
ಬೆಂಗಳೂರು(ಜು.30): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಪ್ರತಿಪಕ್ಷಗಳ ಪಾದಯಾತ್ರೆ ಅವರ ಸಚ್ಚಾರಿತ್ರ್ಯಕ್ಕೆ ಮಸಿ ಬಳಿಯುವ ಷಡ್ಯಂತ್ರ. ಈ ಹುನ್ನಾರದ ವಿರುದ್ಧ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜನಜಾಗೃತಿ ಮೂಡಿಸಲಾಗುವುದು’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ಕೇವಲ ಸಿದ್ದರಾಮಯ್ಯ ಅವರ ಮೇಲೆ ನಡೆಸಿರುವ ಹುನ್ನಾರ ಅಲ್ಲ. ಇದು ಹಿಂದುಳಿದ ವರ್ಗಗಳ ಮೇಲೆ ನಡೆಸುತ್ತಿರುವ ದಾಳಿ. ಈ ಬಗ್ಗೆ ಅಹಿಂದ ವರ್ಗದವರು ಪ್ರತಿರೋಧದ ಹೋರಾಟ ನಡೆಸಲಿದ್ದಾರೆ’ ಎಂದು ಹೇಳಿದರು.
ಮುಡಾ ಕುರಿತು ಈಗಾಗಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ. ತನಿಖೆಯಿಂದ ಸತ್ಯ ಹೊರಬರಲಿದೆ. ಸತ್ಯ ಹೊರಗೆ ಬರುವವರೆಗೆ ಕಾಯುವ ತಾಳ್ಮೆ ಇಲ್ಲ. ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ಅವರ ಕ್ಲೀನ್ ಇಮೇಜ್‌ಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹುನ್ನಾರದ ವಿರುದ್ಧ ತುಮಕೂರಿನಲ್ಲಿ ಅತಿ ಹೆಚ್ಚು ಜನರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರತಿಭಟನೆ ದಿನಾಂಕದ ಬಗ್ಗೆ ಜಿಲ್ಲೆಯ ಅಹಿಂದ ನಾಯಕರ ಜತೆ ಚರ್ಚಿಸಿ ಘೋಷಿಸುತ್ತೇವೆ. ಈ ವಾರದಲ್ಲೇ ಹೋರಾಟ ನಡೆಸುತ್ತೇವೆ ಎಂದರು.
ಅಹಿಂದ ಸಮಾವೇಶ ನಡೆಸುತ್ತೀರಾ ಎಂಬ ಪ್ರಶ್ನೆಗೆ, ‘ಖಂಡಿತ ಸಂಘಟನೆ, ಸಮಾವೇಶ ಎಲ್ಲವನ್ನೂ ಮಾಡುತ್ತೇವೆ. ಜತೆಗೆ ನಮ್ಮ ಜಿಲ್ಲೆಯಲ್ಲಿ ನಡೆಯಲಿರುವ ಹೋರಾಟ ಮೈಸೂರು ಸೇರಿದಂತೆ ರಾಜ್ಯಾದ್ಯಂತ ವಿಸ್ತರಣೆ ಆಗಬಹುದು. ಸದ್ಯಕ್ಕೆ ನಮ್ಮ ಜಿಲ್ಲೆಯಲ್ಲಿ ಹೋರಾಟ ನಡೆಸುತ್ತಿದ್ದೇವೆ’ ಎಂದು ಸ್ಪಷ್ಟನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.