ಮಂತ್ರಿಗಳ ಸಾಧನೆ ಕೇಳಿ 6 ತಿಂಗಳಾದ್ರೂ ವರದಿ ಕೊಡದ್ದಕ್ಕೆ ಕಿಡಿ: ಸಚಿವರಿಗೆ ಖರ್ಗೆ ಚಾಟಿ

By Kannadaprabha News  |  First Published Dec 1, 2024, 4:29 AM IST

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚಿನ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಇತರೆ ಐದು ಮಂದಿ ಎಐಸಿಸಿ ಕಾರ್ಯದರ್ಶಿಗಳಿಂದ ರಾಜ್ಯದ ಸಚಿವರಿಗೆ ವಹಿಸಿದ್ದ ಜವಾಬ್ದಾರಿಗಳ ಬಗ್ಗೆ ವರದಿ ಕೇಳಿದ್ದಾರೆ. 


ಬೆಂಗಳೂರು(ಡಿ.01): ಇಲಾಖಾ ಸಾಧನೆ ಕುರಿತು ವರದಿ ಕೇಳಿ ಆರು ತಿಂಗಳ ಹಿಂದೆ ನೀಡಿದ ಸೂಚನೆ ಹಾಗೂ 100 ಬ್ಲಾಕ್ ಕಾಂಗ್ರೆಸ್ ಕಚೇರಿ ಆರಂಭಕ್ಕೆ ಸಿದ್ಧತೆ ನಡೆಸಲು 3 ತಿಂಗಳ ಹಿಂದೆ ನೀಡಿದ ನಿರ್ದೇಶನ ಬಗ್ಗೆ ನಿರ್ಲಕ್ಷ್ಯ ತೋರಿರುವ ಸಚಿವರ ವಿರುದ್ದ ಕಾಂಗ್ರೆಸ್ ಹೈಕಮಾಂಡ್ ತೀವ್ರ ಗರಂ ಆಗಿದೆ. 

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸಚಿವರು ಇಲಾಖಾವಾರು ತಮ್ಮ ಸಾಧನೆ ಹಾಗೂ ಪಕ್ಷ ಸಂಘಟನೆಗೆ ನೀಡಿರುವ ಕೊಡುಗೆಗಳ ಕುರಿತು ಸಾಧನಾ ಪುಸ್ತಕ ಸಿದ್ದಪಡಿಸಲು ಮತ್ತು ತಮ್ಮ ಕ್ಷೇತ್ರಗಳಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿ ಪ್ರಾರಂಭಿಸಲು ತರಾತುರಿಯಲ್ಲಿ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

Latest Videos

undefined

ಆಂತರಿಕ ಕಚ್ಚಾಟದಿಂದಾಗಿ ಹರ್ಯಾಣ, ಮಹಾರಾಷ್ಟ್ರದಲ್ಲಿ ಸೋತೆವು: ಮಲ್ಲಿಕಾರ್ಜುನ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚಿನ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಇತರೆ ಐದು ಮಂದಿ ಎಐಸಿಸಿ ಕಾರ್ಯದರ್ಶಿಗಳಿಂದ ರಾಜ್ಯದ ಸಚಿವರಿಗೆ ವಹಿಸಿದ್ದ ಜವಾಬ್ದಾರಿಗಳ ಬಗ್ಗೆ ವರದಿ ಕೇಳಿದ್ದಾರೆ. 

ಕಚೇರಿ ಬಗ್ಗೆ ನಿರ್ಲಕ್ಷ್ಯಕ್ಕೆ ಕಿಡಿ: 

ರಾಜ್ಯಾದ್ಯಂತ 100 ಹೊಸ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿ ಪ್ರಾರಂಭಿಸಲು ಸಿದ್ಧತೆ ನಡೆಸಿ ಮಾಹಿತಿ ನೀಡು ವಂತೆ ಕಾಂಗ್ರೆಸ್ ಹೈಕಮಾಂಡ್ ಮೂರು ತಿಂಗಳ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ನಿರ್ದೇಶಿಸಿತ್ತು. ಈ 100 ಬ್ಲಾಕ್ ಸಮಿತಿ ಕಚೇರಿಗಳನ್ನು ಡಿ.28ಕ್ಕೆ ಬೆಳಗಾವಿಯಲ್ಲಿ ನಡೆಯ ಲಿರುವ ಎಐಸಿಸಿಯ 100ನೇ ಅಧಿವೇಶನದಲ್ಲಿ ಸಂದರ್ಭದಲ್ಲಿ ವರಿಷ್ಠರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಉದ್ಘಾಟನೆ ಮಾಡುವುದು ಈ ನಿರ್ದೇಶನದ ಹಿಂದಿನ ಉದ್ದೇಶವಾಗಿತ್ತು.

