
ಬೆಂಗಳೂರು (ಏ.28): ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ವಿಚಾರ ಕುರಿತ ಗೊಂದಲಗಳ ನಡುವೆಯೇ ಅಹಿಂದ ನಾಯಕರು ಹುಬ್ಬಳ್ಳಿಯಲ್ಲಿ ನಡೆಸಲು ಉದ್ದೇಶಿಸಿರುವ ಬೃಹತ್ ಅಹಿಂದ ಸಮಾವೇಶ ಹೊಸ ತಳಮಳ ಹುಟ್ಟು ಹಾಕಿದೆ.
ಮೂಲಗಳ ಪ್ರಕಾರ, ಅಹಿಂದ ಸಮಾವೇಶಕ್ಕೆ ಅವಕಾಶ ಬೇಡ ಎಂದು ಹೈಕಮಾಂಡ್ ಮೇಲೆ ಒಂದು ಬಣ ಒತ್ತಡ ನಿರ್ಮಾಣ ಮಾಡಿದ್ದರೆ, ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಮತ್ತೊಂದು ಬಣ ಸಮಾವೇಶಕ್ಕೆ ಅವಕಾಶ ನೀಡಲೇಬೇಕು ಎಂದು ಹೈಕಮಾಂಡ್ ಮನವೊಲಿಸಲು ಮುಂದಾಗಿದೆ.
ಈ ಉದ್ದೇಶಕ್ಕಾಗಿಯೇ ಸೋಮವಾರ ನವದೆಹಲಿಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಡಾ. ಎಚ್.ಸಿ. ಮಹಾದೇವಪ್ಪ ಅವರು ಅಹಿಂದ ಸಮಾವೇಶದ ಉದ್ದೇಶ ಮತ್ತು ಅದರ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಮೂಲಕವೇ ಸಮಾವೇಶ ಆಯೋಜಿಸುತ್ತಿದ್ದು, ಇದಕ್ಕೆ ಒಪ್ಪಿಗೆ ನೀಡುವಂತೆ ಕೋರಿದರು ಎನ್ನಲಾಗಿದೆ.
ಈ ರೀತಿ ಹಿರಿಯ ಸಚಿವರೇ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಅಹಿಂದ ಸಮಾವೇಶಕ್ಕಾಗಿ ಒತ್ತಡ ಹಾಕಲು ಕಾರಣ- ಕಾಂಗ್ರೆಸ್‌ನ ಮತ್ತೊಂದು ಬಣ ಇಂತಹ ಸಮಾವೇಶಕ್ಕೆ ಅವಕಾಶ ನೀಡಬಾರದು ಎಂದು ಹೈಕಮಾಂಡ್‌ಗೆ ಒತ್ತಡ ಹಾಕಿರುವುದು ಎನ್ನಲಾಗಿದೆ.
ಈ ಬಣವು, ‘ದಲಿತ ನಾಯಕರು ಚಿತ್ರದುರ್ಗದಲ್ಲಿ ದಲಿತ ಸಮಾವೇಶ ನಡೆಸಲು ಪ್ರಯತ್ನ ನಡೆಸಿದ್ದರು. ಅದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿತ್ತು. ಅದೇ ರೀತಿ ಅಹಿಂದ ಸಮಾವೇಶಕ್ಕೂ ಬ್ರೇಕ್ ಹಾಕಬೇಕು. ಈ ರೀತಿ ಜಾತಿ ಸಮಾವೇಶಗಳಿಗೆ ಅನುಮತಿ ನೀಡಿದರೆ ಪಕ್ಷಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಏನೇ ನಡೆದರೂ ಅದನ್ನು ಪಕ್ಷದ ವತಿಯಿಂದಲೇ ನಡೆಸಬೇಕು’ ಎಂದು ಹೈಕಮಾಂಡ್‌ಗೆ ಒತ್ತಡ ಹಾಕಿದೆ ಎನ್ನಲಾಗಿದೆ.
ಈ ಮಾಹಿತಿ ದೊರೆತ ಬೆನ್ನಲ್ಲೇ, ಅಹಿಂದ ನಾಯಕರು ಏಕೆ ಅಹಿಂದ ಸಮಾವೇಶ ಮುಖ್ಯ ಎಂದು ಹೈಕಮಾಂಡ್‌ಗೆ ಮನದಟ್ಟು ಮಾಡಿಕೊಡಲು ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ 2005ರಲ್ಲಿ ದೊಡ್ಡ ಮಟ್ಟದ ಅಹಿಂದ ಸಮಾವೇಶ ನಡೆಸಲಾಗಿತ್ತು. ಅದರಿಂದಾಗಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆಗ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಅಹಿಂದ ವರ್ಗ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿತ್ತು. ಅದಾದ ನಂತರ ಸತೀಶ್ ಜಾರಕಿಹೊಳಿ, ಡಾ. ಎಚ್.ಸಿ.ಮಹದೇವಪ್ಪ, ಬಿ.ಆರ್. ಪಾಟೀಲ್ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಇದರಿಂದ ಕಾಂಗ್ರೆಸ್‌ಗೆ ದೊಡ್ಡ ಬಲ ಬಂದಿದ್ದು, ನಂತರ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾದರು.ಇದೀಗ 2028 ಚುನಾವಣೆ ಗುರಿಯಿಟ್ಟುಕೊಂಡು ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಹಿಂದ ವರ್ಗವನ್ನು ಕಾಂಗ್ರೆಸ್ ಕಡೆಗೆ ಸೆಳೆಯುವ ಉದ್ದೇಶದೊಂದಿಗೆ ಅಹಿಂದ ಸಮಾವೇಶವನ್ನು ಏರ್ಪಡಿಸಲಾಗಿದೆ. ಇದರಿಂದ ಪಕ್ಷಕ್ಕೆ ಲಾಭ ಎಂದು ಹೈಕಮಾಂಡ್ ಮನದಟ್ಟು ಮಾಡಿಕೊಡುವ ಪ್ರಯತ್ನ ನಡೆಸಲಾಗಿದೆ ಎಂದು ಮೂಲಗಳು ಹೇಳುತ್ತವೆ.
ದಿಲ್ಲಿಯಲ್ಲಿ ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಚಿವರಾದ ಎಚ್.ಸಿ. ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಭೇಟಿ ಮಾಡಿದರು. ಅಧಿಕಾರ ಹಂಚಿಕೆ ಗೊಂದಲದ ಬಗ್ಗೆ ಹೈಕಮಾಂಡ್ ಮಧ್ಯಪ್ರವೇಶ ಮಾಡಬೇಕು ಎಂದು ಕೋರಿದರು.
ಸಿಎಂ ಬದಲಾವಣೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಚಾರ. ಆದರೆ, ಈ ಕುರಿತ ಗೊಂದಲ ಶೀಘ್ರ ಬಗೆಹರಿಯಬೇಕಿದೆ. ಈ ಕುರಿತ ಚರ್ಚೆ ನಿಲ್ಲಲೇಬೇಕು. ಗೊಂದಲಕ್ಕೆ ಹೈಕಮಾಂಡ್ ನಾಯಕರೇ ಪರಿಹಾರ ಹುಡುಕಬೇಕು.
- ಸತೀಶ ಜಾರಕಿಹೊಳಿ, ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.