ಮುಖ್ಯಮಂತ್ರಿ ಬದಲಾವಣೆ, ಮೂರು ಡಿಸಿಎಂ ಹುದ್ದೆ ಸೃಷ್ಟಿ, ದಲಿತ ಮುಖ್ಯಮಂತ್ರಿ ಹಾಗೂ ಇದೀಗ ಹನಿಟ್ರ್ಯಾಪ್‌ನಂಥ ವಿಚಾರಗಳನ್ನು ಮುಂದಿಟ್ಟುಕೊಂಡು ಪಕ್ಷದ ಘಟಾನುಘಟಿ ನಾಯಕರೇ ಬೀದಿ ಜಗಳಕ್ಕೆ ಇಳಿದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಹುಟ್ಟುಹಾಕಿದೆ.
ಬೆಂಗಳೂರು (ಮಾ.27): ಇಡೀ ದೇಶವೇ ನಿಬ್ಬೆರಗಾಗುವಂತೆ ಯಶಸ್ವಿಯಾಗಿ ಗ್ಯಾರಂಟಿ ಯೋಜನೆ ನೀಡಿದ ರಾಜ್ಯ ಕಾಂಗ್ರೆಸ್ ಅದರ ಪ್ರಯೋಜನ ಪಡೆಯುತ್ತಿಲ್ಲ. ಬದಲಾಗಿ ಮುಖ್ಯಮಂತ್ರಿ ಬದಲಾವಣೆ, ಮೂರು ಡಿಸಿಎಂ ಹುದ್ದೆ ಸೃಷ್ಟಿ, ದಲಿತ ಮುಖ್ಯಮಂತ್ರಿ ಹಾಗೂ ಇದೀಗ ಹನಿಟ್ರ್ಯಾಪ್‌ನಂಥ ವಿಚಾರಗಳನ್ನು ಮುಂದಿಟ್ಟುಕೊಂಡು ಪಕ್ಷದ ಘಟಾನುಘಟಿ ನಾಯಕರೇ ಬೀದಿ ಜಗಳಕ್ಕೆ ಇಳಿದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಹುಟ್ಟುಹಾಕಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಸಾಧನೆಗಿಂತ ಆಂತರಿಕ ಕಚ್ಚಾಟದಂಥ ನಕಾರಾತ್ಮಕ ವಿಚಾರಗಳು ಹೆಚ್ಚು ಪ್ರಚಾರಕ್ಕೆ ಬರುತ್ತಿವೆ.
ಇದು ಹೀಗೆ ಮುಂದುವರೆದರೆ ಪಕ್ಷ ಹಾಗೂ ಸರ್ಕಾರ ದುರ್ಬಲಗೊಳ್ಳುವ ಭೀತಿಯಿಂದ ಕಾರ್ಯಕರ್ತರು ಕಂಗೆಟ್ಟಿದ್ದಾರೆ. ಈ ಬಗ್ಗೆ ಕೆಲ ಹಿರಿಯ ನಾಯಕರ ನೆರವಿನಿಂದ ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರಲು ಮುಂದಾಗಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು.ರಾಜ್ಯ ಕಾಂಗ್ರೆಸ್ ಸರ್ಕಾರ ವಾರ್ಷಿಕ 57,000 ಕೋಟಿ ರು.ಗಳನ್ನು ನೇರವಾಗಿ ಜನರ ಕೈಗೆ ನೀಡುವ ಕ್ರಾಂತಿಕಾರಕ ಗ್ಯಾರಂಟಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ. ಬೇರೆ ರಾಜ್ಯಗಳು ನಮ್ಮ ಗ್ಯಾರಂಟಿಗಳನ್ನು ಅನುಕರಣೆ ಮಾಡಿದರೂ ಅನುಷ್ಠಾನ ಮಾಡಲು ಹೆಣಗಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮೂರನೇ ಬಜೆಟ್‌ನಲ್ಲೂ ಯಶಸ್ವಿಯಾಗಿ ಹಣ ಮೀಸಲಿಟ್ಟಿದೆ.
