ಇನ್ನು 108 ಆ್ಯಂಬುಲೆನ್ಸ್‌ ಸರ್ಕಾರದಿಂದಲೇ ನಿರ್ವಹಣೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

Kannadaprabha News   | Kannada Prabha
Published : Jun 06, 2025, 01:51 AM IST
Ambulance

ಸಾರಾಂಶ

ರಾಜ್ಯದಲ್ಲಿ 108-ಆರೋಗ್ಯ ಕವಚ ಸೇವೆ ಒದಗಿಸುತ್ತಿದ್ದ ಖಾಸಗಿ ಕಂಪೆನಿ ಇಎಂಆರ್‌ಐ ಗ್ರೀನ್‌ ಹೆಲ್ತ್ ಸರ್ವಿಸಸ್‌ ಜತೆಗಿನ ಒಡಂಬಡಿಕೆ ರದ್ದುಗೊಳಿಸಿ ರಾಜ್ಯ ಸರ್ಕಾರದಿಂದಲೇ ಆ್ಯಂಬುಲೆನ್ಸ್‌ ಸೇವೆ ಒದಗಿಸಲು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಬೆಂಗಳೂರು (ಜೂ.06): ರಾಜ್ಯದಲ್ಲಿ 108-ಆರೋಗ್ಯ ಕವಚ ಸೇವೆ ಒದಗಿಸುತ್ತಿದ್ದ ಖಾಸಗಿ ಕಂಪೆನಿ ಇಎಂಆರ್‌ಐ ಗ್ರೀನ್‌ ಹೆಲ್ತ್ ಸರ್ವಿಸಸ್‌ ಜತೆಗಿನ ಒಡಂಬಡಿಕೆ ರದ್ದುಗೊಳಿಸಿ ರಾಜ್ಯ ಸರ್ಕಾರದಿಂದಲೇ ಆ್ಯಂಬುಲೆನ್ಸ್‌ ಸೇವೆ ಒದಗಿಸಲು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 108 ಆ್ಯಂಬುಲೆನ್ಸ್‌ ಸೇವೆ ಒದಗಿಸುವ ಕುರಿತು ಹೊಸದಾಗಿ ಟೆಂಡರ್‌ ಆಹ್ವಾನಿಸಲು ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್‌, ಖಾಸಗಿ ಸಂಸ್ಥೆಗಳು ಹಿಡಿತ ನಿಯಂತ್ರಿಸಲು 108 ಆ್ಯಂಬುಲೆನ್ಸ್‌ ಒಡಂಬಡಿಕೆಯ ಪಾಲುದಾರ ಸಂಸ್ಥೆ ಇಎಂಆರ್‌ಐ ಗ್ರೀನ್‌ ಹೆಲ್ತ್ ಸರ್ವಿಸಸ್‌ ಅವರಿಂದ ಗುತ್ತಿಗೆ ಹಿಂಪಡೆದು ಆರೋಗ್ಯ ಇಲಾಖೆಯಿಂದಲೇ ನಿರ್ವಹಿಸಲು ತೀರ್ಮಾನಿಸಲಾಯಿತು. ಇದಕ್ಕಾಗಿ ರಾಜ್ಯ ಮಟ್ಟದಲ್ಲಿ 112 ಎನ್‌ಜಿ ಇಆರ್‌ಎಸ್‌ಎಸ್‌ ತಂತ್ರಾಂಶ ಬಳಸಿ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಜಿಲ್ಲಾಡಳಿತದ ಮುಖಾಂತರ ಆ್ಯಂಬುಲೆನ್ಸ್‌ಗಳ ನಿರ್ವಹಣೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.

ಗೃಹ ಆರೋಗ್ಯ ಯೋಜನೆಗೆ 185 ಕೋಟಿ ರು: ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ 13 ಅಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಹಾಗೂ ನಿರ್ವಹಣೆಗಾಗಿ ಮನೆ-ಮನೆಗೆ ತೆರಳಲು ಆರೋಗ್ಯ ತಪಾಸಣೆ ನಡೆಸಲು ಜಾರಿ ಮಾಡಿರುವ ಗೃಹ ಆರೋಗ್ಯ ಯೋಜನೆಗಾಗಿ ಬೇಕಾಗಿರುವ ತಪಾಸಣಾ ಉಪಕರಣ ಹಾಗೂ ಔಷಧಿಗಳನ್ನು ಕೆಟಿಟಿಪಿ ಕಾಯ್ದೆಯಡಿ ಖರೀದಿಸಲು 15ನೇ ಹಣಕಾಸು ಆಯೋಗದ ಅನುದಾನದಿಂದ 185 ಕೋಟಿ ರು. ಭರಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.

