ಕೇಂದ್ರ ಸರ್ಕಾರದ ಮೊತ್ತಕ್ಕೆ ರಾಜ್ಯದ ಪಾಲು ಸೇರಿಸಿ ಬರ ಪರಿಹಾರ ನೀಡಲಿ: ಬೊಮ್ಮಾಯಿ

By Kannadaprabha News  |  First Published Apr 29, 2024, 8:43 AM IST

ಕೇಂದ್ರ ಸರ್ಕಾರ ನೀಡಿರುವ ಪರಿಹಾರದ ಮೊತ್ತಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಸೇರಿಸಿ ರೈತರಿಗೆ ಬರ ಪರಿಹಾರವನ್ನು ತಕ್ಷಣವೇ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.


ಹಾವೇರಿ (ಏ.29): ಬರ ಪರಿಹಾರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೆಂದೂ ಕಾಣದ ರೀತಿಯ ರಾಜಕಾರಣ ಮಾಡುತ್ತಿದೆ. ಈಗ ಕೇಂದ್ರ ಸರ್ಕಾರ ನೀಡಿರುವ ಪರಿಹಾರದ ಮೊತ್ತಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಸೇರಿಸಿ ರೈತರಿಗೆ ಬರ ಪರಿಹಾರವನ್ನು ತಕ್ಷಣವೇ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿಯಲ್ಲಿ ಯುಪಿಎ ಹಾಗೂ ಎನ್‌ಡಿಎ ಅವಧಿಯಲ್ಲಿ ರಾಜ್ಯಕ್ಕೆ ಬಿಡುಗಡೆಯಾದ ಪರಿಹಾರದ ದಾಖಲೆ ಬಿಡುಗಡೆ ಮಾಡಿ ಮಾತನಾಡಿ, ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ವಿಳಂಬ ಆಯಿತು ಎಂದು ಕಾಂಗ್ರೆಸ್ಸಿಗರು ಹೇಳಿದ್ದಾರೆ. ಯುಪಿಎ ಅವಧಿಯಲ್ಲೂ ವರ್ಷ, ಎಂಟು ತಿಂಗಳ ನಂತರ ಬರ ಪರಿಹಾರ ಕೊಟ್ಟಿದ್ದಾರೆ. ಆಗ ಎಂದೂ ಪ್ರತಿಭಟನೆ ಮಾಡದ ಕಾಂಗ್ರೆಸ್ಸಿಗರು ಇಂದು ಪ್ರತಿಭಟನೆ ಮಾಡುತ್ತಿದ್ದಾರೆ. ಪರಿಹಾರ ನೀಡಿದ ಮೇಲೂ ಪ್ರತಿಭಟನೆ ಮಾಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

Tap to resize

Latest Videos

ಬರ ಪರಿಹಾರ ಅನ್ಯಾಯ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಎನ್‌ಡಿಎ ಅವಧಿಯಲ್ಲೇ ಹೆಚ್ಚು: ಕೇಂದ್ರದಿಂದ ಬಂದಿರುವ ಬರ ಪರಿಹಾರದಲ್ಲಿ ಯುಪಿಎ ಅವಧಿಯಲ್ಲಿ 2004-14ರ ವರೆಗೆ ಹತ್ತು ವರ್ಷದಲ್ಲಿ ರಾಜ್ಯ ಸರ್ಕಾರದಿಂದ ಬರ ಪರಿಹಾರಕ್ಕೆ 19,579 ಕೋಟಿ ರು.ಗಾಗಿ ಮನವಿ ಸಲ್ಲಿಸಲಾಗಿತ್ತು. ಅಂದಿನ ಯುಪಿಎ ಸರ್ಕಾರ ಬಿಡುಗಡೆ ಮಾಡಿರುವ ಹಣ ಕೇವಲ 1954 ಕೋಟಿ ಮಾತ್ರ, ಇದು ಒಟ್ಟು ಬೇಡಿಕೆಯ ಶೇ.10ರಷ್ಟು ಮಾತ್ರ. ಅದೇ ಎನ್‌ಡಿಎ ಅವಧಿಯಲ್ಲಿ 2014-24ರ ವರೆಗೆ ರಾಜ್ಯ ಸರ್ಕಾರದಿಂದ 18,747 ಕೋಟಿ ರು. ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದು, ಕೇಂದ್ರ ಸರ್ಕಾರ 6185 ಕೋಟಿ ರು. ಬಿಡುಗಡೆ ಮಾಡಿತ್ತು. ಅಂದರೆ, ಶೇ.30 ಪರಿಹಾರ ಬಿಡುಗಡೆ ಮಾಡಿತ್ತು. ಅಲ್ಲದೆ ಶನಿವಾರ 3454 ಕೋಟಿ ರು. ಘೋಷಣೆ ಮಾಡಿದೆ. ಆದರೂ ಕಾಂಗ್ರೆಸ್‌ನವರು ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