ಭಾರತದಲ್ಲಿನ ಚುನಾವಣಾ ವ್ಯವಸ್ಥೆ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಚ್ಚುಗೆ
ಹೀಗಿದ್ದರೂ ಇದರ ಯಶಸ್ಸಿನ ಶ್ರೇಯ ಹಾಗೂ ಅದರ ಫಲ ದಕ್ಕಿಸಿಕೊಳ್ಳಲು ಆಂತರಿಕ ಕಚ್ಚಾಟ ಅಡ್ಡಿಯಾಗಿದೆ. ಈ ಬಗ್ಗೆ ಪಕ್ಷದ ನಾಯಕರು ಗಂಭೀರವಾಗಿ ಚಿಂತನೆ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಲೋಕಸಭೆ ಚುನಾವಣೆ ಫಲಿತಾಂಶ ಬೆನ್ನಲ್ಲೇ ಮುಖ್ಯಮಂತ್ರಿ ಬದಲಾವಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿ ಸ್ಥಾನಗಳ ಸೃಷ್ಟಿ ಬಗ್ಗೆ ಹೇಳಿಕೆಗಳು ಶುರುವಾದವು. ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಾಗ ಅಂತೂ ಸ್ವ ಪಕ್ಷೀಯರೇ ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎಂಬ ಬಹಿರಂಗ ಹೇಳಿಕೆ ನೀಡಲು ಶುರು ಮಾಡಿದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬದಲಾದರೆ ದಲಿತ ಮುಖ್ಯಮಂತ್ರಿಯೇ ಆಗಬೇಕು ಎಂಬ ಕೂಗು ಜೋರಾಯಿತು.
ಜತೆಗೆ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಹೆಸರಿನಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಬೇಕು ಎಂಬ ಆಗ್ರಹವೂ ಕೇಳಿಬಂತು. ವಿಚಿತ್ರವೆಂದರೆ, ಹಿರಿಯ ಸಚಿವರಾದ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಮಹದೇವಪ್ಪ, ರಾಜಣ್ಣ ಅಂತಹವರೇ ಬಹಿರಂಗವಾಗಿ ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆ ನೀಡತೊಡಗಿದ್ದು ಪಕ್ಷದ ಕಾರ್ಯಕರ್ತರನ್ನು ದಿಗ್ಮೂಢಗೊಳಿಸಿದೆ.ದಲಿತ ಸಚಿವರ ಪ್ರತ್ಯೇಕ ಸಭೆ, ಹೈಕಮಾಂಡ್ ಭೇಟಿಯಂಥ ಪ್ರಯತ್ನಗಳ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನೆಯಾಗುವಂತೆ ಮಾಡುವ ಮೂಲಕ ಪಕ್ಷ ಹಾಗೂ ಸರ್ಕಾರ ಸ್ಥಿರವಾಗಿಲ್ಲ ಎಂಬ ಸ್ಪಷ್ಟ ಸುಳಿವನ್ನು ನೀಡಲಾಗುತ್ತಿದೆ. ಇದು ರಾಜ್ಯ ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಲ್ಲೇ ಅಲುಗಾಡಿಸಲು ಕಾರಣವಾಗಿದೆ.
ಇದೀಗ ಇತ್ತೀಚೆಗೆ ಸಚಿವರ ವಿರುದ್ಧವೇ ಹನಿಟ್ರ್ಯಾಪ್ ಯತ್ನ, ಇದರ ವಿರುದ್ಧ ಸ್ವಪಕ್ಷೀಯರ ಹಸ್ತ ಎಂಬಂತಹ ಹೇಳಿಕೆಗಳು, ಸ್ವಪಕ್ಷೀಯ ಶಾಸಕರಿಂದಲೇ ಟೆಲಿಫೋನ್ ಕದ್ದಾಲಿಕೆ ದೂರು, ರನ್ಯಾ ರಾವ್ ಪ್ರಕರಣದಲ್ಲಿ ಪ್ರೊಟೋಕಾಲ್ ವಿಚಾರದಲ್ಲಿ ಸಚಿವರ ಹೆಸರು ತಳಕು ಸೇರಿದಂತೆ ಒಂದಲ್ಲಾ ಒಂದು ವಿಚಾರದಲ್ಲಿ ಆಂತರಿಕ ಕಚ್ಚಾಟ ಮೇರೆ ಮೀರಿದೆ. ಸರ್ಕಾರ ಹಾಗೂ ಆಡಳಿತದಲ್ಲಿ ನಕಾರಾತ್ಮಕ ವಿಷಯ ಇಲ್ಲದಿದ್ದರೂ ಪಕ್ಷದ ನಾಯಕರೇ ಅನಗತ್ಯ ವಿಚಾರಗಳನ್ನು ವಿವಾದಗಳನ್ನಾಗಿಸುತ್ತಿದ್ದಾರೆ. ಇದೆಲ್ಲ ಪಕ್ಷದ ನಾಯಕರಲ್ಲಿ ಹೊಂದಾಣಿಕೆ ಎಂಬುದು ಲವಲೇಶವೂ ಇಲ್ಲ. ಇದನ್ನು ಸರಿಯಾಗಿ ನಿಭಾಯಿಸಲುವಲ್ಲಿ ಹೈಕಮಾಂಡ್ ನಾಯಕರು ಸಾಕಷ್ಟು ಗಮನ ಹರಿಸುತ್ತಿಲ್ಲ.
