ಮೋದಿ ಪ್ರಧಾನಿ ಆದ ಮೇಲೆ ಧರ್ಮ ರಾಜಕಾರಣಕ್ಕೆ ಕುಮ್ಮಕ್ಕು: ಸಿದ್ದರಾಮಯ್ಯ ಕಿಡಿ

By Kannadaprabha News  |  First Published Sep 18, 2022, 7:15 AM IST

ಧರ್ಮ ರಾಜಕಾರಣಕ್ಕೆ ಬಿಜೆಪಿ ಕುಮ್ಮಕ್ಕು, ಮನುಷ್ಯ-ಮನುಷ್ಯರ ನಡುವೆ ವಿಷ ಹಾಕುತ್ತಿದ್ದಾರೆ. ಹಾಲು, ಮಜ್ಜಿಗೆ, ಮಂಡಕ್ಕಿಗೆ ತೆರಿಕೆ ಹಾಕುವ ಮಾನಗೇಡಿಗಳು: ಸಿದ್ದರಾಮಯ್ಯ


ಮಂಡ್ಯ(ಸೆ.18):  ನರೇಂದ್ರ ಮೋದಿ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ನಂತರದಿಂದ ಇಲ್ಲಿಯವರೆಗೆ ಬಿಜೆಪಿ ಧರ್ಮ ರಾಜಕಾರಣಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ನಗರದ ಸುಮರವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ನಗರಕ್ಕೆ ಆಗಮಿಸಲಿರುವ ಕಾಂಗ್ರೆಸ್‌ ಯುವ ನಾಯಕ ರಾಹುಲ್‌ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಧರ್ಮ ರಾಜಕಾರಣ ಮಾಡಬಾರದು ಎಂದು ಸಂವಿಧಾನವೇ ಹೇಳಿದೆ. ಆದರೂ, ಭಾರತವನ್ನು ಬಹುಭಾಷಾ, ಸಂಸ್ಕೃತಿಯ ನಲೆವೀಡಾಗಿಸದೆ, ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಉಳಿಯುವುದಕ್ಕೆ ಬಿಜೆಪಿ ಬಿಡುತ್ತಿಲ್ಲ ಎಂದು ಆರೋಪಿಸಿದರು.

ಗೋಡ್ಸೆ ಫೋಟೋ ಹಾಕುವ ನೀಚರು:

Tap to resize

Latest Videos

ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವುದು, ಮನುಷ್ಯರ ಮನಸ್ಸುಗಳ ನಡುವೆ ವಿಷವನ್ನು ತುಂಬಿ ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ನಂಬಿಕೆ ಇಲ್ಲ. ಮನು ಸಂಸ್ಕೃತಿಯಲ್ಲಷ್ಟೇ ಅವರಿಗೆ ನಂಬಿಕೆ ಇರೋದು. ಗಣೇಶೋತ್ಸವ ಮೆರವಣಿಗೆಯಲ್ಲಿ ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದು ಗೋಡ್ಸೆ ಫೋಟೋ ಹಾಕುತ್ತಾರೆಂದರೆ ಇವರೆಂಥಾ ನೀಚರು ಎಂದು ಗೊತ್ತಾಗುತ್ತೆ. ಇಂತಹ ಧುರುಳರು ಅಧಿಕಾರದಲ್ಲಿರಬೇಕಾ ಎಂದು ಪ್ರಶ್ನಿಸಿದರು.

ಸಿದ್ದು, ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆ ಎಂಬುದು ಸುಳ್ಳು: ಪರಮೇಶ್ವರ್‌

