ಅಧಿವೇಶನ ಅಂತ್ಯ: 130 ತಾಸು ಬದಲ ಕೇವಲ 31 ತಾಸು ನಡೆದ ರಾಜ್ಯಸಭೆ, 45 ತಾಸು ನಡೆದ ಲೋಕಸಭೆ

Published : Apr 07, 2023, 07:11 AM IST
ಅಧಿವೇಶನ ಅಂತ್ಯ: 130 ತಾಸು ಬದಲ ಕೇವಲ 31 ತಾಸು ನಡೆದ ರಾಜ್ಯಸಭೆ,  45 ತಾಸು  ನಡೆದ ಲೋಕಸಭೆ

ಸಾರಾಂಶ

 ಇತ್ತೀಚಿನ ದಿನಗಳಲ್ಲೇ ಅತ್ಯಂತ ನಿರಾಶಾದಾಯಕ ಎನ್ನಬಹುದಾದ ಸಂಸತ್‌ ಅಧಿವೇಶನ ಗುರುವಾರ ಮುಕ್ತಾಯಗೊಂಡಿದ್ದು, ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಕಂಡಿದೆ.

ನವದೆಹಲಿ:  ಇತ್ತೀಚಿನ ದಿನಗಳಲ್ಲೇ ಅತ್ಯಂತ ನಿರಾಶಾದಾಯಕ ಎನ್ನಬಹುದಾದ ಸಂಸತ್‌ ಅಧಿವೇಶನ ಗುರುವಾರ ಮುಕ್ತಾಯಗೊಂಡಿದ್ದು, ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಕಂಡಿದೆ. ಲೋಕಸಭೆಯು ನಿಗದಿತ 133.6 ತಾಸಿನ ಬದಲಿ ಕೇವಲ 45 ತಾಸು ಕಾರ್ಯನಿರ್ವಹಿಸಿದರೆ, ರಾಜ್ಯಸಭೆಯು 130 ತಾಸಿನ ಬದಲು ಕೇವಲ 31 ಗಂಟೆಗಳಷ್ಟು ಕಾರ್ಯನಿರ್ವಹಿಸಿದೆ. ಉದ್ಯಮಿ ಗೌತಮ್‌ ಅದಾನಿ (Goutam adani)ನಡೆಸಿದ್ದಾರೆ ಎನ್ನಲಾದ ವ್ಯಾಪಾರ ಅಕ್ರಮದ ಬಗ್ಗೆ ಜಂಟಿ ಸದನ ಸಮಿತಿಯಿಂದ (ಜೆಪಿಸಿ) ತನಿಖೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿ ಮೊದಲ ದಿನದಿಂದಲೇ ಕೋಲಾಹಲ ಎಬ್ಬಿಸಿದವು. ಇನ್ನು ಭಾರತದಲ್ಲಿ ಪ್ರಜಾಪ್ರಭುತ್ವ ಅವನತಿಯ ಅಂಚಿನಲ್ಲಿದೆ’ ಎಂದು ಲಂಡನ್‌ನಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ (congress leader Rahul gandhi)ಆಡಿದ ಮಾತುಗಳು ಬಿಜೆಪಿಯನ್ನು ರೊಚ್ಚಿಗೆಬ್ಬಿಸಿದವು. ವಿದೇಶಿ ನೆಲದಲ್ಲಿ ಭಾರತಕ್ಕೆ ರಾಹುಲ್‌ ಅವಮಾನ ಮಾಡಿದ್ದು, ಭಾರತದಲ್ಲಿ ವಿದೇಶಿ ಹಸ್ತಕ್ಷೇಪ ಬಯಸಿದ್ದಾರೆ. ಅವರು ದೇಶದ ಕ್ಷಮೆಯಾಚಿಸಬೇಕು’ ಎಂದು ಅಗ್ರಹಿಸಿ ಬಿಜೆಪಿ ಸಂಸದರು ಪ್ರತಿ-ಗದ್ದಲ ಎಬ್ಬಿಸಿದರು. ಹೀಗಾಗಿ ಜ.31ರಿಂದ 2 ಹಂತದಲ್ಲಿ ನಡೆದ ಬಜೆಟ್‌ ಅಧಿವೇಶನ ಸಂಪೂರ್ಣ ಗದ್ದಲದಲ್ಲೇ ಪರಿಸಮಾಪ್ತಿಗೊಂಡಿತು.

ಜ.31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi murmu)ಮಾಡಿದ ಭಾಷಣದ ಬಗ್ಗೆ ಲೋಕಸಭೆಯಲ್ಲಿ 13 ತಾಸು ಚರ್ಚೆ ನಡೆಯಿತು. ನಿರ್ಮಲಾ ಸೀತಾರಾಮನ್‌ರ (nirmala sitaraman)ಬಜೆಟ್‌ ಮಂಡನೆ ಸೇರಿ ಬಜೆಟ್‌ ಕುರಿತ ಚರ್ಚೆ 14 ತಾಸು ನಡೆಯಿತು. ಇದನ್ನು ಬಿಟ್ಟು ಬೇರೆ ಲೋಕಸಭೆ ಕಲಾಪ ಸಾಧ್ಯವೇ ಆಗಲಿಲ್ಲ.

