ಗದ್ದಲ ಎಬ್ಬಿಸಿದ 7 ಕಾಂಗ್ರೆಸ್‌ ಸದಸ್ಯರು ಬಜೆಟ್‌ ಅಧಿವೇಶನದಿಂದ ಅಮಾನತು!

By Kannadaprabha NewsFirst Published Mar 6, 2020, 8:01 AM IST
Highlights

ಗದ್ದಲ ಎಬ್ಬಿಸಿದ 7 ಕಾಂಗ್ರೆಸ್‌ ಸದಸ್ಯರು ಬಜೆಟ್‌ ಅಧಿವೇಶನ ಮುಗಿವವರೆಗೂ ಅಮಾನತು| ಸ್ಪೀಕರ್‌ ಟೇಬಲ್‌ ಮೇಲಿದ್ದ ಕಾಗದ ಹರಿದೆಸೆದ ಕಾಂಗ್ರೆಸ್‌ ಸದಸ್ಯರು

ನವದೆಹಲಿ[ಮಾ.06]: ದೆಹಲಿ ಹಿಂಸಾಚಾರ ವಿಷಯವಾಗಿ ಲೋಕಸಭೆಯಲ್ಲಿ ಭಾರೀ ಗದ್ದಲ ಎಬ್ಬಿಸಿದ್ದ ಕಾಂಗ್ರೆಸ್‌ನ 7 ಸದಸ್ಯರನ್ನು ಪ್ರಸಕ್ತ ನಡೆಯುತ್ತಿರುವ ಬಜೆಟ್‌ ಅಧಿವೇಶನ ಮುಗಿವವರೆಗೂ ಅಮಾನತು ಮಾಡಿ ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ.

ಅಧಿವೇಶನ ಆರಂಭವಾದಾಗಿನಿಂದಲೂ ದೆಹಲಿ ಹಿಂಸಾಚಾರ ವಿಷಯ ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗೆ ಬಂದು ಘೋಷಣೆ ಕೂಗುತ್ತಾ ಕಲಾಪಕ್ಕೆ ಅಡ್ಡಿಪಡಿಸುತ್ತಲೇ ಇದ್ದರು. ಗುರುವಾರವೂ ಇದೇ ರೀತಿಯ ಘಟನೆ ಮುಂದುವರೆದಿತ್ತು. ಈ ಹಿನ್ನೆಲೆಯಲ್ಲಿ ಸ್ಪೀಕರ್‌ ಪೀಠದಲ್ಲಿದ್ದ ಮೀನಾಕ್ಷಿ ಲೇಖಿ ಅವರು ಕಾಂಗ್ರೆಸ್‌ನ ಗೌರವ್‌ ಗೊಗೊಯ್‌, ಟಿ.ಎನ್‌. ಪ್ರಥಾಪನ್‌, ಡೀನ್‌ ಕುರಿಯಾಕೋಸ್‌, ಮಾಣಿಕ್ಯಂ, ಠಾಗೋರ್‌, ರಾಜ್‌ಮೋಹನ್‌ ಉನ್ನಿಥಾನ್‌, ಬೆನ್ನಿ ಬೆಹಾನನ್‌ ಮತ್ತು ಗುರುಜೀತ್‌ ಸಿಂಗ್‌ ಅವರನ್ನು ಸದನದಿಂದ ಹೊರಗೆ ಹೋಗುವಂತೆ ಸೂಚಿಸಿದರು. ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಈ ಸದಸ್ಯರನ್ನು ಬಜೆಟ್‌ ಅಧಿವೇಶನ ಮುಕ್ತಾಯ ಆಗುವವರೆಗೂ ಅಮಾನತುಗೊಳಿಸುವ ಗೊತ್ತುವಳಿಯೊಂದನ್ನು ಮಂಡಿಸಿದರು.

ವಿಪಕ್ಷಗಳ ಪ್ರತಿಭಟನೆಯ ಮಧ್ಯೆಯೇ ಗೊತ್ತುವಳಿಗೆ ಧ್ವನಿ ಮತದ ಅನುಮೋದನೆ ನೀಡಲಾಯಿತು. ಬಳಿಕ ಸದಸ್ಯರ ಅಮಾನತು ಮಾಡಿ ಸ್ಪೀಕರ್‌ ಕಚೇರಿ ಆದೇಶ ಹೊರಡಿಸಿತು. ಸ್ಪೀಕರ್‌ ಆದೇಶವನ್ನು ಕಾಂಗ್ರೆಸ್‌ ಬಹುವಾಗಿ ಟೀಕಿಸಿದೆ.

2ನೇ ದಿನವೂ ಗೈರು:

ಲೋಕಸಭೆಯಲ್ಲಿ ವಿಪಕ್ಷಗಳು ತೀವ್ರ ಗದ್ದಲ ಸೃಷ್ಟಿಸುತ್ತಿರುವುದಕ್ಕೆ ಸ್ಪೀಕರ್‌ ಓಂ ಬಿರ್ಲಾ ಸಿಟ್ಟಾಗಿದ್ದಾರೆ. ಹೀಗಾಗಿ ಅವರು ಸದನದ ಕಲಾಪಗಳಿಗೆ ಸತತ ಎರಡನೇ ದಿನವೂ ಗೈರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ

click me!