ಡಿಕೆಶಿ ಮಾತಿಗೂ ಕ್ಯಾರೇ ಎನ್ನದ ಕಾಂಗ್ರೆಸ್ಸಿಗರು: ಮತ್ತೆ ಭುಗಿಲೆದ್ದ ಗುಂಪುಗಾರಿಕೆ

By Kannadaprabha News  |  First Published Aug 10, 2022, 7:43 AM IST

ಒಗ್ಗಟ್ಟಿನ ಮಂತ್ರ ಪಠಿಸಿದ್ದ ಡಿಕೆಶಿ ಮರುದಿನವೇ ಕಾಂಗ್ರೆಸ್‌ ಮೆರವಣಿಗೆಯಲ್ಲಿ ಗುಂಪುಗಾರಿಕೆ


ಬೆಂಗಳೂರು(ಆ.10):  ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿನ ಗುಂಪು ರಾಜಕೀಯಕ್ಕೆ ತೇಪೆ ಹಾಕಲು ಸೋಮವಾರ ದಾಸರಹಳ್ಳಿಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸ್ಥಳೀಯ ನಾಯಕರಿಗೆ ಬೋಧಿಸಿದ ಒಗ್ಗಟ್ಟಿನ ಪ್ರತಿಜ್ಞಾ ವಿಧಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ.

ಕ್ಷೇತ್ರದಲ್ಲಿ ಕೆಪಿಸಿಸಿ ಸದಸ್ಯರಾದ ಪಿ.ಎನ್‌.ಕೃಷ್ಣಮೂರ್ತಿ, ಕೆ.ಸಿ.ಅಶೋಕ್‌, ಬಿಬಿಎಂಪಿ ಮಾಜಿ ಸದಸ್ಯ ನಾಗಭೂಷಣ್‌, ಗೀತಾ ಶಿವರಾಂ, ನಾಗಲಕ್ಷ್ಮಿ ಚೌಧರಿ, ಜಯಂತಿ ಭಗವಾನ್‌ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಆದರೆ ಈ ಎಲ್ಲರೂ ತಮ್ಮದೇ ಆದ ಪ್ರತ್ಯೇಕ ಗುಂಪುಗಳನ್ನು ಮಾಡಿಕೊಂಡು ಈ ಬಾರಿ ‘ನಾನೇ ಟಿಕೆಟ್‌ ತರುವುದು’ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಒಬ್ಬೊಬ್ಬರು ಒಬ್ಬೊಬ್ಬ ನಾಯಕನ ಹಿಂಬಾಲಕರೆಂದು ಹೇಳಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನಿಜವಾದ ಕಾಂಗ್ರೆಸ್‌ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ.

Tap to resize

Latest Videos

ಸಿದ್ದರಾಮಯ್ಯ- ಡಿಕೆಶಿ ನಡುವೆ ದೋಸ್ತಿ ಬೆಸೆಯಿತಾ ಸಿದ್ದರಾಮೋತ್ಸವ...?