ಉತ್ಪಾದಕತೆ ತೀವ್ರ ಕುಸಿತ:

ಲೋಕಸಭೆ ಉತ್ಪಾದಕತೆ ಕೇವಲ ಶೇ.34.28ರಷ್ಟುಇದೆ. ರಾಜ್ಯಸಭೆಯ ಉತ್ಪಾದಕತೆ ಕೇವಲ ಶೇ.24ರಷ್ಟಿದೆ. ಪ್ರಶ್ನೋತ್ತರ ಕಲಾಪ ಲೋಕಸಭೆಯಲ್ಲಿ ಕೇವಲ 4.32 ತಾಸು ನಡೆದರೆ, ರಾಜ್ಯಸಭೆಯಲ್ಲಿ ಕೇವಲ 1.55 ಗಂಟೆ ಕಾಲ ಪ್ರಶ್ನೋತ್ತರ ಕಲಾಪ ನಡೆದಿದೆ. ರಾಜ್ಯಸಭೆಯ ಇನ್ನೊಂದು ಅಂಕಿ ಅಂಶ ಗಮನಿಸಿದಾಗ ಮೊದಲ ಹಂತದ ಅಧಿವೇಶನದಲ್ಲಿ ಶೇ.56.3ರಷ್ಟುಉತ್ಪಾದಕತೆ ಇದ್ದರೆ, 2ನೇ ಹಂತದಲ್ಲಿ ಕೇವಲ ಶೇ.6.4ರಷ್ಟುಉತ್ಪಾದಕತೆ ಇದೆ.

ರಾಹುಲ್ ಗಾಂಧಿ ತೀರ್ಪು ಗದ್ದಲ, ಅಧಿವೇಶನ ಮುಂದೂಡಿದ ಬಳಿಕ ಸ್ಪೀಕರ್ ಭೇಟಿಯಾದ ಪ್ರಧಾನಿ ಮೋದಿ!

ವಿಪಕ್ಷಗಳಿಂದ ಮತ್ತೆ ಒಗ್ಗಟ್ಟಿನ ಮಂತ್ರ

ಸಂಸತ್ತಿನ ಬಜೆಟ್‌ ಅಧಿವೇಶನದ ಎರಡನೇ ಭಾಗ ಬಹುತೇಕ ವ್ಯರ್ಥವಾಗಿದ್ದಕ್ಕೆ ಕೇಂದ್ರ ಸರ್ಕಾರದ ನಿಲುವುಗಳೇ ಕಾರಣ ಎಂದು ಕಿಡಿಕಾರಿರುವ ವಿಪಕ್ಷಗಳು, ಬಿಜೆಪಿ ವಿರುದ್ಧ ಮತ್ತೆ ಒಗ್ಗಟ್ಟಿನ ಮಂತ್ರ ಜಪಿಸಿವೆ. ಗುರುವಾರ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಸಂಸತ್‌ ಭವನದಿಂದ ವಿಜಯ್‌ ಚೌಕದವರೆಗೆ ತ್ರಿವರ್ಣಧ್ವಜ ಯಾತ್ರೆ (tricolours flag march) ನಡೆಸಿದ 19 ವಿಪಕ್ಷಗಳ ನಾಯಕರು ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಪ್ರಜಾಸತಾತ್ಮಕ ಮೌಲ್ಯಗಳ ಬಗ್ಗೆ ಮಾತನಾಡುವ ಮೋದಿ ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತಿಲ್ಲ ಮತ್ತು ಅದಾನಿ ವಿಷಯದಲ್ಲಿ ಜೆಪಿಸಿ (JPC) ತನಿಖೆ ಕೋರಿದ ವಿಪಕ್ಷ ಬೇಡಿಕೆಯಿಂದ ಗಮನ ತಿರುಗಿಸುವ ನಿಟ್ಟಿನಲ್ಲಿ ಸಂಸತ್‌ ಕಲಾಪಕ್ಕೆ ಸರ್ಕಾರವೇ ಅಡ್ಡಿ ಮಾಡುತ್ತಿದೆ. 50 ಲಕ್ಷ ಕೋಟಿ ಮೊತ್ತದ ಬಜೆಟ್‌ಗೆ ಕೇವಲ ಕೇವಲ 12 ನಿಮಿಷದಲ್ಲಿ ಅಂಗೀಕಾರ ಪಡೆಯಲಾಗಿದೆ. ನಾವು ಪ್ರಶ್ನೆ ಕೇಳಿದಾಗಲೆಲ್ಲಾ ನಮಗೆ ಅಡ್ಡಿ ಮಾಡಲಾಗಿದೆ. ನನ್ನ 52 ವರ್ಷಗಳ ರಾಜಕೀಯ ಇತಿಹಾಸದಲ್ಲೇ ಇಂಥ ಬೆಳವಣಿಗೆ ಕಂಡಿರಲಿಲ್ಲ ಎಂದು ಖರ್ಗೆ ಕಿಡಿಕಾರಿದರು.