ಮೊಬೈಲ್‌ ಆಧಾರಿತ ಹಾಜರಾತಿ ವ್ಯವಸ್ಥೆ: ಆರೋಗ್ಯ ಇಲಾಖೆ ನೌಕರರ ಹಾಜರಾತಿ ಗುರುತಿಸಲು ಮೊಬೈಲ್‌ ಆಧಾರಿತ ಹಾಜರಾತಿ ವ್ಯವಸ್ಥೆ ಅನುಷ್ಠಾನಗೊಳಿಸಲು ಸಂಪುಟ ನಿರ್ಧರಿಸಿದೆ. ಇದೇ ವೇಳೆ ಮಕ್ಕಳಲ್ಲಿ ಕಂಡು ಬರುವ ಶ್ರವಣ ದೋಷವನ್ನು ಆರಂಭದಲ್ಲಿಯೇ ಗುರುತಿಸಿ ಕಾಕ್ಲಿಯರ್‌ ಇಂಪ್ಲಾಂಟ್‌ ಅಳವಡಿಸಲು ಶ್ರವಣ ಸಂಜೀವಿನಿ ಯೋಜನೆಯನ್ನು 12 ಕೋಟಿ ರು. ವೆಚ್ಚದಲ್ಲಿ ಅನುಷ್ಠಾನ ಮಾಡಲು ತೀರ್ಮಾನಿಸಲಾಗಿದೆ.

ಜಯದೇವಕ್ಕೆ 181 ಕೋಟಿ ರು. ಉಪಕರಣ: ಹುಬ್ಬಳ್ಳಿಯ ಜಯದೇವ ಹೃದ್ರೋಗ ಕೇಂದ್ರಕ್ಕೆ ಉಪಕರಣ ಖರೀದಿಗೆ 55 ಕೋಟಿ ರು.ಗಳಿಗೆ ಅನುಮೋದನೆ ನೀಡಿದ್ದು, ಬೆಂಗಳೂರು, ಕಲಬುರಗಿ ಹಾಗೂ ಮೈಸೂರು ಹೃದ್ರೋಗ ಸಂಸ್ಥೆಗಳಿಗಾಗಿ ರೋಬೊಟಿಕ್‌ ಸರ್ಜರಿಗಾಗಿ ಸೇರಿದಂತೆ ಇತರೆ ಅತ್ಯಾಧುನಿಕ ಉಪಕರಣ ಖರೀದಿಸಲು 126.17 ಕೋಟಿರು. ಒದಗಿಸಲು ತೀರ್ಮಾನಿಸಲಾಗಿದೆ.

ಶೇ.2 ರಷ್ಟು ವಿಶೇಷ ಮೀಸಲಾತಿ: ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ ಕೆಲವು ಹುದ್ದೆಗಳಿಗೆ ಒಲಂಪಿಕ್ಸ್‌, ಏಷಿಯನ್ ಕ್ರೀಡೆ, ಪ್ಯಾರಾಏಷಿಯನ್‌ ಕ್ರೀಡೆ, ಕಾಮಲ್‌ವೆಲ್ತ್‌, ಪ್ಯಾರಾಲಂಪಿಕ್ಸ್‌ ಕ್ರೀಡೆಗಳಲ್ಲಿ ಪದಕ ವಿಜೇತರಾದ ವ್ಯಕ್ತಿಗಳಿಗೆ ಶೇ.2 ರಷ್ಟು ಮೀಸಲಾತಿ ನೀಡುವ ಕುರಿತು ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳಿಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಈ ಮೊದಲು ಬಡ್ತಿಯಲ್ಲಿ ನೀಡಲಾಗುತ್ತಿದ್ದ ಮೀಸಲಾತಿ ಕೈಬಿಟ್ಟಲು ನೇಮಕಾತಿಯಲ್ಲಿ ಶೇ.2 ರಷ್ಟು ಮೀಸಲಾತಿ ಒದಗಿಸಲು ಪ್ರಸ್ತಾಪಿಸಲಾಗಿದೆ.

