ಕಾಲ್ತುಳಿತ ದುರಂತಕ್ಕೆ ಪೊಲೀಸರ ಅಮಾನತು ನಾಚಿಗೆಗೇಡು: ಬಿ.ಎಸ್‌.ಯಡಿಯೂರಪ್ಪ

Kannadaprabha News   | Kannada Prabha
Published : Jun 06, 2025, 01:38 AM IST
BSY

ಸಾರಾಂಶ

ಸ್ವತಃ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಮುಂದೆ ನಿಂತು ವಿಜಯೋತ್ಸವ ಆಚರಣೆಗೆ ಮುಂದಾಗಿ ಬಹುದೊಡ್ಡ ದುರಂತಕ್ಕೆ ಕಾರಣವಾಗಿರುವಾಗ ಐವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಬಿ.ಎಸ್‌.ಯಡಿಯೂರಪ್ಪ ಹರಿಹಾಯ್ದಿದ್ದಾರೆ.

ಬೆಂಗಳೂರು (ಜೂ.06): ಸ್ವತಃ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಮುಂದೆ ನಿಂತು ವಿಜಯೋತ್ಸವ ಆಚರಣೆಗೆ ಮುಂದಾಗಿ ಬಹುದೊಡ್ಡ ದುರಂತಕ್ಕೆ ಕಾರಣವಾಗಿರುವಾಗ ಐವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹರಿಹಾಯ್ದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಈ ದುರಂತ ಘಟನೆಯ ಜವಾಬ್ದಾರಿ ಹೊತ್ತು ಈ ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ತಮ್ಮ ನೈತಿಕ ಜವಾಬ್ದಾರಿ ಮರೆತು, ಜನರ ಆಕ್ರೋಶವನ್ನು ತಣ್ಣಗಾಗಿಸಬಹುದೆಂಬ ದುರಾಲೋಚನೆಯಿಂದ ಪೊಲೀಸ್ ಆಯುಕ್ತರೂ ಸೇರಿ ಐವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ ಅಮಾನತು ಮಾಡಿರುವುದು ನಾಚಿಕೆಗೇಡಿನ ಕ್ರಮ. ಸಮಾರಂಭಕ್ಕೂ ಮುನ್ನವೇ ಕಾಲ್ತುಳಿತದಿಂದ ಸಾವು-ನೋವಾಗಿರುವ ಸುದ್ದಿ ತಲುಪಿದರೂ ಭಂಡತನದಿಂದ ಸನ್ಮಾನ ಕಾರ್ಯಕ್ರಮ ಮುಗಿಸಿ, ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಕಾರ್ಯಕ್ರಮ ಮುಂದುವರೆಸುವ ಮೂಲಕ ಕಾಂಗ್ರೆಸ್ ಸರ್ಕಾರ ಕರುನಾಡಿನಲ್ಲಿ ಕರಾಳ ಇತಿಹಾಸ ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ. ಜನರ ಆಕ್ರೋಶವನ್ನು ತಣಿಸಲು ಹಾಗೂ ಉಚ್ಚ ನ್ಯಾಯಾಲಯದ ನ್ಯಾಯದಂಡದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಕುರ್ಚಿಗೆ ಅಂಟಿ ಕೂರುವ ಸ್ವಾರ್ಥದ ಕ್ರಮ ಎಂದು ಹೇಳಿಕೆ ನೀಡಿದ್ದಾರೆ.

ರಾಜಕೀಯ ಲಾಭಕ್ಕೆ ಅಮಾಯಕರ ಜೀವ ಬಲಿ: ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೆ ಕೇವಲ ತಮ್ಮ ರಾಜಕೀಯ ಲಾಭಕ್ಕೆ ಬಿದ್ದು ಇಂತಹ ಕಾರ್ಯಕ್ರಮಗಳನ್ನು ತರಾತುರಿಯಲ್ಲಿ ಆಯೋಜಿಸಿ ಸರ್ಕಾರ ಅಮಾಯಕರ ಪ್ರಾಣದ ಜತೆ ಚೆಲ್ಲಾಟ ಆಡಿದೆ. ಈ‌‌ ಸಾವುಗಳಿಗೆ ನೇರವಾಗಿ ಸರ್ಕಾರವೇ ಹೊಣೆ ಎಂದು ಬಿಜೆಪಿ ಅಧ್ಯಕ್ಷ ಅಭಿನಂದನ್ ಆರೋಪಿಸಿದರು. ಪತ್ರಿಕಾ ಹೇಳಿಕೆ ನೀಡಿರುವ ಅವರು, ವ್ಯವಸ್ಥಿತವಾದ ಸನ್ಮಾನ ಕಾರ್ಯಕ್ರಮ ಮಾಡುವ ಯೋಗ್ಯತೆ ಇಲ್ಲ ಎಂದ ಮೇಲೆ ಅಮಾಯಕರ ಜೀವದ ಜೊತೆ ಆಟ ಆಡಬಾರದು. ತಮ್ಮ ಮಕ್ಕಳು, ಮೊಮ್ಮಕ್ಕಳ ಬಗ್ಗೆ ಇರುವ ಕಾಳಜಿ ಸಾರ್ವಜನಿಕರ ಮೇಲೂ ಇರಬೇಕಿತ್ತು. ಹತ್ತಾರು ಕೋಟಿ ಜನರು ಸೇರಿದ್ದ ಕುಂಭಮೇಳವನ್ನು ಯೋಗೀಜಿ ಸರ್ಕಾರ ಸಮರ್ಥವಾಗಿ ನಿರ್ವಹಿಸಿತ್ತು.

ಟಿ-ಟ್ವೆಂಟಿ ವಿಶ್ವಕಪ್ ಗೆದ್ದಾಗ ಹತ್ತಾರು ಲಕ್ಷ ಜನರು ಸೇರಿದ್ದ ಸಂಭ್ರಮಾಚರಣೆಯನ್ನು ಮಹಾರಾಷ್ಟ್ರ ಸರ್ಕಾರವು ಸಮರ್ಥವಾಗಿ ಆಯೋಜಿಸಿತ್ತು. ಆದರೆ ಒಂದೆರಡು ಲಕ್ಷ ಜನ ಸೇರಿದ್ದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಸಮರ್ಥ ಆಡಳಿತ ಅಮಾಯಕರನ್ನು ಬಲಿ‌ ಪಡೆದಿದೆ. ಜನರು ಒಂದೆರಡು ದಿನಕ್ಕೆ ಈ ಸಾವು ನೋವು ಮರೆತು ಬಿಡುತ್ತಾರೆ. ಆದರೆ ಸತ್ತವರ ಮನೆಯವರಿಗೆ ಜೀವನಪೂರ್ತಿ ಶೋಕಾಚರಣೆ ಇರುತ್ತದೆ. ಕಪ್ ಗೆದ್ದು ತಪ್ಪು ಮಾಡಿದ್ವ ಅಂತ ಆಟಗಾರರಿಗೂ ಅನಿಸುವಂತೆ ಮಾಡಿತು ಸರ್ಕಾರ. ಮಂತ್ರಿಮಕ್ಕಳ ಮತ್ತು ಕುಟುಂಬಗಳ ಪೋಟೋ ಶೂಟ್ ತೆವಲಿಗೆ ಆರ್‌ಸಿಬಿ ಅಭಿಮಾನಿಗಳ ಜೀವಗಳನ್ನು ಬಲಿ ಕೊಟ್ಟoತಾಗಿದೆ. ಈ ಕೂಡಲೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಅಭಿನಂದನ್ ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: 'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ' - ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