ಈ ಹಿಂದಿನ ಕಾಂಗ್ರೆಸ್‌ ಪ್ರತಿಭಟನೆ ವೇಳೆ ಗೈರಾಗುತ್ತಿದ್ದ ಆಪ್‌, ಬಿಆರ್‌ಎಸ್‌, ಟಿಎಂಸಿ, ಸಮಾಜವಾದಿ ಪಕ್ಷಗಳು ಕೂಡಾ ಗುರುವಾರದ ಪ್ರತಿಭಟನೆಯಲ್ಲಿ ಭಾಗಿಯಾಗಿ ಗಮನ ಸೆಳೆದವು. ಜೊತೆಗೆ ಬಜೆಟ್‌ ಅಧಿವೇಶನ ಮುಕ್ತಾಯವಾದ ಬಳಿಕ ಸಭಾಪತಿ ಆಯೋಜಿಸಿದ್ದ ಸಾಂಪ್ರಾದಾಯಿಕ ಚಹಾ ಕೂಟವನ್ನು ಕೂಡಾ ವಿರೋಧಪಕ್ಷಗಳು ಬಹಿಷ್ಕರಿಸಿದವು.

'ಮಾಫಿಯಾದವರನ್ನ ಹೂತುಹಾಕ್ತೇನೆ..' ಯುಪಿ ವಿಧಾನಸಭೆಯಲ್ಲಿ 'ಉಗ್ರಂ ವೀರಂ' ಆದ ಯೋಗಿ ಆದಿತ್ಯನಾಥ್‌!

ಸಂಸತ್ತಿಗೆ ವಿಪಕ್ಷಗಳಿಂದ ಅವಮಾನ: ಬಿಜೆಪಿ

ಕಪ್ಪು ಬಟ್ಟೆಧರಿಸಿ ಲೋಕಸಭೆಗೆ ಬಂದು ಸಂಸತ್ತಿಗೆ ಅವಮಾನ ಮಾಡಿದ್ದಾರೆ. ಪ್ರತಿಭಟನೆ ನಡೆಸುವ ಮೂಲಕ ಬಜೆಟ್‌ ಅಧಿವೇಶನದ ಕೊನೆಯ ದಿನದವರೆಗೂ ಕಲಾಪಗಳಿಗೆ ಅಡ್ಡಿಪಡಿಸಿದ್ದಾರೆ’ ಎಂದು ಕೇಂದ್ರ ಕಾನೂನು ಸಚಿವ ಕಿರೆಣ್‌ ರಿಜಿಜು ಕಾಂಗ್ರೆಸ್‌ ಹಾಗೂ ಇತರ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಗುರುವಾರ ಬಜೆಟ್‌ ಅಧಿವೇಶನ ಅಂತ್ಯಗೊಂಡ ಹಿನ್ನೆಲೆ ಮಾತನಾಡಿದ ಅವರು ‘ಒಬ್ಬ ವ್ಯಕ್ತಿಗಾಗಿ ಕಾಂಗ್ರೆಸ್‌ ಹಾಗೂ ಅದರ ಗ್ಯಾಂಗ್‌ ಸದನವನ್ನು ಸದನಕ್ಕೆ ಅಡ್ಡಿಪಡಿಸಿವೆ. ಇದು ದೇಶದ ದುರದೃಷ್ಟ. ಸಂಸತ್ತು ನಿರ್ವಹಣೆಗೆ ನಮಗೆ ಶಿಸ್ತು ಬೇಕು. ಒಬ್ಬ ಸಂಸದ ರಾಹುಲ್‌ ಗಾಂಧಿಗಾಗಿ ಕಾಂಗ್ರೆಸ್‌ ಹಾಗೂ ಅದರ ಬೆಂಬಲಿಗರು ಏನು ಮಾಡುತ್ತಿದ್ದಾರೆಂಬುದನ್ನು ದೇಶ ನೊಡುತ್ತಿದೆ. ಕಾಂಗ್ರೆಸ್‌ ಮತ್ತು ಅದರ ಗುಂಪುಗಳು ಸೂರತ್‌ ನ್ಯಾಯಾಲಯದ ಮೇಲೆ ಒತ್ತಡ ಹೇರಲು ಗುಂಪಾಗಿ ಹೋಗಿದ್ದು ಖಂಡನೀಯ’ ಎಂದು ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!