ಬಡವರು, ರೈತರು, ಯುವಕರ ಬಗ್ಗೆ ಕಾಳಜಿ ಇಲ್ಲ, ಬೆಲೆ ಏರಿಕೆಯನ್ನು ನಿಯಂತ್ರಿಸಬೇಕೆಂದು ತಲೆಕೆಡಿಸಿಕೊಂಡಿಲ್ಲ. ಹಾಲು, ಮಜ್ಜಿಗೆ, ಕಡ್ಲೆಪುರಿಗೆಲ್ಲಾ ತೆರಿಗೆ ಹಾಕುತ್ತಿದ್ದಾರೆ. ಬಡವರ ರಕ್ತ ಕುಡಿಯುತ್ತಿದ್ದಾರೆ. ಇವರನ್ನೆಲ್ಲಾ ಮನುಷ್ಯರೂ ಅನ್ನಬೇಕೋ, ರಾಕ್ಷಕಸರು ಅನ್ನಬೇಕೋ. ಸಮಾಜದಲ್ಲಿ ಅಶಾಂತಿಯುತ ವಾತಾವರಣವಿದ್ದರೂ ಇವರಿಗೆ ಸ್ವಲ್ಪವೂ ನಾಚಿಕೆ, ಮಾನ-ಮರ್ಯಾದೆಯೇ ಇಲ್ಲ ಎಂದು ಕಿಡಿಕಾರಿದರು.

3.50 ಲಕ್ಷ ಕೋಟಿ ತೆರಿಗೆ:

ಎಂಟು ವರ್ಷದಿಂದ ನರೇಂದ್ರ ಮೋದಿ ನೀಡಿದ ಕೊಡುಗೆ ಏನು?. ಕರ್ನಾಟಕ ಪ್ರತಿ ವರ್ಷ ಕೇಂದ್ರ ಸರ್ಕಾರಕ್ಕೆ .3.50 ಲಕ್ಷ ಕೋಟಿ ತೆರಿಗೆ ಪಾವತಿಸುತ್ತಿದೆ. ವಾಪಸ್‌ ಕೊಡುತ್ತಿರುವುದು .50 ಸಾವಿರ ಕೋಟಿ ಮಾತ್ರ. ಮಳೆಯಿಂದಾಗಿ ರೈತರ ಬೆಳೆ, ಮನೆ, ರಸ್ತೆಗಳು, ಸೇತುವೆಗಳೆಲ್ಲಾ ಹಾಳಾಗಿವೆ. ಕರ್ನಾಟಕದಲ್ಲಿ ಪ್ರವಾಹ ಸೃಷ್ಟಿಯಾದಾಗ ಅದರ ವೀಕ್ಷಣೆಗೆ ಮೋದಿ ಒಮ್ಮೆಯೂ ಬರಲಿಲ್ಲ. ಹಣವನ್ನೂ ಕೊಡಲಿಲ್ಲ. ಹಾಗಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆಯಬೇಕು. ಇಲ್ಲದಿದ್ದರೆ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದರು.

800 ಕೋಟಿ ನಷ್ಟಕ್ಕೆ 12 ಕೋಟಿ ಸಾಕಾ?

ಎಂಟು ವರ್ಷದಲ್ಲಿ ಮೋದಿ ಮಂಡ್ಯಕ್ಕೆ ಕೊಟ್ಟಿದ್ದೇನು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಏಕೆ, ಮಂಡ್ಯದವರೇನು ತೆರಿಗೆ ಕಟ್ಟುವುದಿಲ್ಲವೋ. ಪೆಟ್ರೋಲ್‌-ಡೀಸೆಲ್‌, ಅಡುಗೆ ಅನಿಲ, ದಿನಸಿ ಪದಾರ್ಥಗಳೆಲ್ಲಾ ಪುಕ್ಕಟ್ಟೆಕೊಡ್ತಿದ್ದಾರಾ. ಈ ವರ್ಷ ಬಿದ್ದ ಭಾರೀ ಮಳೆಯಿಂದ ಜಿಲ್ಲೆಯೊಳಗೆ .800 ಕೋಟಿ ನಷ್ಟವಾಗಿದೆ ಎಂದು ಜಿಲ್ಲಾಡಳಿತ ವರದಿ ನೀಡಿದ್ದರೆ, ಸರ್ಕಾರ ಬಿಡುಗಡೆ ಮಾಡಿರುವುದು ಕೇವಲ .12 ಕೋಟಿ ಮಾತ್ರ. ಇದೇನಾ ಆಡಳಿತ ನಡೆಸೋ ರೀತಿ ಎಂದು ಪ್ರಶ್ನಿಸಿದರು.
ದೇಶದಲ್ಲಿರುವ ಬಡತನ, ಅಶಾಂತಿ, ನಿರುದ್ಯೋಗವನ್ನು ತೊಡೆದುಹಾಕುವ ಸಲುವಾಗಿಯೇ ಭಾರತ್‌ ಜೋಡೋ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅ.3,6 ಮತ್ತು 7ರಂದು ಪಾದಯಾತ್ರೆ ಜಿಲ್ಲೆಯಲ್ಲಿ ಸಂಚರಿಸಲಿದೆ. ಯಾವ ಜಿಲ್ಲೆಯಲ್ಲೂ ನಡೆಯದ ರೀತಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಡೆಯಬೇಕು ಎಂದು ಕರೆ ನೀಡಿದರು.

