'ಕೃಷಿ ಖಾತೆ ಮುಳ್ಳಿನ ಹಾಸಿಗೆ, ಆದರೂ ಕೇಳಿ ಪಡೆದಿದ್ದೇನೆ'

By Suvarna NewsFirst Published Feb 14, 2020, 4:42 PM IST
Highlights

ರೈತರ ಕಷ್ಟಗಳು ಗೊತ್ತಿವೆ, ಪರಿಹರಿಸಲು ಯತ್ನಿಸುವೆ: ಪಾಟೀಲ್‌| ಕೃಷಿ ಖಾತೆ ಮುಳ್ಳಿನ ಹಾಸಿಗೆ, ಆದರೂ ಕೇಳಿ ಪಡೆದಿದ್ದೇನೆ| 

ಬೆಂಗಳೂರು[ಫೆ.14]: ನಾನು ರೈತನ ಮಗ. ಕೃಷಿ ಖಾತೆ ಮುಳ್ಳಿನ ಹಾಸಿಗೆ ಎಂದು ಗೊತ್ತು. ಆದರೂ ಅದನ್ನೇ ಕೇಳಿ ಪಡೆದಿದ್ದೇನೆ ಎಂದು ನೂತನ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದ್ದಾರೆ.

ಸಚಿವರಾದ ನಂತರ ಗುರುವಾರ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಷ್ಟವಾದರೂ ರೈತರು ಮತ್ತು ಜನರೊಂದಿಗೆ ಇರಬಹುದು ಎಂಬ ಕಾರಣಕ್ಕೆ ಕೃಷಿ ಖಾತೆ ನೀಡುವಂತೆ ಮನವಿ ಮಾಡಿದ್ದೆ. ನಾನಾಗಿಯೇ ಬಯಸಿ ಕೃಷಿ ಖಾತೆ ಪಡೆದಿದ್ದೇನೆ. ರೈತರ ಮಗನಾಗಿ ಅವರ ಕಷ್ಟಗಳು ಗೊತ್ತಿವೆ. ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ. ಅದಕ್ಕಾಗಿಯೇ ಅರಣ್ಯ ಖಾತೆ ಬೇಡ ಎಂದು ಬಿಟ್ಟಿದ್ದೇನೆ ಎಂದರು.

ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಸಚಿವರಾದ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಮತ್ತೆ ಟೀಕೆ ಮಾಡುವುದು ಸರಿಯಲ್ಲ. ಅವರೇನು ಸುಪ್ರೀಂಕೋರ್ಟ್‌ಗಿಂತ ಮಿಗಿಲಾ? ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್‌ನಿಂದ ಕಾಂಗ್ರೆಸ್ಸಿಗೆ ಹೋದವರು. ಆಗ ಉಪಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಗೆದ್ದವರು. ಅವರಿಗೆ ನಮ್ಮನ್ನು ಟೀಕಿಸುವ ನೈತಿಕತೆ ಎಲ್ಲಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಇದ್ದು ಬಿಜೆಪಿಗೆ ಅಡ್ಡಮತದಾನ ಮಾಡಿ ಕಾನೂನು ಉಲ್ಲಂಘಿಸಿಲ್ಲ. ರಾಜೀನಾಮೆ ನೀಡಿದ್ದೇವೆ. ಸುಪ್ರೀಂಕೋರ್ಟ್‌ ತೀರ್ಪಿನಂತೆ ಜನತಾ ನ್ಯಾಯಾಲಯದಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಜನಾದೇಶ ಪಡೆದು ಬಂದಿದ್ದೇವೆ. ಹೀಗಿರುವಾಗ ಸಿದ್ದರಾಮಯ್ಯ ಅವರು ನಮ್ಮನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. ಪದೇ ಪದೇ ತಾನು ಕಾನೂನು ವಿದ್ಯಾರ್ಥಿ ಎಂದು ಹೇಳುವ ಅವರು ಕಾನೂನಿನ ಪ್ರಾಥಮಿಕ ಅಂಶಗಳನ್ನು ಮೊದಲು ಅರಿಯಲಿ ಎಂದರು.

click me!