ಬೆಂಗಳೂರು[ಫೆ.20]: ಮಂಗಳೂರು ಗೋಲಿಬಾರ್ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೇಲೆ ಜೀವ ಬೆದರಿಕೆ ಬಂದಿತ್ತು. ಆದರೆ, ಈ ವಿಚಾರವನ್ನು ಯಾರಿಗೂ ಬಹಿರಂಗಪಡಿಸಿರಲಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬುಧವಾರ ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ತೆರೆ ಮರೆಯಲ್ಲಿ ಶರತ್ ಮಡಿವಾಳ, ಮಕ್ಕಳ್ ರವಿ ಸೇರಿ ಹಲವರ ಹತ್ಯೆ ಮಾಡಿದ ಸಂಘಟನೆಗಳು ಸಿಎಎ ಹೋರಾಟದ ನೆಪ ಇಟ್ಟುಕೊಂಡು ಸಮಾಜದಲ್ಲಿ ಹಿಂಸಾಚಾರ ನಡೆಸುತ್ತಿವೆ.
ಮಂಗಳೂರು ಗಲಭೆ ಬಳಿಕ ನನಗೆ ಸೌದಿ ಅರೇಬಿಯಾ, ದುಬೈ ಸೇರಿ ನಾನಾ ಕಡೆಯಿಂದ ಜೀವ ಬೆದರಿಕೆ ಕರೆಗಳು ಬಂದಿವೆ. ನನಗೆ ಮಾತ್ರವಲ್ಲದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಜೀವ ಬೆದರಿಕೆ ಬಂದಿದೆ ಎಂದು ಗಂಭೀರ ವಿಚಾರ ಬಿಚ್ಚಿಟ್ಟರು.
ಯು.ಟಿ.ಖಾದರ್ ಎಚ್ಚರವಾಗಿರಲಿ:
ಕೇವಲ ನಾನು ಹಾಗೂ ಯಡಿಯೂರಪ್ಪ ಮಾತ್ರವಲ್ಲ ಯು.ಟಿ. ಖಾದರ್ ಬಗ್ಗೆಯೂ ಹಲವು ವಿಚಾರಗಳು ನನ್ನ ಗಮನಕ್ಕೆ ಬಂದಿವೆ. ಹೀಗಾಗಿ ಅವರಿಗೆ ಎಚ್ಚರವಾಗಿರಲು ಸೂಚನೆ ನೀಡಿದ್ದೇನೆ. ಅಲ್ಲದೆ ಅವರ ಸಹೋದರನನ್ನು ಕರೆದು ಚರ್ಚೆ ಮಾಡಿದ್ದೇನೆ ಎಂದೂ ಸಹ ಹೇಳಿದರು.
ಮಾಜಿ ಸಚಿವ ತನ್ವೀರ್ ಸೇಠ್ ಅವರು ಪಿಎಫ್‌ಐ ಹಾಗೂ ಎಸ್‌ಡಿಪಿಐ ಮೇಲಿನ ಪ್ರಕರಣ ಹಿಂಪಡೆಯುವಂತೆ ಸಿದ್ದರಾಮಯ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಅದೇ ಪಿಎಫ್‌ಐ ಸದಸ್ಯರೊಬ್ಬರು ತನ್ವೀರ್ ಸೇಠ್ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈವರೆಗೂ ಪರದೆ ಮರೆಯಲ್ಲಿ ಕೆಲಸ ಮಾಡುತ್ತಿದ್ದ ಸಂಘಟನೆಗಳು ಇದೀಗ ಸಿಎಎ ನೆಪ ಇಟ್ಟುಕೊಂಡು ಉದ್ದೇಶಪೂರ್ವಕವಾಗಿ ಹಿಂಸಾಚಾರ ನಡೆಸುತ್ತಿವೆ. ಇವುಗಳನ್ನು ಸರ್ಕಾರ ಹತ್ತಿಕ್ಕಲಿದೆ ಎಂದು ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.