2004-05ರಲ್ಲಿ ರಾಜ್ಯ ಸರ್ಕಾರ 1147 ಕೋಟಿ ರು. ಕೇಳಿತ್ತು, ಆಗ ಅವರು ಕೊಟ್ಟಿದ್ದು, 83 ರು. ಕೋಟಿ ಅಂದರೆ, ಕೇವಲ ಶೇ.7. 2006-07ರಲ್ಲಿ ರಾಜ್ಯ ಸರ್ಕಾರ 1,262 ಕೋಟಿ ಕೇಳಿತ್ತು, ಕೇಂದ್ರ ಸರ್ಕಾರ ಕೊಟ್ಟಿದ್ದು 78 ಕೋಟಿ ರು. ಮಾತ್ರ. 2008-09ರಲ್ಲಿ ರಾಜ್ಯ ಸರ್ಕಾರ 2043 ಕೋಟಿ ರು. ಬೇಡಿಕೆ ಸಲ್ಲಿಸಿದ್ದರೆ, ಕೇಂದ್ರ ಕೊಟ್ಟಿದ್ದು 83 ಕೋಟಿ ರು. ಮಾತ್ರ. 2011-12ರಲ್ಲಿ 6214 ಕೋಟಿ ರು. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರೆ, ಕೇಂದ್ರ ಸರ್ಕಾರ 760 ಕೋಟಿ ರು. ನೀಡಿತ್ತು. 2012-13ರಲ್ಲಿ 7642 ಕೋಟಿ ರು. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆಗ ಕೇಂದ್ರದಿಂದ 526 ಕೋಟಿ ರು. ಬಿಡುಗಡೆಯಾಗಿತ್ತು. ಸಿದ್ದರಾಮಯ್ಯನವರೇ ಆಗ ಮುಖ್ಯಮಂತ್ರಿ ಆಗಿದ್ದರು. ಅವರದೇ ಪಕ್ಷ ಕೇಂದ್ರದಲ್ಲಿ ಆಡಳಿತ ನಡೆಸುತ್ತಿತ್ತು. 

2013-14ರಲ್ಲಿ 877 ಕೋಟಿ ರು. ಪರಿಹಾರಕ್ಕೆ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ 308 ಕೋಟಿ ರು. ಬಿಡುಗಡೆ ಮಾಡಿತ್ತು ಎಂದು ಮಾಹಿತಿ ನೀಡಿದರು. 2014ರಿಂದ 24ರವರೆಗೆ ಎನ್‌ಡಿಎ ಅವಧಿಯಲ್ಲಿ 2014-15ರಲ್ಲಿ ರಾಜ್ಯ ಸರ್ಕಾರ 930 ಕೋಟಿ ರು. ಪರಿಹಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ 305 ಕೋಟಿ ಪರಿಹಾರ ನೀಡಿತ್ತು. 2015-16ರಲ್ಲಿ 5247 ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ 2263 ಕೋಟಿ ಬಿಡುಗಡೆ ಮಾಡಿತ್ತು. 2016-17ರಲ್ಲಿ 7572 ಕೋಟಿ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ 2577 ಕೋಟಿ ಪರಿಹಾರ ನೀಡಿತ್ತು. 

2018-19ರಲ್ಲಿ ರಾಜ್ಯ ಸರ್ಕಾರ 4064 ಕೋಟಿ ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ 1040 ಕೋಟಿ ರು. ಬಿಡುಗಡೆ ಮಾಡಿತ್ತು ಎಂದು ತಿಳಿಸಿದರು. ನಾನು ಮುಖ್ಯಮಂತ್ರಿ ಆಗಿದ್ದಾಗ ಪ್ರವಾಹ ಬಂದಾಗ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸದೆ ರಾಜ್ಯದ ಖಜಾನೆಯಿಂದಲೇ ಪರಿಹಾರ ನೀಡಿದ್ದೇವೆ. ಈಗಿನ ಕಾಂಗ್ರೆಸ್ ಸರ್ಕಾರ ತನ್ನ ಖಜಾನೆಯಿಂದ ನಯಾಪೈಸೆ ಪರಿಹಾರ ನೀಡಿಲ್ಲ. ಹೀಗಾಗಿ ತಮ್ಮ ತಪ್ಪು ಮುಚ್ಚಿಕೊಳ್ಳಲು ಈ ನಾಟಕ ಹೂಡಿದ್ದಾರೆ, ನೀವು ರಾಜ್ಯ ಸರ್ಕಾರದ ಖಜಾನೆಯಿಂದ ಹಣ ಬಿಡುಗಡೆ ಮಾಡಿದ್ದರೆ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡುವ ನೈತಿಕತೆ ಇರುತ್ತಿತ್ತು ಎಂದು ಹೇಳಿದರು.

