'ಡಿ.9ರ ನಂತರ ಯಡಿಯೂರಪ್ಪ ಕುರ್ಚಿಗೆ ಕಂಟಕ ಶತಸಿದ್ಧ'

By Web DeskFirst Published Nov 22, 2019, 11:44 AM IST
Highlights

ಡಿ.9ರ ನಂತರ ಬಿಎಸ್‌ವೈ ಕುರ್ಚಿಗೆ ಕಂಟಕ| 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು: ಸಿದ್ದರಾಮಯ್ಯ ವಿಶ್ವಾಸ| 

ಮಂಡ್ಯ[ನ.22]: 15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಡಿಸೆಂಬರ್‌ 9 ರಂದು ಪ್ರಕಟವಾದ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಕುರ್ಚಿಗೆ ಕಂಟಕ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಪರವಾಗಿ ಮರಡಿಲಿಂಗೇಶ್ವರ ಕ್ಷೇತ್ರ, ಕಿಕ್ಕೇರಿ, ಮಂದಗೆರೆ, ಅಕ್ಕಿಹೆಬ್ಬಾಳು, ಸೋಮನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಉಪಚುನಾವಣೆ ಫಲಿತಾಂಶದ ನಂತರ ಬಿಜೆಪಿ ಸರ್ಕಾರ ಆಂತರಿಕ ಕಚ್ಚಾಟದಿಂದ ಸರ್ಕಾರ ಬೀಳಬಹುದು ಎಂದರು.

ಅನರ್ಹ ಶಾಸಕರು ಜನಾದೇಶ ತಿರಸ್ಕರಿಸಿದ ಕಾರಣ 15 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ. ಕ್ಷೇತ್ರದ ಮತದಾರರು ಬಿಜೆಪಿ ಪಕ್ಷಕ್ಕೆ ಪಕ್ಷಾಂತರವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಾರಾಯಣಗೌಡ ಸೇರಿದಂತೆ ಎಲ್ಲಾ 15 ಜನ ಅನರ್ಹ ಶಾಸಕರೂ ಯಾವುದೇ ಕಾರಣಕ್ಕೂ ಮತ್ತೆ ವಿಧಾನಸಭೆಗೆ ಪ್ರವೇಶಿಸದಂತೆ ಎಚ್ಚರ ವಹಿಸಿ ಮತಹಾಕಬೇಕು. ಕೆ.ಆರ್‌ .ಪೇಟೆಯಲ್ಲಿ ಕೆ.ಬಿ.ಚಂದ್ರಶೇಖರ್‌, ಹುಣಸೂರು ಕ್ಷೇತ್ರದಲ್ಲಿ ಎಚ್‌ .ಪಿ.ಮಂಜುನಾಥ್‌ ಸೇರಿದಂತೆ 12 ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಆಗಮಿಸಿ ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಶೇಖರ್‌ ಪರ ಕ್ಷೇತ್ರಾದ್ಯಂತ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿ, ಪ್ರಜಾಪ್ರಭುತ್ವದ ವಿರೋಧಿಗಳು ಹಾಗೂ ಸಂವಿಧಾನವನ್ನು ಗೌರವಿಸದ ನಾರಾಯಣಗೌಡರಂತಹ ನಾಯಕರನ್ನು ಪ್ರಜ್ಞಾವಂತ ಮತದಾರರು ಸಾರಾಸಗಟಾಗಿ ತಿರಸ್ಕರಿಸಬೇಕು. ತಾಲೂಕಿನ ಬಗ್ಗೆ ಅಭಿಮಾನವನ್ನು ಹೊಂದಿರುವ ನಿಮ್ಮೂರಿನಲ್ಲಿಯೇ ವಾಸಿಸುವ ಚಂದ್ರಶೇಖರ್‌ ಅವರಿಗೆ ಮತ ನೀಡಿ ಹೊಸ ರಾಜಕೀಯ ಮನ್ವಂತರಕ್ಕೆ ನಾಂದಿ ಹಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎನ್‌.ಚೆಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾ ಕಾಂಗ್ರೇಸ… ಅಧ್ಯಕ್ಷ ಸಿ.ಡಿ.ಗಂಗಾಧರ್‌ , ಜಿಪಂ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಮಾಜಿಜಿಪಂ ಸದಸ್ಯ ಬಿ.ನಾಗೇಂದ್ರಕುಮಾರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

ಎರಡೇ ದಿನದಲ್ಲಿ ಯೂಟರ್ನ್‌:

ಹಿರಿಕಳಲೆ ಗ್ರಾಪಂ ಅಧ್ಯಕ್ಷ ಸುರೇಶ್‌ ಅವರು ಸೋಮವಾರ ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು. ಆದರೆ, ಗುರುವಾರ ಮರಡಿಲಿಂಗೇಶ್ವರ ದೇವಸ್ಥಾನದ ಬಳಿ ನಡೆದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಸಭೆಯಲ್ಲಿ ಕೆ.ಬಿ.ಚಂದ್ರಶೇಖರ್‌ ಬೆಂಬಲಿಸಿ ಕಾಂಗ್ರೆಸ್‌ ಶಲ್ಯವನ್ನು ಹಾಕಿಸಿಕೊಂಡು ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

ನವೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!