Congress Politics: 50ರ ಒಳಗಿನವರಿಗೆ ಶೇ.50 ಕಾಂಗ್ರೆಸ್‌ ಟಿಕೆಟ್‌

Published : Jun 04, 2022, 04:24 AM IST
Congress Politics: 50ರ ಒಳಗಿನವರಿಗೆ ಶೇ.50 ಕಾಂಗ್ರೆಸ್‌ ಟಿಕೆಟ್‌

ಸಾರಾಂಶ

*   ಟಿಕೆಟ್‌ ಹಂಚಿಕೆ ವೇಳೆ ಸ್ತ್ರೀಯರಿಗೆ 33% ಪಾಲು *  ಜೆಡಿಎಸ್‌- ಬಿಜೆಪಿಯೊಂದಿಗೆ ಸಮಾನ ಅಂತರ *  ಚುನಾವಣೆಗೆ ಕಾಂಗ್ರೆಸ್‌ ಮಿನಿ ಪ್ರಣಾಳಿಕೆ ರೆಡಿ   

ಬೆಂಗಳೂರು(ಜೂ.04): ಚುನಾವಣೆ ಟಿಕೆಟ್‌ ಹಂಚಿಕೆ ಹಾಗೂ ಪಕ್ಷದ ಹೊಣೆಗಾರಿಕೆ ಹಂಚುವಾಗ ಯುವ ಶಕ್ತಿಗೆ ಆದ್ಯತೆ, ಜೆಡಿಎಸ್‌-ಬಿಜೆಪಿಯೊಂದಿಗೆ ಸಮಾನ ಅಂತರ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರುಗೊಳ್ಳುವುದು, ಪಕ್ಷದಲ್ಲಿ ಐದು ವರ್ಷ ಸೇವೆ ಸಲ್ಲಿಸಿದ್ದರೆ ಒಂದು ಕುಟುಂಬಕ್ಕೆ ಒಬ್ಬರಿಗೆ ಸ್ಥಾನ ನೀತಿಯಿಂದ ವಿನಾಯ್ತಿ ನೀಡುವುದು.

- ಇವು ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಸ್ಪಷ್ಟ ಬಹುಮತದೊಂದಿಗೆ ಗೆಲ್ಲುವ ಉದ್ದೇಶದಿಂದ ಬೆಂಗಳೂರು ನಗರ ಹೊರವಲಯದಲ್ಲಿ ನಡೆದ ಎರಡು ದಿನಗಳ ‘ರಾಜ್ಯಮಟ್ಟದ ನವ ಸಂಕಲ್ಪ ಶಿಬಿರದಲ್ಲಿ’ ಕಾಂಗ್ರೆಸ್‌ ತೆಗೆದುಕೊಂಡ ಪ್ರಮುಖ ನಿರ್ಣಯಗಳು. ಈ ಬಗ್ಗೆ ಮಾತನಾಡಿರುವ ಡಿ.ಕೆ. ಶಿವಕುಮಾರ್‌, ಪಕ್ಷದ ಎಲ್ಲ ನಾಯಕರು ಸೇರಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ’ ಎಂದರು.

ಅಕ್ರಮ ಹಣ ವರ್ಗಾವಣೆ ಪ್ರಕರಣ, ಡಿಕೆಶಿಗೆ ನ್ಯಾಯಾಲಯದಿಂದ ಸಮನ್ಸ್‌ ಜಾರಿ

ಪಂಚಾಯ್ತಿ, ಬಿಬಿಎಂಪಿ ಚುನಾವಣೆ ಗೆಲ್ಲಲು ರಣನೀತಿ:

ಶತಾಯಗತಾಯ ಮುಂದಿನ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಬಿಬಿಎಂಪಿ ಸೇರಿದಂತೆ ಸ್ಥಳೀಯ ಚುನಾವಣೆಗಳನ್ನು ಗೆಲ್ಲಬೇಕು. ಯುವಶಕ್ತಿಗೆ ಆದ್ಯತೆ ನೀಡಿದರೆ ಈ ಗುರಿಸಾಧನೆ ಸಾಧ್ಯ. ಇದಕ್ಕಾಗಿ ಈ ಎಲ್ಲಾ ಚುನಾವಣೆಗಳಲ್ಲೂ ಶೇ.50 ರಷ್ಟು ಚುನಾವಣಾ ಟಿಕೆಟ್‌ಗಳನ್ನು 50 ವರ್ಷದೊಳಗಿನ ಯುವ ಅಭ್ಯರ್ಥಿಗಳಿಗೆ ನೀಡಬೇಕು. ಇದೇ ವೇಳೆ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಲು ಸಹ ಆದ್ಯತೆ ನೀಡಲು ನಿರ್ಧಾರ ಮಾಡಲಾಗಿದೆ. ಈ ನಿರ್ಧಾರವನ್ನು ಮುಂದಿನ ವಿಧಾನಸಭೆ ಚುನಾವಣೆ ವೇಳೆಯೂ ಅನ್ವಯಿಸುವ ಕುರಿತು ಚರ್ಚಿಸಿದ್ದು ಚುನಾವಣೆ ಹತ್ತಿರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಕೇವಲ ಚುನಾವಣೆ ಟಿಕೆಟ್‌ ಮಾತ್ರವಲ್ಲದೆ ಪಕ್ಷದ ಪದಾಧಿಕಾರಿಗಳ ಹುದ್ದೆಗಳಲ್ಲೂ ಶೇ.50 ರಷ್ಟುಮೀಸಲಾತಿಯನ್ನು 50 ವರ್ಷದೊಳಗಿನ ವ್ಯಕ್ತಿಗಳಿಗೆ ನೀಡುವುದು. ತನ್ಮೂಲಕ ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡುವ ಮೂಲಕ ಭವಿಷ್ಯದಲ್ಲಿ ಸದೃಢವಾಗಿ ಪಕ್ಷವನ್ನು ಸಂಘಟಿಸಲು ನಿರ್ಧರಿಸಲಾಗಿದೆ.

ಸಂಕಲ್ಪ ಶಿಬಿರಕ್ಕೆ ತೆರೆ ಬಿದ್ದ ಬಳಿಕ ಶುಕ್ರವಾರ ಸಂಜೆ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪಕ್ಷ ಸಂಘಟನೆಯಲ್ಲಿ ಬೂತ್‌ ಮಟ್ಟದಿಂದ, ರಾಜ್ಯ ಮಟ್ಟದವರೆಗೆ ಖಾಲಿ ಇರುವ ಪದಾಧಿಕಾರಿಗಳ ಹುದ್ದೆಗಳನ್ನೂ ಆದಷ್ಟುಬೇಗ ಭರ್ತಿ ಮಾಡಲಾಗುವುದು. ಜೂ.25ರ ಒಳಗೆ ಸ್ಥಳೀಯ ಮಟ್ಟದ ಸಮಿತಿಗಳ ಚುನಾವಣೆ ನಡೆಸಲಾಗುವುದು ಎಂದು ಪ್ರಕಟಿಸಿದರು.

ಪಕ್ಷದ ಹುದ್ದೆಯಲ್ಲಿ ಎಲ್ಲಾ ವರ್ಗದ ಜನರಿಗೆ ಅವಕಾಶ ನೀಡಲಾಗುವುದು. ಸ್ಥಳೀಯ ಹಾಗೂ ರಾಜ್ಯ ಮಟ್ಟದಲ್ಲೂ ಎಲ್ಲಾ ವರ್ಗಗಳಿಗೆ ಆದ್ಯತೆ ನೀಡಲಾಗುವುದು. ಪಂಚಾಯ್ತಿ ಹಾಗೂ ವಾರ್ಡ್‌ ಅನ್ನು ಒಂದು ಯೂನಿಟ್‌ ಆಗಿ ಪರಿಗಣಿಸಿ ಸಮಿತಿ ರಚನೆ ಮಾಡಲು ತೀರ್ಮಾನಿಸಿರುವುದಾಗಿ ತಿಳಿಸಿದರು.

ಒಂದು ಕುಟುಂಬಕ್ಕೆ ಒಂದು ಟಿಕೆಟ್‌ ಸೂತ್ರ ಅಂತಿಮವಲ್ಲ:

ಪಕ್ಷದಲ್ಲಿ ನಾಯಕರ ಕುಟುಂಬಗಳು ಅಥವಾ ಸಂಬಂಧಿಗಳಿಗೆ ಟಿಕೆಟ್‌ ನೀಡುವ ವಿಚಾರವಾಗಿ ಒಂದು ಕುಟುಂಬಕ್ಕೆ ಒಂದು ಟಿಕೆಟ್‌ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಹಾಗೆಂದ ಮಾತ್ರಕ್ಕೆ ಒಂದು ಕುಟುಂಬದಲ್ಲಿ ಮತ್ತೊಬ್ಬರಿಗೆ ಅವಕಾಶ ನೀಡುವುದೇ ಇಲ್ಲ ಎಂದಲ್ಲ. ಕುಟುಂಬದಲ್ಲಿ ಮತ್ತೊಬ್ಬರೂ ಪಕ್ಷಕ್ಕಾಗಿ 5 ವರ್ಷಗಳ ಕಾಲ ದುಡಿದಿದ್ದರೆ ಅವರಿಗೆ ಅವಕಾಶ ನೀಡಬಹುದು ಎಂದು ತೀರ್ಮಾನಿಸಲಾಗಿದೆ.

