ಸಂತೋಷ್ ಜತೆ 25 ಶಾಸಕರ ಸಭೆ: ಬಿಜೆಪಿಯಲ್ಲಿ ಕುತೂಹಲದ ಬೆಳವಣಿಗೆ!

By Kannadaprabha News  |  First Published Feb 20, 2020, 7:41 AM IST

ಸಂತೋಷ್‌ ಜತೆ 25 ಬಿಜೆಪಿ ಶಾಸಕರ ಪ್ರತ್ಯೇಕ ಸಭೆ| ಶೆಟ್ಟರ್‌ ನಿವಾಸದಲ್ಲಿ ಸಭೆ, ಪಂಚಮಸಾಲಿ ಸ್ವಾಮೀಜಿ ಜತೆ ಸಭೆ ಬಳಿಕ ಮತ್ತೊಂದು ಅಚ್ಚರಿಯ ವಿದ್ಯಮಾನ| ಶಾಸಕರ ಸರಣಿ ಸಭೆ, ಅನಾಮಧೇಯ ಪತ್ರ ಸಂಚಲನದ ನಡುವೆಯೇ ಬಿಜೆಪಿಯಲ್ಲಿ ಕುತೂಹಲದ ಬೆಳವಣಿಗೆ


 

ಬೆಂಗಳೂರು[ಫೆ.20]: ಆಡಳಿತಾರೂಢ ಬಿಜೆಪಿಯಲ್ಲಿ ಶಾಸಕರ ಸರಣಿ ಸಭೆ, ಅನಾಮಧೇಯ ಪತ್ರದಂಥ ಬೆಳವಣಿಗೆಗಳ ಮಧ್ಯೆಯೇ ದೊಡ್ಡ ಸಂಖ್ಯೆಯ ಶಾಸಕರು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಸಂಚಲನ ಮೂಡಿಸಿದೆ.

Latest Videos

ಮಂಗಳವಾರ ತಡರಾತ್ರಿ ಪಕ್ಷದ ಕಚೇರಿಯಲ್ಲಿ ಸುಮಾರು 25ಕ್ಕೂ ಹೆಚ್ಚೂ ಶಾಸಕರು ಪ್ರತ್ಯೇಕವಾಗಿ ಒಬ್ಬೊಬ್ಬರಂತೆ ಸಂತೋಷ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಒಬ್ಬೊಬ್ಬ ಶಾಸಕರು ತಲಾ ನಾಲ್ಕೈದು ನಿಮಿಷಗಳಂತೆ ಭೇಟಿ ಮಾಡಿ ಚರ್ಚೆ ನಡೆಸಿದ್ದು, ಈ ಭೇಟಿ ಕಾರ್ಯಕ್ರಮ ಮಧ್ಯರಾತ್ರಿ 1.30ರವರೆಗೂ ನಡೆದಿದೆ. ನಿರ್ದಿಷ್ಟವಾಗಿ ಸರ್ಕಾರದ ಆಡಳಿತ ವೈಖರಿ ಕುರಿತು ಅಸಮಾಧಾನವನ್ನು ಹೊರಹಾಕಿದ್ದಾರೆಯೇ ಅಥವಾ ಬೇರೆ ವಿಷಯದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆಯೇ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಆದರೆ, ಪ್ರಸಕ್ತ ಬೆಳವಣಿಗೆಗಳ ಬಗ್ಗೆಯೇ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.

ಸಂತೋಷ್‌ ಅವರು ಸದ್ಯಕ್ಕೆ ಪಕ್ಷದ ರಾಷ್ಟ್ರೀಯ ಘಟಕದಲ್ಲಿ ರಾಷ್ಟ್ರೀಯ ಅಧ್ಯಕ್ಷರ ನಂತರದ ಸ್ಥಾನದಲ್ಲಿರುವವರು. ಮೇಲಾಗಿ ಹಿಂದಿನ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರಮಾಪ್ತರು. ಸೋಮವಾರ ರಾತ್ರಿ ದೆಹಲಿಯಿಂದ ನಗರಕ್ಕೆ ಆಗಮಿಸಿದ್ದ ಸಂತೋಷ್‌ ಅವರು ಬುಧವಾರ ವಾಪಸಾದರು. ಆದರೆ, ಬಂದಾಗಿನಿಂದ ತೆರಳುವವರೆಗೆ ಸತತ ಸಭೆ, ಸಮಾಲೋಚನೆಗಳಲ್ಲೇ ನಿರತರಾಗಿದ್ದರು ಎನ್ನಲಾಗಿದೆ.

