
ಬೆಂಗಳೂರು(ಮಾ.12): ಪ್ರಸಕ್ತ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಮೂವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಹತ್ತು ಮಂದಿ ಮಾಜಿ ಸಚಿವರ ಹೆಸರುಗಳ ಪ್ರಸ್ತಾಪವಾಗಿದ್ದು, ಕೊನೆಯ ಕ್ಷಣದಲ್ಲಿ ಟಿಕೆಟ್ ಯಾರ ಯಾರ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅವರ ಹೆಸರುಗಳು ಪರಿಶೀಲನೆಯಲ್ಲಿವೆ. ಅದೇ ರೀತಿ ಮಾಜಿ ಸಚಿವರಾದ ವಿ.ಸೋಮಣ್ಣ, ಡಾ.ಸುಧಾಕರ್, ಬಿ.ಶ್ರೀರಾಮುಲು, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಟಿ.ರವಿ, ಬಿ.ಸಿ.ಪಾಟೀಲ್, ಜೆ.ಸಿ.ಮಾಧುಸ್ವಾಮಿ, ಎಂ.ಪಿ.ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಅವರ ಹೆಸರೂ ಕೇಳಿಬಂದಿವೆ.
ಈ ಎಲ್ಲರ ಪೈಕಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹಾಲಿ ಸಂಸದರು. ಇನ್ನುಳಿದ ಎಲ್ಲರ ಹೆಸರುಗಳೂ ಲೋಕಸಭಾ ಚುನಾವಣೆಗೆ ಇದೇ ಮೊದಲ ಬಾರಿಗೆ ಪ್ರಸ್ತಾಪವಾಗಿವೆ. ಎಲ್ಲರಿಗೂ ರಾಜ್ಯ ರಾಜಕಾರಣ ತೊರೆದು ರಾಷ್ಟ್ರ ರಾಜಕಾರಣಕ್ಕೆ ಹೋಗಲು ಆಸಕ್ತಿ ಇಲ್ಲದಿದ್ದರೂ ಬಹುತೇಕರು ಸ್ವಯಂ ಇಚ್ಛೆಯಿಂದ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ಇನ್ನು ಕೆಲವರನ್ನು ಪಕ್ಷದ ನಾಯಕರು ಕಣಕ್ಕಿಳಿಸಲು ಬಯಸಿದ್ದಾರೆ ಎನ್ನಲಾಗಿದೆ.
ಸುಮಲತಾ ಪರ ನಾಲ್ವರು ಸ್ಟಾರ್ ನಟರ ಪ್ರಚಾರ: ನಟ, ಪುತ್ರ ಅಭಿಷೇಕ್ ಅಂಬರೀಷ್
ಮಾಜಿ ಮುಖ್ಯಮಂತ್ರಿಗಳ ಪೈಕಿ ಸದಾನಂದಗೌಡ ಅವರು ಈಗಾಗಲೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಸಂಸದರಾಗಿದ್ದರು. ಮೂರನೇ ಬಾರಿ ಅವರಿಗೆ ಟಿಕೆಟ್ ಸಿಗುವುದೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದ ಗೌಡರು ನಂತರದ ದಿನಗಳಲ್ಲಿ ತಮ್ಮ ನಿಲುವು ಬದಲಿಸಿ ಸ್ಪರ್ಧಿಸಲು ಆಸಕ್ತಿ ತೋರಿದ್ದರು. ಇನ್ನು ಜಗದೀಶ್ ಶೆಟ್ಟರ್ ಅವರ ಹೆಸರು ಬೆಳಗಾವಿ, ಹಾವೇರಿ ಹಾಗೂ ಧಾರವಾಡ ಕ್ಷೇತ್ರಗಳಿಂದ ಕೇಳಿಬರುತ್ತಿದೆ. ಬಸವರಾಜ ಬೊಮ್ಮಾಯಿ ಅವರ ಹೆಸರು ಹಾವೇರಿ ಕ್ಷೇತ್ರದಿಂದ ಪ್ರಸ್ತಾಪವಾಗಿದೆ.
ಸಚಿವರ ಪೈಕಿ ತುಮಕೂರಿನಿಂದ ವಿ.ಸೋಮಣ್ಣ, ಚಿಕ್ಕಬಳ್ಳಾಪುರದಿಂದ ಡಾ.ಸುಧಾಕರ್, ಬಳ್ಳಾರಿಯಿಂದ ಬಿ.ಶ್ರೀರಾಮುಲು, ವಿಜಯಪುರದಿಂದ ಗೋವಿಂದ ಕಾರಜೋಳ, ಉತ್ತರ ಕನ್ನಡದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿ-ಚಿಕ್ಕಮಗಳೂರು ಹಾಗೂ ಬೆಂಗಳೂರು ಉತ್ತರದಿಂದ ಸಿ.ಟಿ.ರವಿ, ಹಾವೇರಿಯಿಂದ ಬಿ.ಸಿ.ಪಾಟೀಲ್, ತುಮಕೂರಿನಿಂದ ಜೆ.ಸಿ.ಮಾಧುಸ್ವಾಮಿ, ದಾವಣಗೆರೆಯಿಂದ ಎಂ.ಪಿ.ರೇಣುಕಾಚಾರ್ಯ, ಬಾಗಲಕೋಟೆಯಿಂದ ಮುರುಗೇಶ್ ನಿರಾಣಿ ಅವರ ಹೆಸರುಗಳು ಚರ್ಚೆಯಲ್ಲಿವೆ ಎಂದು ಮೂಲಗಳು ತಿಳಿಸಿವೆ.
ಇನ್ನೆರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡ ಬಳಿಕವೇ ಈ ಎಲ್ಲರ ಪೈಕಿ ಯಾರಿಗೆಲ್ಲ ಟಿಕೆಟ್ ಸಿಗಲಿದೆ ಎಂಬುದು ಸ್ಪಷ್ಟವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.