10 ವರ್ಷಗಳ ಬಳಿಕ ಹೆಚ್ಚು ಲೋಕಸಭಾ ಸದಸ್ಯರನ್ನು ಹೊಂದಿರುವ ಪ್ರತಿಪಕ್ಷಗಳ ಕೂಟ ‘ಇಂಡಿಯಾ’ದ ನೂತನ ಸಂಸದರು ಮೊದಲ ದಿನವೇ ಸಂಸತ್ತಿನ ಆವರಣದಲ್ಲಿ ತಮ್ಮ ಬಲ ಪ್ರದರ್ಶನ ಮಾಡಿದ್ದಾರೆ.
ಪಿಟಿಐ ನವದೆಹಲಿ (ಜೂ.25) : 10 ವರ್ಷಗಳ ಬಳಿಕ ಹೆಚ್ಚು ಲೋಕಸಭಾ ಸದಸ್ಯರನ್ನು ಹೊಂದಿರುವ ಪ್ರತಿಪಕ್ಷಗಳ ಕೂಟ ‘ಇಂಡಿಯಾ’ದ ನೂತನ ಸಂಸದರು ಮೊದಲ ದಿನವೇ ಸಂಸತ್ತಿನ ಆವರಣದಲ್ಲಿ ತಮ್ಮ ಬಲ ಪ್ರದರ್ಶನ ಮಾಡಿದ್ದಾರೆ. 18ನೇ ಲೋಕಸಭೆಯ ಮೊದಲ ಕಲಾಪ ಆರಂಭಕ್ಕೂ ಮುನ್ನ ಸಂಸತ್ ಭವನದಲ್ಲಿ ಈ ಮುನ್ನ ಗಾಂಧೀಜಿ ಪ್ರತಿಮೆ ಇದ್ದ ಸ್ಥಳದಲ್ಲಿ ಜಮಾವಣೆಗೊಂಡ ಸಂಸದರು, ಸಂವಿಧಾನದ ಪ್ರತಿ ಹಿಡಿದು ಸಂವಿಧಾನ ರಕ್ಷಣೆ ಮಾಡುವ ಪ್ರತಿಜ್ಞೆ ಮಾಡಿ ಘೋಷಣೆ ಕೂಗಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun kharge), ಪಕ್ಷದ ನಾಯಕ ರಾಹುಲ್ ಗಾಂಧಿ(Rahul gandhi), ತೃಣಮೂಲ ಕಾಂಗ್ರೆಸ್‌ನ ಸುದೀಪ್ ಬಂಡೋಪಾಧ್ಯಾಯ, ಡಿಎಂಕೆಯ ಟಿ.ಆರ್.ಬಾಲು ಮತ್ತಿತರ ನಾಯಕರು ಸಂಸತ್ತಿನ ಆವರಣದಲ್ಲಿ ಸೋಮವಾರ ಜಮಾವಣೆಗೊಂಡರು. ಇವರಿಗೆ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ(Sonia gandhi) ಕೂಡ ಜತೆಯಾದರು. ಈ ವೇಳೆ, ಸಂವಿಧಾನ ಉಳಿಯಲಿ, ಸಂವಿಧಾನ ರಕ್ಷಿಸುತ್ತೇವೆ, ಪ್ರಜಾಪ್ರಭುತ್ವವನ್ನು ಉಳಿಸುತ್ತೇವೆ ಎಂದು ಘೋಷಣೆಗಳನ್ನು ಕೂಗಿದರು.
ಮೊದಲ ಅಧಿವೇಶನ ದಿನವೇ ಸಂಘರ್ಷ; ಸದನದೊಳಗೆ ಮೊಳಗಿದ ಜೈಶ್ರೀರಾಮ್ ಘೋಷಣೆ!
ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ(PM Modi) ಹಾಗೂ ಗೃಹ ಸಚಿವ ಅಮಿತ್ ಶಾ(Amit shah) ಅವರು ಸಂವಿಧಾನದ ಮೇಲೆ ದಾಳಿ ನಡೆಸಲು ನಾವು ಬಿಡುವುದಿಲ್ಲ. ಇಂತಹ ದಾಳಿಯನ್ನು ನಾವು ಒಪ್ಪುವುದಿಲ್ಲ. ಹೀಗಾಗಿಯೇ ಸಂವಿಧಾನವನ್ನು ಹಿಡಿದು ಪ್ರಮಾಣವಚನ ತೆಗೆದುಕೊಂಡಿದ್ದೇವೆ ಎಂದು ಹೇಳಿದರು. ಪ್ರಧಾನಮಂತ್ರಿಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ನಾವು ಅವಕಾಶ ನೀಡುವುದಿಲ್ಲ ಎಂದರು.