ಸೋಮವಾರವಷ್ಟೇ ಪಕ್ಷದ ಶಾಸಕರು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರ ನಿವಾಸದಲ್ಲಿ ಹಲವು ಬಿಜೆಪಿ ಶಾಸಕರು ಸಭೆ ಸೇರಿದ್ದರು. ಅದಾದ ಬೆನ್ನಲ್ಲೇ ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಕಾರ್ಯವೈಖರಿ ವಿರೋಧಿಸಿ ಬರೆದಿದ್ದ ಅನಾಮಧೇಯ ಪತ್ರವೊಂದು ಹರಿದಾಡಿತ್ತು. ಸಂಜೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಬಿಜೆಪಿ ಶಾಸಕರು ಹೋಟೆಲ್‌ವೊಂದರಲ್ಲಿ ಸಭೆ ನಡೆಸಿದ್ದರು. ಅದರ ಬಳಿಕ ಸುಮಾರು 25ಕ್ಕೂ ಹೆಚ್ಚು ಶಾಸಕರು ತಡರಾತ್ರಿ ಪಕ್ಷದ ಕಚೇರಿಗೆ ತೆರಳಿ ಸಂತೋಷ್‌ ಅವರನ್ನು ಭೇಟಿ ಮಾಡಿದರು.

ವಿಧಾನಮಂಡಲದ ಅಧಿವೇಶನ ಆರಂಭವಾದ ಸೋಮವಾರದಿಂದಲೇ ಆಡಳಿತಾರೂಢ ಬಿಜೆಪಿಯಲ್ಲಿ ಶಾಸಕರ ಸರಣಿ ಸಭೆ ನಡೆಯುತ್ತಿರುವುದು, ಪಕ್ಷದ ಆಂತರ್ಯದಲ್ಲೂ ಮುಖಂಡರ ನಡುವೆ ಬಿರುಸಿನ ಚರ್ಚೆ ನಡೆದಿರುವುದು ಕುತೂಹಲ ಮೂಡಿಸಿದೆ.

ಏನಾಯ್ತು?

1. ಮಂಗಳವಾರ ತಡರಾತ್ರಿ 25ಕ್ಕೂ ಹೆಚ್ಚು ಬಿಜೆಪಿ ಶಾಸಕರಿಂದ ಬಿ.ಎಲ್‌.ಸಂತೋಷ್‌ ಭೇಟಿ

2. ಪಕ್ಷದ ಕಚೇರಿಯಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜೊತೆ ಮಾತುಕತೆ

3. ಒಬ್ಬೊಬ್ಬರಾಗಿ ಸಂತೋಷ್‌ ಅವರನ್ನು ಭೇಟಿ ಮಾಡಿದ ಪ್ರತ್ಯೇಕವಾಗಿ ಚರ್ಚಿಸಿದ ಶಾಸಕರು

4. ಪ್ರತಿ ಶಾಸಕರಿಂದ ನಾಲ್ಕೈದು ನಿಮಿಷಗಳ ಕಾಲ ಭೇಟಿ. ರಾತ್ರಿ 1.30ರವರೆಗೂ ನಡೆದ ಚರ್ಚೆ

5. ಆಡಳಿತ ವೈಖರಿ ಬಗ್ಗೆ ಅಸಮಾಧಾನವೋ? ಬೇರೆ ವಿಚಾರ ಚರ್ಚೆಯೋ? ತೀವ್ರ ಕುತೂಹಲ

ಫೆಬ್ರವರಿ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!