ಮತ್ತೆ ಸಿದ್ದು, ಡಿಕೆಶಿ ಒಳಬೇಗುದಿ ಬಹಿರಂಗ: ಅಕ್ಕಪಕ್ಕ ಅರ್ಧಗಂಟೆ ಕೂತಿದ್ದರೂ ಮಾತಿಲ್ಲ..!

By Kannadaprabha NewsFirst Published Sep 18, 2022, 7:37 AM IST
Highlights

ಉಭಯ ನಾಯಕರ ನಡುವಿನ ಬಿಗುಮಾನ ಪ್ರದರ್ಶನಕ್ಕೆ ಮತ್ತೊಮ್ಮೆ ವೇದಿಕೆಯಾದ ಮಂಡ್ಯದಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಯ ಪೂರ್ವಭಾವಿ ಸಭೆ 

ಮಂಡ್ಯ(ಸೆ.18):  ಕಾಂಗ್ರೆಸ್‌ನೊಳಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಡುವಿನ ಒಳಬೇಗುದಿ ಮತ್ತೆ ಬಹಿರಂಗವಾಗಿದೆ. ಮಂಡ್ಯದಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಯ ಪೂರ್ವಭಾವಿ ಸಭೆ ಉಭಯ ನಾಯಕರ ನಡುವಿನ ಬಿಗುಮಾನ ಪ್ರದರ್ಶನಕ್ಕೆ ಮತ್ತೊಮ್ಮೆ ವೇದಿಕೆಯಾಯಿತು. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಶುಕ್ರವಾರವಷ್ಟೇ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಮತ್ತು ಅವರ ಬಣದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಇದೀಗ ಮಂಡ್ಯದ ಸುಮರವಿ ಕಲ್ಯಾಣಮಂದಿರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಉಭಯ ನಾಯಕರು ಪರಸ್ಪರ ಬಿಗುಮಾನ ಪ್ರದರ್ಶಿಸಿದರು.

ಪೂರ್ವಭಾವಿ ಸಭೆ ಬೆಳಗ್ಗೆ 11.30ಕ್ಕೆ ನಿಗದಿಯಾಗಿತ್ತು. ಮಧ್ಯಾಹ್ನ 1 ಗಂಟೆಗೆ ಸಿದ್ದರಾಮಯ್ಯ ಆಗಮಿಸಿದರು. ಸಿದ್ದರಾಮಯ್ಯ ವೇದಿಕೆಗೆ ಆಗಮಿಸಿದ ಅರ್ಧಗಂಟೆ ಬಳಿಕ ಡಿ.ಕೆ.ಶಿವಕುಮಾರ್‌ ಬಂದರು. ಆದರೆ, ಡಿ.ಕೆ.ಶಿವಕುಮಾರ್‌ ಬರುವಷ್ಟರಲ್ಲೇ ಸಭೆ ಆರಂಭವಾಗಿತ್ತು. ಶಿವಕುಮಾರ್‌ ಸಭಾಂಗಣಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರಿಂದ ಭಾರೀ ಜೈಕಾರಗಳೂ ಮೊಳಗಿದವು. ಇನ್ನು ಡಿ.ಕೆ.ಶಿವಕುಮಾರ್‌ ವೇದಿಕೆಗೆ ಆಗಮಿಸುವ ಕೆಲವೇ ಕ್ಷಣಗಳ ಮೊದಲು ಸಿದ್ದರಾಮಯ್ಯ ಹೊರ ಹೋಗಿದ್ದರು. ಡಿ.ಕೆ.ಶಿವಕುಮಾರ್‌ ವೇದಿಕೆಗೆ ಬರುತ್ತಿದ್ದಂತೆ ಮತ್ತೆ ವಾಪಸಾದರು. ವೇದಿಕೆಯಲ್ಲಿ ಇಬ್ಬರೂ ನೆಪಮಾತ್ರಕ್ಕೆ ಮಾತ್ರ ಕೈ ಕುಲುಕಿ ತಮ್ಮ ಕುರ್ಚಿಗಳಲ್ಲಿ ಆಸೀನರಾದರು.

ಮೋದಿ ಪ್ರಧಾನಿ ಆದ ಮೇಲೆ ಧರ್ಮ ರಾಜಕಾರಣಕ್ಕೆ ಕುಮ್ಮಕ್ಕು: ಸಿದ್ದರಾಮಯ್ಯ ಕಿಡಿ

ಡಿಕೆಶಿ ನಿಷ್ಠೆ ಪ್ರದರ್ಶನ:

ಇನ್ನೊಂದೆಡೆ ಡಿ.ಕೆ.ಶಿವಕುಮಾರ್‌ ಬರುವವರೆಗೂ ಸ್ಥಳೀಯ ಮುಖಂಡ ರವಿಕುಮಾರ್‌ ಗಣಿಗ ವೇದಿಕೆ ಹತ್ತದೆ ಕೆಳಗಿದ್ದರು. ಮೂರ್ನಾಲ್ಕು ಬಾರಿ ಮೈಕ್‌ನಲ್ಲಿ ಕರೆದರೂ ವೇದಿಕೆ ಮೇಲೆ ಹೋಗುವ ಮನಸ್ಸು ಮಾಡಲಿಲ್ಲ. ಆದರೆ ಡಿ.ಕೆ.ಶಿವಕುಮಾರ್‌ ಬರುತ್ತಿದ್ದಂತೆ ಅವರ ಜೊತೆ ವೇದಿಕೆ ಏರಿದ ಗಣಿಗ ರವಿಕುಮಾರ್‌ ನಾಯಕ ನಿಷ್ಠೆ ಪ್ರದರ್ಶಿಸಿದರು.

ಮೌನ ಮುರಿದ ಉಭಯ ನಾಯಕರು:

ಸಭೆಗೆ ಆಗಮಿಸಿ ಅರ್ಧಗಂಟೆಯಾದರೂ ಉಭಯ ನಾಯಕರು ಪರಸ್ಪರ ಮಾತನಾಡುವ ಗೋಜಿಗೂ ಹೋಗಲಿಲ್ಲ. ಭಾರತ್‌ ಜೋಡೋ ಯಾತ್ರೆಗೆ ಸಿದ್ಧವಾಗಿರೋ ಟೀ-ಶರ್ಟ್‌, ಟೋಪಿಗಳನ್ನು ಇಬ್ಬರೂ ಪ್ರತ್ಯೇಕವಾಗಿಯೇ ಪರಿಶೀಲಿಸಿದರು. ಈ ವೇಳೆ ಇಬ್ಬರೂ ಪರಸ್ಪರ ಕೆಲಕಾಲ ಗೌಪ್ಯ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿತು.
 

click me!