2ನೇ ದಿನವೂ ಉತ್ತರ ಕರ್ನಾಟಕದಲ್ಲಿ ಸುದೀಪ್‌ ಪ್ರಚಾರ ಅಬ್ಬರ: ಕಿಚ್ಚನ ನೋಡಲು ಮುಗಿಬಿದ್ದ ಜನ

By Kannadaprabha News  |  First Published Apr 28, 2023, 8:30 AM IST

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ಹಿರೇಕೆರೂರು, ಬ್ಯಾಡಗಿಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಬೃಹತ್‌ ರೋಡ್‌ ಶೋ ನಡೆಸಿದ ನಟ ಕಿಚ್ಚ ಸುದೀಪ್‌. 


ಕೂಡ್ಲಿಗಿ/ಹಾವೇರಿ(ಏ.28):  ಬಿಜೆಪಿ ಪರ ಭರ್ಜರಿ ಪ್ರಚಾರ ಕೈಗೊಂಡಿರುವ ನಟ ಕಿಚ್ಚ ಸುದೀಪ್‌ ಅವರು ಗುರುವಾರ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಹಾವೇರಿ ಜಿಲ್ಲೆಯ ರಾಣಿಬೆನ್ನೂರು, ಹಿರೇಕೆರೂರು, ಬ್ಯಾಡಗಿಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಬೃಹತ್‌ ರೋಡ್‌ ಶೋ ನಡೆಸಿದರು. ಬೆಳಗ್ಗೆ ಕೂಡ್ಲಿಗಿಗೆ ಆಗಮಿಸಿದ ಸುದೀಪ್‌, ಕೊತ್ತಲ ಆಂಜನೇಯಸ್ವಾಮಿ ದೇವಸ್ಥಾನದಿಂದ ಮದಕರಿ ನಾಯಕ ವೃತ್ತದವರೆಗೆ ಬಿಜೆಪಿ ಅಭ್ಯರ್ಥಿ ಲೋಕೇಶ್‌ ವಿ.ನಾಯಕ ಪರ ರೋಡ್‌ ಶೋ ನಡೆಸಿ, ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಬಳಿಕ, ಬೆಳಗ್ಗೆ 11ರ ಸುಮಾರಿಗೆ ರಾಣಿಬೆನ್ನೂರಿಗೆ ಆಗಮಿಸಿ, ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಅವರೊಂದಿಗೆ ಗಂಗಾಜಲ ಚೌಡೇಶ್ವರಿ ದೇವಸ್ಥಾನದ ಬಳಿಯಿಂದ ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದರು.

ಬಳಿಕ, ಹಿರೇಕೆರೂರಿಗೆ ತೆರಳಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲರ ಪರ ಶಂಕರರಾವ್‌ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ಸಾಗಿ ಸರ್ವಜ್ಞ ವೃತ್ತದವರೆಗೂ ಅಪಾರ ಜನಸ್ತೋಮದ ನಡುವೆ ಭರ್ಜರಿ ರೋಡ್‌ ಶೋ ನಡೆಸಿದರು. ಬಿ.ಸಿ.ಪಾಟೀಲ ಮಾಡಿರುವ ಅಭಿವೃದ್ಧಿ ಕಾರ್ಯ ನೋಡಿ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

Tap to resize

Latest Videos

undefined

ಮಾತು ಕೊಟ್ಟಿದ್ದೇನೆ, ಇಂದಿನಿಂದ ಸಂಪೂರ್ಣವಾಗಿ ಬಿಜೆಪಿ ಪರ ಪ್ರಚಾರ: ಸುದೀಪ್

ಅಲ್ಲಿಂದ, ಬ್ಯಾಡಗಿಗೆ ಆಗಮಿಸಿ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಅವರೊಂದಿಗೆ, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಎಂ.ಆರ್‌.ಪಾಟೀಲರ ಪರ ಭರ್ಜರಿ ರೋಡ್‌ ಶೋ ನಡೆಸಿದರು. ಮೋದಿ ದೇಶಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ. ನಾವೆಲ್ಲ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಮೋದಿ ಕಾರಣ. ಇದನ್ನು ಮತದಾರರು ಆತ್ಮಾವಲೋಕನ ಮಾಡಿಕೊಂಡು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಸುದೀಪ್‌ ಅವರನ್ನು ನೋಡಲು ಎಲ್ಲೆಡೆ ಜನಸಾಗರವೇ ಹರಿದು ಬಂದಿತ್ತು. ಇದು ಬಿಜೆಪಿ ಅಭ್ಯರ್ಥಿಗಳ ವಿಶ್ವಾಸ ಇಮ್ಮಡಿಗೊಳಿಸುವಂತೆ ಮಾಡಿತು. ಅಭಿಮಾನಿಗಳನ್ನು ನೋಡಿ ಸುದೀಪ್‌ ಪುಳಕಿತಗೊಂಡು, ನಿಮ್ಮ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದು ಹೇಳಿದರು.

ಕೇಸರಿ ಬಾವುಟ, ಕಿಚ್ಚ ಭಾವಚಿತ್ರ ಹಿಡಿದಿದ್ದ ಅಭಿಮಾನಿಗಳಿಂದ ಬಿಜೆಪಿ ಪರ ಘೋಷಣೆಗಳು ಮುಗಿಲು ಮುಟ್ಟಿದ್ದವು. ಕಿಚ್ಚ...ಕಿಚ್ಚ ಎಂದು ಜನರು ಘೋಷಣೆ ಕೂಗಿದರು. ಸುದೀಪ್‌ ಜತೆ ಸೆಲ್ಫಿಗಾಗಿ ಯುವಕರು ಮುಗಿಬೀಳುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು.

click me!