ಆದರೆ, ಬಹಳಷ್ಟು ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿ ಸ್ಥಾಪನೆಗೆ ಆಸಕ್ತಿ ತೋರಿರಲಿಲ್ಲ. ಈ ಹಿನ್ನೆಲೆಯಲ್ಲಿ ಖರ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಎಷ್ಟೆಷ್ಟು ಕಚೇರಿ ಸಿದ್ದಪಡಿಸಲಾಗಿದೆ ಎಂಬುದರ ಬಗ್ಗೆ ಒಂದು ವಾರದಲ್ಲಿ ವರದಿ ನೀಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಮೂರು ತಿಂಗಳ ಹಿಂದೆಯೇ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿದ್ದರು. ಕಡಿಮೆ ಕಾಲಾವಕಾಶ ಇರುವುದರಿಂದ ಕೂಡಲೇ ನಿವೇಶನ ಪಡೆದು ಕಚೇರಿ ಆರಂಭಿಸಬೇಕು. ನಿವೇಶನ ಲಭ್ಯವಿಲ್ಲದಿದ್ದರೆ ಸ್ಥಳೀಯ ಸಂಸ್ಥೆಗಳಿಂದ ಸೂಕ್ತ ಬೆಲೆಗೆ ಮಂಜೂರು ಮಾಡಿಸಿಕೊಳ್ಳಬೇಕು.ಇಲ್ಲದಿದ್ದರೆ ಖಾಸಗಿಯವರಿಂದ ಖರೀದಿ ಮಾಡಿ ಆದರೂ ಸ್ಥಾಪಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ ಬಹುತೇಕ ಕಡೆ ಈ ಕೆಲಸ ಆಗಿಲ್ಲ. ಇದೀಗ ಹೈಕಮಾಂಡ್ ಗರಂ ಆಗಿದೆ.

ಕೆಲ ಸಚಿವರಿಂದ ತರಾತುರಿಯಲಿ ಈಗ ಸಾಧನೆ ಪುಸ್ತಕಗಳ ತಯಾರಿ! 

ಸಚಿವರ ಕಾರ್ಯಕ್ಷಮತೆ ಅಳೆಯಲು ಸಾಧನೆಗಳ ಕುರಿತು ವರದಿ ನೀಡುವಂತೆ ಆರು ತಿಂಗಳ ಹಿಂದೆಯೇ ಸೂಚಿಸಿದ್ದರೂ ಕೆಲ ಸಚಿವರು ಮಾತ್ರ ವರದಿ ನೀಡಿದ್ದರು. ಈ ಬಗ್ಗೆಯೂ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಸಚಿವರಿಗೆ ಒಂದು ವಾರದಲ್ಲಿ ವರದಿ ನೀಡುವಂತೆ ತಾಕೀತು ಮಾಡಿದ್ದಾರೆ. ಹೀಗಾಗಿ ರಾತ್ರೋರಾತ್ರಿ ಸಚಿವರ ಆಪ್ತ ಶಾಖೆ ಸಾಧನಾ ಪುಸ್ತಕದ ತಯಾರಿ ಹಾಗೂ ಮುದ್ರಣ ಕಾರ್ಯದಲ್ಲಿ ತೊಡಗಿದೆ. ಪಕ್ಷ ಸಂಘಟನೆ ಹಾಗೂ ಇಲಾಖೆಯಲ್ಲಿನ ಸಾಧನೆಗಳ ಬಗ್ಗೆ ಬಿಂಬಿಸುವ ಸಾಧನಾ ಸಿದ್ದಪಡಿಸಲಾಗುತ್ತಿದೆ. 

ಇವಿಎಂ ವಿರುದ್ಧ ಭಾರತ್‌ ಜೋಡೋ ರೀತಿ ರ್‍ಯಾಲಿ: ಮಲ್ಲಿಕಾರ್ಜುನ ಖರ್ಗೆ

ಜಿಲ್ಲಾ ಉಸ್ತುವಾರಿ ಸಚಿವರಾಗಿ, ಇಲಾಖಾ ಸಚಿವರಾಗಿ, ಉಪ ಚುನಾವಣೆ ಹಾಗೂ ಲೋಕಸಭೆ ಚುನಾವಣೆ, ನೆರೆ ರಾಜ್ಯಗಳ ಚುನಾವಣೆಗಳಿಗೆ ಪಕ್ಷದ ಪರವಾಗಿ ನೀಡಿರುವ ಕೊಡುಗೆಗಳನ್ನು ಹೈಲೈಟ್ ಮಾಡಿ ಸಚಿವ ಸ್ಥಾನ ಉಳಿಸಿಕೊಳ್ಳಲು ಕಸರತ್ತು ನಡೆಸಲಾಗುತ್ತಿದೆ.

ಹಾಸನ ರ್ಯಾಲಿ ಸಿದ್ಧತೆ ಬಗ್ಗೆ ನಿಗಾವಹಿಸಲು ಸೂಚನೆ 

ಡಿ.5ರಂದು ಹಮ್ಮಿಕೊಂಡಿರುವ ಹಾಸನ ಸಮಾವೇಶದ ಸಿದ್ಧತೆ ಬಗ್ಗೆ ನಿಗಾ ವಹಿಸಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ಸೂಚಿಸಿದ್ದಾರೆ. ಪಕ್ಷದ ವೇದಿಕೆ ಅಡಿಯಲ್ಲೇ ಸ್ವಾಭಿಮಾನಿ ಸಮಾವೇಶ ನಡೆಯಬೇಕು. ಈ ಬಗ್ಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಸಮಾವೇಶ ಯಶಸ್ವಿಗೊಳಿ ಸುವ ಬಗ್ಗೆ ಗಮನ ನೀಡಿ ಎಂದು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. ಹಿಂದುಳಿದ ವರ್ಗಗಳ ಜೊತೆ ಸೇರಿ ಕಾಂಗ್ರೆಸ್ ಈ ಸಮಾವೇಶ ನಡೆಸಲಿದೆ.

click me!