
ಬೆಂಗಳೂರು (ಅ.10): ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪ ಕಾಮಗಾರಿಗೆ ಸಂಬಂಧಿಸಿದಂತೆ 50 ಕೋಟಿ ರು. ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಈ ವಿಷಯ ತಿಳಿಸಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಸವಕಲ್ಯಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ 2026ರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದಾಗಿ ಘೋಷಿಸಿದ್ದು, ಕಾಮಗಾರಿ ಭರದಿಂದ ಸಾಗಿದೆ.
ಗುತ್ತಿಗೆದಾರರಿಗೆ ಸುಮಾರು 73 ಕೋಟಿ ರು. ಹಣ ಪಾವತಿ ಆಗಬೇಕಿದ್ದು, ಈ ಪೈಕಿ ಇಂದು 50 ಕೋಟಿ ರು.ಗಳನ್ನು ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ತಾವು ಮಾಡಿದ ಮನವಿಯ ಮೇರೆಗೆ ಈಗ ಹಣ ಬಿಡುಗಡೆಯಾಗಿದ್ದು, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ, ಮುಂದಿನ ವರ್ಷ ಲೋಕಾರ್ಪಣೆ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
770 ಅಮರಗಣಂಗಳ ವಚನ: ಸುಮಾರು 700 ಕೋಟಿ ರು. ವೆಚ್ಚದಲ್ಲಿ ಆಧುನಿಕ ಅನುಭವ ಮಂಟಪ ಭವ್ಯ, ದಿವ್ಯವಾಗಿ ನಿರ್ಮಾಣವಾಗುತ್ತಿದ್ದು, ಬಸವಾದಿ ಶರಣರ ಕೊಡುಗೆಯನ್ನು ಇಡೀ ವಿಶ್ವಕ್ಕೇ ಸಾರಲಿದೆ. ಇಷ್ಟಲಿಂಗ ಪೂಜೆಯ ವೈಜ್ಞಾನಿಕ ಅಂಶಗಳೂ ಇಲ್ಲಿದ್ದು, ಜಗತ್ತಿನಾದ್ಯಂತ ಪ್ರವಾಸಿಗರನ್ನು ತನ್ನತ್ತ ಸೆಳೆಯಲಿದೆ ಎಂದರು.ಆಧುನಿಕ ಅನುಭವ ಮಂಟಪದಲ್ಲಿರುವ 770 ಕಂಬಗಳ ಮೇಲೆ 770 ಅಮರ ಗಣಂಗಳ ವಚನಗಳನ್ನು ಕೆತ್ತಲಾಗಿದೆ ಎಂದ ಈಶ್ವರ ಖಂಡ್ರೆ, ಕಾಮಗಾರಿಗಾಗಿ ಅಗತ್ಯ ಹಣ ಬಿಡುಗಡೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧನ್ಯವಾದ ಅರ್ಪಿಸಿದರು.
ಭಾಲ್ಕಿ ತಾಲೂಕಿನ ಖಾನಾಪುರ (ಮೈಲಾರ) ಗ್ರಾಮದಲ್ಲಿ ವಿಜಯದಶಮಿ ನಿಮಿತ್ತ ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ದೇವರ ಪಲ್ಲಕ್ಕಿ ಮೆರವಣಿಗೆ ವೈಭವದಿಂದ ನೆರವೇರಿತು. ಗುರುವಾರ ರಾತ್ರಿ 11ಗಂಟೆಗೆ ಮಲ್ಲಣ್ಣ ದೇಗುಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಮಲ್ಲಣ್ಣ ದೇವರಿಗೆ ಆರತಿ ಬೆಳಗುವುದರ ಜತೆಗೆ ವಿಶೇಷ ಪೂಜೆ ಸಲ್ಲಿಸಿ ಪಲ್ಲಕ್ಕಿ ಮೆರವಣಿಗೆ ಮತ್ತು ರಥೋತ್ಸವಕ್ಕೆ ಚಾಲನೆ ನೀಡಿದರು. ಘೃತಮಾರಿ ತುಪ್ಪದ ಮಾಳವ್ವ (ಗುರುತ ಮಲ್ಲಮ್ಮ) ದೇವಸ್ಥಾನ, ಮುಖ್ಯ ಬೀದಿ, ಬೀದರ-ಭಾಲ್ಕಿ ಮುಖ್ಯ ರಸ್ತೆ ಮೂಲಕ ಹಾದು ಹನುಮಾನ್ ದೇವಸ್ಥಾನಕ್ಕೆ ಪಲ್ಲಕ್ಕಿ ಮೆರವಣಿಗೆ ತಲುಪಿತು. ಮೆರವಣಿಗೆಯುದ್ದಕ್ಕೂ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇವಸ್ಥಾನದ ವಗ್ಗೆ, ವಾರುಗಳು, ಭಕ್ತರು ಕುಣಿದು ಸಂಭ್ರಮಿಸಿದರು. ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಮಹಾ ಮಂಗಳಾರತಿಯೊಂದಿಗೆ ಉತ್ಸವ ಸಮಾರೋಪಗೊಂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.