'ಕೊತ್ವಾಲ್ ರಾಮಚಂದ್ರ ಶಿಷ್ಯರಿಂದ ತೊಂದರೆಯಾಗದಿರಲಿ ಅಂತ ಸಿದ್ದರಾಮಯ್ಯಗೆ ಭದ್ರತೆ ಹೆಚ್ಚಿಸಿದ್ದೇವೆ'

3570 ಕಿ.ಮೀ. ಪಾದಯಾತ್ರೆ:

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ.ಪಾದಯಾತ್ರೆ ನಡೆಯುತ್ತಿದೆ. 150 ದಿನಗಳ ಪಾದಯಾತ್ರೆ ನಡೆಯುತ್ತಿರುವುದು ಸಾಮಾನ್ಯವಲ್ಲ. ಸ್ವಾತಂತ್ರ್ಯ ಬಂದ ಬಳಿಕ ಯಾವ ಪಕ್ಷ, ಯಾವುದೇ ನಾಯಕ ಮಾಡಲಾಗದ ಪಾದಯಾತ್ರೆಯನ್ನು ರಾಹುಲ್‌ಗಾಂಧಿ ಮಾಡುತ್ತಿದ್ದಾರೆ. ಇದೊಂದು ಐತಿಹಾಸಿಕ ಪಾದಯಾತ್ರೆ ಎಂದು ಬಣ್ಣಿಸಿದರು.

ದೇಶದ ಹಿತದೃಷ್ಟಿಯಿಂದ ಮಾಡುತ್ತಿರುವ ಪಾದಯಾತ್ರೆಗೆ ನಾವೂ ಅವರೊಂದಿಗೆ 1 ದಿನ ಹೆಜ್ಜೆ ಹಾಕಲೇಬೇಕು. ರಾಜ್ಯದ 8 ಜಿಲ್ಲೆಗಳಲ್ಲಿ 510 ಕಿ.ಮೀ.ಸಂಚರಿಸಿ ಬಳ್ಳಾರಿಯಲ್ಲಿ ಬೃಹತ್‌ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾರ್ಯಾಧ್ಯಕ್ಷ ಕೆ.ಧ್ರುವನಾರಾಯಣ್‌, ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ, ಎಐಸಿಸಿಯ ರೋಹಿಜಾನ್‌, ವಿಧಾನ ಪರಿಷತ್‌ ಸದಸ್ಯರಾದ ಮಧು ಜಿ.ಮಾದೇಗೌಡ, ದಿನೇಶ್‌ ಗೂಳಿಗೌಡ, ಮಾಜಿ ಶಾಸಕರಾದ ಎಂ.ಎಸ್‌.ಆತ್ಮಾನಂದ, ಕೆ.ಬಿ.ಚಂದ್ರಶೇಖರ್‌, ರಮೇಶ್‌ ಬಂಡಿಸಿದ್ದೇಗೌಡ, ಬಿ.ರಾಮಕೃಷ್ಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌, ಮಹಿಳಾಧ್ಯಕ್ಷೆ ಅಂಜನಾ, ಮುಖಂಡರಾದ ರವಿಕುಮಾರ್‌ ಗಣಿಗ, ಡಾ.ಎಚ್‌.ಕೃಷ್ಣ, ಡಾ.ಎಚ್‌.ಎನ್‌.ರವೀಂದ್ರ ಇತರರಿದ್ದರು.
 

click me!