
ಮೋತಿಹಾರಿ (ಬಿಹಾರ) : ‘ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯಂತೆಯೇ ಬಿಹಾರದಲ್ಲಿ 125 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಹಾರದಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಗುರುವಾರವಷ್ಟೇ 125 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ನಿತೀಶ್ ಕುಮಾರ್ ಘೋಷಿಸಿದ್ದರು. ಅದರ ಬೆನ್ನಲ್ಲೇ, ಮೋದಿಯವರೇ ತಮಗೆ ಮಾರ್ಗದರ್ಶನ ನೀಡಿದ್ದು ಎಂದು ಬಹಿರಂಗಪಡಿಸಿದ್ದಾರೆ.
ಪಶ್ಚಿಮ ಚಂಪಾರಣ್ಯ ಜಿಲ್ಲೆಯ ಮೋತಿಹಾರಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮೋದಿ ಜತೆ ವೇದಿಕೆ ಹಂಚಿಕೊಂಡು ಮಾತನಾಡಿದ ನಿತೀಶ್, ‘ಜನರು ಈಗ ವಿದ್ಯುತ್‌ಗಾಗಿ ಹಣ ಪಾವತಿಸುವ ಅಗತ್ಯವಿಲ್ಲ. ಪ್ರಧಾನಿ ಮೋದಿಯವರು ಸಲಹೆ ನೀಡಿದಂತೆಯೇ ನಾವು ಕೆಲಸ ಮಾಡುತ್ತಿದ್ದೇವೆ. ಅವರನ್ನು ನಾವು ತುಂಬಾ ಗೌರವಿಸುತ್ತೇವೆ. ನಾವು ಕರೆದಾಗಲೆಲ್ಲ ಅವರು ಬಿಹಾರಕ್ಕೆ ಬರುತ್ತಾರೆ’ ಎಂದರು.
ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಗೆ ಪರೋಕ್ಷ ಟಾಂಗ್ ನೀಡಿದ ಅವರು, ‘ಹಿಂದಿನ ಸರ್ಕಾರದ ಅವಧಿಯಲ್ಲಿ ಯಾವುದೇ ಯೋಜನೆಗೆ ಅನುದಾನ ನೀಡಿರಲಿಲ್ಲ. ಅಭಿವೃದ್ಧಿ ಹಾಗೂ ಮೂಲಸೌಕರ್ಯ ಯೋಜನೆಗಳು ನಡೆದಿರಲಿಲ್ಲ’ ಎಂದು ಕಿಡಿ ಕಾರಿದರು.
ಕರ್ನಾಟಕದ ಗೃಹಜ್ಯೋತಿ ಮಾದರಿ : ಬಿಹಾರದಲ್ಲೂ ಉಚಿತ ವಿದ್ಯುತ್
ಚುನಾವಣಾ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ರಾಜ್ಯದ ಜನತೆಗೆ ಸಿಎಂ ನಿತೀಶ್ ಕುಮಾರ್ ಮತ್ತೊಂದು ಬಂಪರ್ ಕೊಡುಗೆ ಘೋಷಿಸಿದ್ದಾರೆ. ಕರ್ನಾಟಕದ ಗೃಹಜ್ಯೋತಿ ಮಾದರಿಯಲ್ಲಿ, ಬಿಹಾರದ ಎಲ್ಲಾ ಮನೆಗಳಿಗೆ ಪ್ರತಿ ತಿಂಗಳು 125 ಯುನಿಟ್ ತನಕ ಉಚಿತ ವಿದ್ಯುತ್ ನೀಡುವುದಾಗಿ ಪ್ರಕಟಿಸಿದ್ದಾರೆ.
ಆ.1 ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ. ಇದರಿಂದ ರಾಜ್ಯದ 1.67 ಕೋಟಿ ಕುಟುಂಬಗಳಿಗೆ ಲಾಭವಾಗಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕಟಿಸಿದ್ದಾರೆ. ಇದಲ್ಲದೆ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯಾದ್ಯಂತ ಬಡವರ ಮನೆ ಮೇಲೆ ಅಥವಾ ಸಮೀಪದ ಸ್ಥಳಗಳಲ್ಲಿ ಸೌರಫಲಕ ಅಳವಡಿಸುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಲಿದೆ. ಇದರ ಪೂರ್ತಿ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಘೋಷಿಸಿದ್ದಾರೆ.
ಇತ್ತೀಚೆಗಷ್ಟೇ ನಿತೀಶ್ ಸರ್ಕಾರಿ ಉದ್ಯೋಗಗಳಲ್ಲಿ ಶೇ.35ರಷ್ಟು ಮಹಿಳಾ ಮೀಸಲನ್ನು ಸ್ಥಳೀಯರಿಗೆ ಮಾತ್ರ ಸೀಮಿತ ಮಾಡುವ ಮತ್ತು ಯುವಕರಿಗೆ ಉದ್ಯೋಗ ಕಲ್ಪಿಸಲು ಹೊಸ ಯೋಜನೆ ಘೋಷಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.