ಈ ಬಗ್ಗೆ ಸೋಮವಾರ ದಾಸರಹಳ್ಳಿಗೆ ಭೇಟಿ ಮಾಡಿದ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರತ್ಯಕ್ಷವಾಗಿಯೇ ಅನುಭವಕ್ಕೆ ಬಂದಿದೆ. ಟಿಕೆಟ್‌ ಆಕಾಂಕ್ಷಿಗಳು ಹಾಗೂ ಬ್ಲಾಕ್‌ ಅಧ್ಯಕ್ಷ ಅನುಭವ ಜಗದೀಶ್‌, ರವಿಕುಮಾರ್‌, ಹನುಮಂತರಾಜು, ಮಂಜುನಾಥ್‌ ನಾಗಯ್ಯ ಅವರೊಂದಿಗೆ ಕ್ಷೇತ್ರದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿ, ಹೈಕಮಾಂಡ್‌ ಟಿಕೆಚ್‌ ಯಾರಿಗೆ ಕೊಡುತ್ತೆ ಅವರಿಗೆ ಎಲ್ಲರೂ ಕೆಲಸ ಮಾಡಬೇಕು ಎಂದು ಡಿಕೆಶಿ ಮನವರಿಕೆ ಮಾಡಿಕೊಟ್ಟು ಕಾರ್ಯಕ್ರಮದಲ್ಲೇ ಬಹಿರಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಆದರೆ ಪ್ರತಿಜ್ಞೆ ಮಾಡಿ ಒಂದು ದಿನ ಕಳೆದಿಲ್ಲ, ಆಗಲೇ ಮತ್ತೆ ಒಡಕು ಪ್ರದರ್ಶನವಾಗಿದೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್‌ ಸೂಚನೆಯಂತೆ ನಗರದ ಪ್ರತಿ ವಾರ್ಡ್‌ನಲ್ಲಿ ಕಾಂಗ್ರೆಸ್‌ ವತಿಯಿಂದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬ್ಲಾಕ್‌ ಅಧ್ಯಕ್ಷ ಅನುಭವ ಜಗದೀಶ್‌, ಮಹಮ್ಮದ್‌ ಸಲೀಂ, ಎಬಿಬಿ ಮಂಜುನಾಥ್‌ ನೇತೃತ್ವದಲ್ಲಿ ಮಂಗಳವಾರ ಚಿಕ್ಕಬಾಣಾವರದಿಂದ ಬಾಗಲಗುಂಟೆವರೆಗೂ 4 ಕಿ.ಮೀ. ಮೆರವಣಿಗೆ ಆಯೋಜಿಸಲಾಗಿತ್ತು. ಇದರಲ್ಲಿ ಕೆಲವರು ಭಾಗವಹಿಸದೆ ಗೈರಾಗಿದ್ದರು. ಇದನ್ನು ನೋಡಿದರೆ ಕೆಪಿಸಿಸಿ ಅಧ್ಯಕ್ಷರ ಮಾತಿಗೂ ಬೆಲೆ ಇಲ್ಲ ಎಂಬಂತೆ ಕಂಡುಬಂತು.

ಸಿದ್ದು, ಡಿಕೆಶಿ ಆಲಿಂಗನ ನೋಡಿ ಖುಷಿ: ಇಬ್ಬರ ಒಗ್ಗಟ್ಟಿನಿಂದ ಮುಂದೆ ಪಕ್ಷ ಅಧಿಕಾರಕ್ಕೆ, ರಾಹುಲ್‌ ಗಾಂಧಿ

ಸ್ವಾತಂತ್ರ್ಯ ನಡಿಗೆ ಮೆರವಣಿಗೆಯಲ್ಲಿ ಅನುಭವ ಜಗದೀಶ್‌, ಪಿ.ಎನ್‌.ಕೃಷ್ಣಮೂರ್ತಿ, ಕೆ.ಸಿ.ಅಶೋಕ್‌, ನಾಗಲಕ್ಷ್ಮಿ ಚೌಧರಿ, ಜಯಂತಿ ಭಗವಾನ್‌ ಮಾತ್ರ ಇದ್ದರು. ನಾಗಭೂಷಣ್‌, ಗೀತಾ ಶಿವರಾಂ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಕೆಪಿಸಿಸಿ ಅಧ್ಯಕ್ಷರೇ ಹಿತವಚನ ಹೇಳಿದರೂ ಕ್ಷೇತ್ರದಲ್ಲಿ ಗುಂಪು ರಾಜಕೀಯ ಮುಂದುವರೆದಿದೆ. ಇಷ್ಟಾದ ಮೇಲೆ ಡಿಕೆಶಿ ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸ್ವಾತಂತ್ರ್ಯ ನಡಿಗೆಯಲ್ಲಿ ಸ್ಥಳೀಯ ಮುಖಂಡರಾದ ಎಬಿಬಿ ಡಾ. ಎಸ್‌.ಮಂಜುನಾಥ್‌, ಚಿಕ್ಕಬಾಣಾವರ ಪುರಸಭೆ ಉಸ್ತುವಾರಿ ಮಹಮ್ಮದ್‌ ಸಲೀಂ, ರಿಯಾ, ಅನುಸೂಯಮ್ಮ ಜಿಜೂ ವರ್ಗಿಸ್‌, ಅನಿಲ್‌ ಕುಮಾರ್‌, ಚೇತನ್‌ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
 

click me!