್ನು ದಲಿತನಾದ ನಾನು ರಾಮಮಂದಿರ ಉದ್ಘಾಟನೆಗೆಂದು ಬಂದಿದ್ದರೆ ಸಹಿಸುತ್ತಿದ್ದರೇ?’ ಎಂದು ಪ್ರಶ್ನಿಸಿದ್ದಾರೆ.

‘ಇಂಡಿಯನ್‌ ಎಕ್ಸ್‌ಪ್ರೆಸ್’ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ‘ದಲಿತರನ್ನು ಇಂದು ಕೇವಲ ಬಾಯಿಮಾತಿನಲ್ಲಿ ಹೊಗಳಿ ನಿಜ ಜೀವನದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕುಡಿಯಲು ನೀರು ಕೊಡಲ್ಲ, ದೇಗುಲ ಪ್ರವೇಶಕ್ಕೆ ಅವಕಾಶ ನೀಡಲ್ಲ. ಶಿಕ್ಷಣ ಕೊಡಿಸಲ್ಲ. ದಲಿತ ವರ ಕುದುರೆ ಏರಿದರೆ ಆತನನ್ನು ಹೊಡೆಯಲಾಗುತ್ತದೆ. ಇನ್ನೂ ಅನೇಕ ದೇವಾಲಯಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಪ್ರವೇಶಕ್ಕೆ ಅನುಮತಿ ಇಲ್ಲ. ಹೀಗಿದ್ದಾಗ ನಾನು (ಅಯೋಧ್ಯೆಗೆ) ಹೋಗಿದ್ದರೆ ಅವರು (ಅದನ್ನು) ಸಹಿಸಿಕೊಳ್ಳುತ್ತಿದ್ದರೇ?’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ತೆಗಳುವುದೇ ಮೋದಿ ಸಾಧನೆ, ಅವರು ಸುಳ್ಳಿನ ಸರದಾರ: ಮಲ್ಲಿಕಾರ್ಜುನ ಖರ್ಗೆ

‘ಹಾಗಂತ ನಾವು ಅಯೋಧ್ಯೆಗೆ ಹೋಗಬೇಡಿ ಎಂದು ಯಾರಿಗೂ ಹೇಳಿಲ್ಲ. ಯಾರಿಗೆ ಆಸ್ಥೆ (ನಂಬಿಕೆ) ಇದೆಯೋ ಅವರು ಹೋಗಲಿ. ನಾವು ಕೂಡ ಅನುಕೂಲಕರ ಸಮಯ ನೋಡಿಕೊಂಡು ಹೋಗುತ್ತೇವೆ’ ಎಂದ ಖರ್ಗೆ, ‘ಪೂಜೆ ಮಾಡಲು ಅವಕಾಶ ಸಿಕ್ಕರೆ ನಾವು (ದಲಿತರು) ಎಲ್ಲ 33 ಕೋಟಿ ದೇವತೆಗಳನ್ನು ಪೂಜಿಸುತ್ತೇವೆ. ಏಕೆಂದರೆ ನಮಗೆ 33 ಕೋಟಿ ದೇವತೆಗಳಿದ್ದಾರೆ’ ಎಂದರು.

ಹೆಗಡೆ ಮೇಲೇಕೆ ಕ್ರಮವಿಲ್ಲ?:

ಇದೇ ವೇಳೆ, ‘ಬಿಜೆಪಿಗೆ 400ಕ್ಕಿಂತ ಹೆಚ್ಚ ಸ್ಥಾನ ಬಂದರೆ ಸಂವಿಧಾನ ಬದಲಿಸುತ್ತೇವೆ’ ಎಂದ ಕೆನರಾ ಸಂಸದ ಅನಂತಕುಮಾರ ಹೆಗಡೆ ಹಾಗೂ ಇತರ ಕೆಲವು ಬಿಜೆಪಿ ಮುಖಂಡರ ಮೇಲೆ ಪ್ರಧಾನಿ ನರೇಂದ್ರ ಮೋದಿ ಇನ್ನೂ ಏಕೆ ಕ್ರಮ ಜರುಗಿಸಿಲ್ಲ?’ ಎಂದು ಪ್ರಶ್ನಿಸಿದರು.

click me!