ಇದರಿಂದ ಗ್ಯಾರಂಟಿ ಸಾಧನೆ, ಪಕ್ಷದ ಅತ್ಯುತ್ತಮ ಕಾರ್ಯಕ್ರಮಗಳು ಅದರಿಂದ ಜನರು ಪಡೆಯುತ್ತಿರುವ ಪ್ರಯೋಜನ ಮುಚ್ಚಿ ಹೋಗುತ್ತಿದೆ. ಜತೆಗೆ ಬಿಜೆಪಿಯಲ್ಲಿನ ಆಂತರಿಕ ಹಾಗೂ ಬಹಿರಂಗ ಕಿತ್ತಾಟವನ್ನೂ ಟೀಕಿಸುವ ನೈತಿಕತೆಯನ್ನು ಕಾಂಗ್ರೆಸ್ ಪಕ್ಷ ಕಳೆದುಕೊಳ್ಳುವ ಸ್ಥಿತಿಗೆ ಬಂದಿದೆ. ಬಿಜೆಪಿಯಲ್ಲಿನ ಭಿನ್ನಮತದ ಸುವರ್ಣವಕಾಶ ಬಳಸಿಕೊಂಡು ಮುಂದಿನ ಅವಧಿಗೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರುವಂತಹ ಅವಕಾಶವಿದ್ದರೂ ನಾಯಕರ ನಡುವಿನ ಒಳ ಸುಳಿ ಪಕ್ಷವನ್ನು ಆಂತರಿಕವಾಗಿ ಸುಡುತ್ತಿದೆ ಎಂಬುದು ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ ಎನ್ನುತ್ತಾರೆ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು.
ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್
ಆಕ್ರೋಶಕ್ಕೆ ಕಾರಣ ಏನು?
-ಇಡೀ ದೇಶವೇ ಅಚ್ಚರಿ ಪಡುವಂತೆ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಆದರೆ ಅದರ ಲಾಭವನ್ನು ಪಕ್ಷ ಪಡೆಯುತ್ತಿಲ್ಲ
-ಪಕ್ಷದ ಬೆಳವಣಿಗೆ ಬಿಟ್ಟು, ಸಿಎಂ ಬದಲು, 3 ಡಿಸಿಎಂ ಹುದ್ದೆ ಸೃಷ್ಟಿ, ದಲಿತ ಸಿಎಂ, ಹನಿಟ್ರ್ಯಾಪ್ ವಿಚಾರಗಳಲ್ಲೇ ನಾಯಕರು ಬ್ಯುಸಿ
-ಪಕ್ಷದ ನಾಯಕರ ಕಚ್ಚಾಟದಿಂದಾಗಿ ಸರ್ಕಾರದ ಸಾಧನೆಗಿಂತ ಆಂತರಿಕ ಭಿನ್ನಮತದ ವಿಷಯಗಳೇ ಹೆಚ್ಚು ಚರ್ಚೆಗೆ ಬರುತ್ತಿವೆ
-ನಾಯಕರಿಂದಾಗಿ ಸರ್ಕಾರ ದುರ್ಬಲದ ಆತಂಕ. ಇದು ಹೀಗೆಯೇ ಮುಂದುವರೆದರೆ ಹೈಕಮಾಂಡ್‌ಗೆ ದೂರಲು ಕಾರ್ಯಕರ್ತರ ಚಿಂತನೆ