ಮೋದಿ ಟೀಕಿಸುವುದು ಫ್ಯಾಷನ್: ನಮ್ಮ ದೇಶದಲ್ಲಿ ಪ್ರಧಾನಿ ಮೋದಿಯವರನ್ನು ಟೀಕಿಸುವುದು ರಾಜಕಾರಣದ ಫ್ಯಾಷನ್ ಆಗಿದೆ. ಕಾಂಗ್ರೆಸ್ಸಿಗೆ ಮೋದಿ ಫೋಬಿಯಾ ಶುರುವಾಗಿದೆ‌. ಮೋದಿ ಟೀಕಿಸಿದರೆ ತಮ್ಮ ಪ್ರಚಾರ ಹೆಚ್ಚಾಗುತ್ತದೆ ಎಂದುಕೊಂಡಿದ್ದಾರೆ. ಆದರೆ ಮೋದಿಯವರನ್ನು ಟೀಕಿಸಿದಷ್ಟು ಮೋದಿಯವರ ವರ್ಚಸ್ಸು ಹೆಚ್ಚಾಗುತ್ತಿದೆ ಎಂದು ಹೇಳಿದರು. ಜನರ ಆಸ್ತಿ ಹಂಚಿಕೆ ಮಾಡುತ್ತೇವೆಂದು ಕಾಂಗ್ರೆಸ್ಸಿನವರು ಹೇಳಿದ್ದಾರೆ. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಸರ್ವೇ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಮೊದಲು ಕಾಂಗ್ರೆಸ್ ಪಕ್ಷದ ನಾಯಕರ ಬೇನಾಮಿ ಆಸ್ತಿ ಸರ್ವೇ ಆಗಬೇಕು. ಜನರ ಆಸ್ತಿ ದಾಖಲೆಗಳು ಸರ್ಕಾರದ ಬಳಿಯೇ ಇದ್ದಾಗ ಸರ್ವೇ ನಾಟಕ ಏಕೆ ಬೇಕು ಎಂದು ಪ್ರಶ್ನಿಸಿದರು.

ಎಚ್‌.ಡಿ.ರೇವಣ್ಣಗೆ ಬಂಧನ ಭೀತಿ?: ಪ್ರಜ್ವಲ್‌ ಬಳಿಕ ಆರೋಪಿ ನಂ.1 ತಂದೆಗೂ ಸಂಕಷ್ಟ

ಇನ್ನು ಉದ್ಯಮಿಗಳಾದ ಅದಾನಿ ಅಂಬಾನಿಯನ್ನು ಕಾಂಗ್ರೆಸ್ಸಿಗರೇ ಬೆಳೆಸಿದ್ದಾರೆ. 1980ರ ದಶಕದಲ್ಲಿ ಯಾರು ಪ್ರಧಾನಿಯಾಗಿದ್ದರು. ಮನಮೋಹನ್ ಸಿಂಗ್ ಅವರು ಉದಾರೀಕರಣ, ಖಾಸಗೀಕರಣ ಮಾಡಿದರು. ಅದರ ಪರಿಣಾಮ ಖಾಸಗಿಯವರು ಶ್ರೀಮಂತರಾಗಿದ್ದಾರೆ. ಯಾವಾಗ ತಳಹಂತದ ಜನರ ಆದಾಯ ಹೆಚ್ಚಳವಾಗುತ್ತದೆ. ಆಗ ದೇಶ ಶ್ರೀಮಂತವಾಗುತ್ತದೆ. ಮೋದಿಯವರ ಅವಧಿಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಯುವಕರು ಕೋಟ್ಯಧೀಶರಾಗಿದ್ದಾರೆ. 25 ಕೋಟಿ ಜನರ ಬಡತನ ನಿರ್ಮೂಲನೆ ಮಾಡಿ ಬಡವರನ್ನು ಶ್ರೀಮಂತರನ್ನಾಗಿ ಪ್ರಧಾನಿ ಮೋದಿ ಮಾಡಿದ್ದಾರೆ ಎಂದು ಹೇಳಿದರು.

click me!