ಪಕ್ಷ ವಿರೋಧಿ ಹೇಳಿಕೆ ನೀಡುವಂತಿಲ್ಲ:

ಇನ್ನು ಪಕ್ಷದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ. ವಿಧಾನಸಭೆ, ರಾಜ್ಯಸಭೆ ಸ್ಥಾನ ಕೈ ತಪ್ಪಿರುವ ಹಲವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಬೆರಳೆಣಿಕೆ ಸ್ಥಾನಗಳನ್ನು ಎಲ್ಲಾ ಆಕಾಂಕ್ಷಿಗಳಿಗೂ ನೀಡಲು ಆಗುವುದಿಲ್ಲ. ಇದನ್ನು ಮನಗಂಡು ಪಕ್ಷ ಸಂಘಟನೆಗೆ ಸಹಕರಿಸಬೇಕು. ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅನಗತ್ಯವಾಗಿ ಬಹಿರಂಗ ಹೇಳಿಕೆಗಳನ್ನು ನೀಡಿದರೆ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಶಿಬಿರದಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಇದೇ ತಿಂಗಳು ಜಿಲ್ಲಾ ಮಟ್ಟದ ಚಿಂತನಾ ಶಿಬಿರ

ಉದಯಪುರದಲ್ಲಿ ನಡೆದ ರಾಷ್ಟ್ರಮಟ್ಟದ ನವ ಸಂಕಲ್ಪ ಶಿಬಿರದ ಮಾದರಿಯಲ್ಲಿ ಗುರುವಾರ ಹಾಗೂ ಶುಕ್ರವಾರ ರಾಜ್ಯಮಟ್ಟದ ನವ ಸಂಕಲ್ಪ ಶಿಬಿರ ನಡೆಸಲಾಗಿದೆ. ಅಂತಿಮ ದಿನವಾದ ಶುಕ್ರವಾರ ಇದೇ ತಿಂಗಳು ಜಿಲ್ಲಾ ಮಟ್ಟದಲ್ಲೂ ಇದೇ ಮಾದರಿಯಲ್ಲಿ ಚಿಂತನಾ ಶಿಬಿರ ನಡೆಸಲು ನಿರ್ಧರಿಸಲಾಗಿದೆ. ಈ ಸಭೆಗಳಲ್ಲಿ ಸ್ಥಳೀಯ ಸಮಸ್ಯೆ ಚರ್ಚಿಸಲು ಮುಖಂಡರಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಡಿಕೆಶಿ vs ಸಿದ್ದರಾಮಯ್ಯ: ಎಂಎಲ್‌ಸಿ ಟಿಕೆಟ್‌ ಬಡಿದಾಟದಲ್ಲಿ ಗೆಲುವು ಯಾರಿಗೆ?

ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ

ವಿಧಾನಸಭೆ ಚುನಾವಣೆಯನ್ನು ಪಕ್ಷದ ಎಲ್ಲ ನಾಯಕರು ಸೇರಿ ಸಾಮೂಹಿಕ ನಾಯತ್ವದಲ್ಲಿ ಎದುರಿಸಲು ನವ ಸಂಕಲ್ಪ ಶಿಬಿರದಲ್ಲಿ ನಿರ್ಧರಿಸಲಾಗಿದೆ. ಜತೆಗೆ ಜೆಡಿಎಸ್‌ ಹಾಗೂ ಬಿಜೆಪಿ ಜತೆ ಸಮಾನ ಅಂತರ ಕಾಯ್ದುಕೊಂಡು ಸ್ವತಂತ್ರವಾಗಿ ಚುನಾವಣೆ ಎದುರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಚುನಾವಣೆಗೆ ಕಾಂಗ್ರೆಸ್‌ ಮಿನಿ ಪ್ರಣಾಳಿಕೆ ರೆಡಿ!

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ನೀರಾವರಿಗೆ 2 ಲಕ್ಷ ಕೋಟಿ ರು. ಅನುದಾನ, ಎಲ್ಲ ನೀರಾವರಿ ಯೋಜನೆ 5 ವರ್ಷದಲ್ಲಿ ಪೂರ್ಣ, ನರೇಗಾ ನಗರಪ್ರದೇಶಕ್ಕೂ ವಿಸ್ತರಣೆ, ವಸತಿ ಯೋಜನೆಯಡಿ ಫಲಾನುಭವಿಗಳಿಗೆ 2 ಬಿಎಚ್‌ಕೆ ಮನೆ ನೀಡಲು ಕಾಂಗ್ರೆಸ್‌ ಉದ್ದೇಶಿಸಿದೆ. ತನ್ಮೂಲಕ ವಿಧಾನಸಭೆ ಚುನಾವಣೆಗೆ ಈಗಲೇ ಮಿನಿ ಪ್ರಣಾಳಿಕೆ ಸಿದ್ಧಪಡಿಸಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!