ಈ ಬಗ್ಗೆ ಬಾದಿತರಾಗುವ ವ್ಯಕ್ತಿಗಳಿಂದ ಸಲಹೆ, ಆಕ್ಷೇಪ ಸಲ್ಲಿಸಲು 15 ದಿನ ಅವಕಾಶ ನೀಡಬೇಕು. ಯಾವುದೇ ತಿದ್ದುಪಡಿ ಇಲ್ಲದಿದ್ದರೆ ಮತ್ತೊಮ್ಮೆ ಸಂಪುಟದಲ್ಲಿ ಮಂಡಿಸದೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಇನ್ನು ಕೇಂದ್ರ ಸರ್ಕಾರದ ಯೋಜನೆಯಡಿ ಕೋಲಾರ ಜಿಲ್ಲೆ ನರಸಾಪುರ ಹಾಗೂ ತುಮಕೂರು ಜಿಲ್ಲೆಯ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗ ಮಾಡುವ ಮಹಿಳೆಯರಿಗಾಗಿ 193 ಕೋಟಿ ರು. ವೆಚ್ಚದಲ್ಲಿ ವಸತಿ ನಿಲಯ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪೊಲೀಸರಿಗೆ 25.9 ಕೋಟಿ ರು. ವೆಚ್ಚದಲ್ಲಿ ವಾಹನ ಖರೀದಿಸಲು ಅನುಮತಿ ನೀಡಲಾಗಿದೆ.

ಜಾತಿಗಣತಿ ವಿಚಾರ ಚರ್ಚೆ ಮಾಡದೆ ಮುಂದೂಡಿಕೆ: ಜಾತಿವಾರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವರದಿ (ಜಾತಿಗಣತಿ ವರದಿ) ಅನುಷ್ಠಾನ ಬಗ್ಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಯಾವುದೇ ತೀರ್ಮಾನ ಮಾಡದೆ ವಿಷಯವನ್ನು ಮುಂದೂಡಲಾಯಿತು ಎಂದು ಸಚಿವರಾದ ಎಚ್.ಕೆ.ಪಾಟೀಲ್‌ ತಿಳಿಸಿದ್ದಾರೆ. ಗುರುವಾರ ಈ ವಿಷಯದ ಬಗ್ಗೆ ಚರ್ಚಿಸಲು ಅಜೆಂಡಾದಲ್ಲಿ ವಿಷಯ ಪ್ರಸ್ತಾಪಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಯಾವುದೇ ಚರ್ಚೆ ಮಾಡದೆ ಮುಂದೂಡಿದ್ದೇವೆ ಎಂದು ಹೇಳಿದರು.

ಪರಮಾಣು ವಿದ್ಯುತ್‌ ಸ್ಥಾವರ ಕುರಿತ ವಿಷಯ ಮುಂದೂಡಿಕೆ: ಇಂಧನ ಸಚಿವ ಕೆ.ಜೆ. ಜಾರ್ಜ್‌ ಅನುಪಸ್ಥಿತಿ ಹಿನ್ನೆಲೆಯಲ್ಲಿ ಕರ್ನಾಟಕ ಗ್ರೀನ್‌ ಹೈಡ್ರೋಜನ್‌ ನೀತಿ-2024-29 ಹಾಗೂ ರಾಜ್ಯದಲ್ಲಿ ಪರಮಾಣು ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡುವ ಕುರಿತ ವಿಷಯವನ್ನು ಮುಂದೂಡಲಾಗಿದೆ. ಸಭೆಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ತಾತ್ವಿಕ ಅನುಮೋದನೆ ನೀಡುವ ಕುರಿತು ಹಾಗೂ ಎನ್‌ಟಿಪಿಸಿ ಸಂಸ್ಥೆ ಕರ್ನಾಟಕ ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಗುರುತಿಸಿರುವ ಸಂಭಾವ್ಯ ಸ್ಥಳಗಳಲ್ಲಿ ಪ್ರಾಥಮಿಕ ಅಧ್ಯಯನ ನಡೆಸಲು ಅನುಮತಿ ನೀಡುವ ಕುರಿತು ವಿಷಯ ಮಂಡನೆ ಆಗಬೇಕಿತ್ತು. ಆದರೆ ಸಚಿವರ ಗೈರಿನಿಂದಾಗಿ ಮುಂದೂಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