ಸೆಮೀಸ್‌ಗೆ ಲಗ್ಗೆಯಿಟ್ಟ ವಿನೇಶ್ ಫೋಗಟ್: ಪದಕಕ್ಕೆ ಇನ್ನೊಂದೇ ಹೆಜ್ಜೆ ಬಾಕಿ

By Naveen Kodase  |  First Published Aug 6, 2024, 4:29 PM IST

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ವಿನೇಶ್ ಫೋಗಟ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದು, ಚೊಚ್ಚಲ ಒಲಿಂಪಿಕ್ಸ್‌ ಪದಕಕ್ಕೆ ಇನ್ನಷ್ಟು ಹತ್ತಿರವಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಪ್ಯಾರಿಸ್: ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್‌ ಮಹಿಳೆಯರ 50 ಕೆ.ಜಿ ಪ್ರಿಸ್ಟೈಲ್ ಕುಸ್ತಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉಕ್ರೇನ್‌ನ ಒಕ್ಸಾನಾ ಲಿವೀಚ್‌ ಎದುರು ಅಮೋಘ ಪ್ರದರ್ಶನ ತೋರಿದ ವಿನೇಶ್ 7-5 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ವಿನೇಶ್ ಫೋಗಟ್ ಇನ್ನೊಂದು ಗೆಲುವು ಭಾರತಕ್ಕೆ ಕನಿಷ್ಠ ಬೆಳ್ಳಿ ಹಾಗೂ ಗರಿಷ್ಠ ಚಿನ್ನದ ಪದಕ ತಮ್ಮದಾಗಿಸಿಕೊಳ್ಳಲಿದ್ದಾರೆ.

ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ.1 ಕುಸ್ತಿಪಟುವಾಗಿದ್ದ ಜಪಾನಿನ ಯ್ಯೂ ಸುಸುಕಿ ವಿರುದ್ದ 3-2 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದ್ದ ಫೋಗಟ್, ಕ್ವಾರ್ಟರ್‌ ಫೈನಲ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದರು. ಉಕ್ರೇನ್‌ನ ಮೂರು ಬಾರಿ ಕಾಮನ್‌ವೆಲ್ತ್ ಗೇಮ್ಸ್‌ ಚಿನ್ನದ ಪದಕ ವಿಜೇತೆ ಒಕ್ಸಾನಾ ಲಿವೀಚ್‌ ಎದುರು 7-5 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮೀಸ್‌ಗೆ ಲಗ್ಗೆಯಿಟ್ಟರು. ಇದೀಗ ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸ್‌ನೈಲೆಸ್‌ ಗುಜ್ಮನ್‌ ಅವರನ್ನು ಎದುರಿಸಲಿದ್ದಾರೆ. ಯುಸ್‌ನೈಲೆಸ್‌ ಗುಜ್ಮನ್‌ 2023ರ ಪಾನ್ ಅಮೆರಿಕನ್ ಗೇಮ್ಸ್ ಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು.

Tap to resize

Latest Videos

ವಿನೇಶ್ ಫೋಗಟ್ 2016ರ ರಿಯೋ ಒಲಿಂಪಿಕ್ಸ್‌ ಹಾಗೂ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ವಿನೇಶ್ ಫೋಗಟ್ ಈ ವರ್ಷಾರಂಭದಲ್ಲಿ ನಡೆದ ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್‌ನಲ್ಲಿ 50 ಕೆ.ಜಿ. ವಿಭಾಗದಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

click me!