ಕುಸ್ತಿ ಫೈನಲ್‌ ಸ್ಪರ್ಧೆಯಿಂದ ಹಿಂದೆ ಸರಿದಿದ್ರೆ ವಿನೇಶ್ ಫೋಗಟ್‌ಗೆ ಸಿಗುತ್ತಿತ್ತಾ ಬೆಳ್ಳಿ ಪದಕ?

By Suvarna NewsFirst Published Aug 8, 2024, 1:15 PM IST
Highlights

ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಅನರ್ಹವಾಗಿರುವ ವಿನೇಶ್ ಫೋಗಟ್, ಫೈನಲ್ ಪಂದ್ಯವನ್ನಾಡದೇ ಹೊರಗುಳಿದಿದ್ದರೇ ಬೆಳ್ಳಿ ಪದಕ ಸಿಗುತ್ತಿತ್ತಾ? ರೂಲ್ಸ್ ಏನು ಹೇಳುತ್ತೇ? ಇಲ್ಲಿದೆ ಡೀಟೈಲ್ಸ್

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್, ಕೇವಲ 100 ಗ್ರಾಮ್ ತೂಕ ಹೆಚ್ಚಳದಿಂದಾಗಿ ಅನರ್ಹಗೊಂಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗಿರುವಾಗಲೇ ಫೈನಲ್ ಪ್ರವೇಶಿಸಿದ್ದ ಫೋಗಟ್ ಗಾಯದ ನೆಪವೊಡ್ಡಿ ಫೈನಲ್‌ನಿಂದ ಹಿಂದೆ ಸರಿದಿದ್ಡರೇ ಕನಿಷ್ಠ ಬೆಳ್ಳಿ ಪದಕವಾದರೂ ಸಿಗುತ್ತಿತ್ತೇನೋ ಎಂದು ನಿಮಗೂ ಅನ್ನಿಸಿರಬಹುದು ಅಲ್ಲವೇ?

ಹೌದು, ಅಧಿಕಾರಿಗಳು ತೂಕ ಪರೀಕ್ಷಿಸುವುದಕ್ಕೂ ಮುನ್ನ ವಿನೇಶ್‌ರ ಕೋಚ್‌, ಫಿಸಿಯೋಗಳೇ ತೂಕ ನೋಡಿ, ಆಕೆ ಗಾಯಗೊಂಡಿದ್ದಾರೆ ಎಂಬ ಕಾರಣ ನೀಡಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರೆ ಕನಿಷ್ಠ ಬೆಳ್ಳಿ ಪದಕವಾದರೂ ಸಿಗುತ್ತಿತ್ತು ಎಂದು ಸಾಮಾಜಿಕ ತಾಣಗಳಲ್ಲಿ ಅನೇಕರು ವಾದಿಸಿದ್ದಾರೆ. ಆದರೆ ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು) ನಿಯಮದಲ್ಲಿ ಇದಕ್ಕೆ ಅವಕಾಶವಿಲ್ಲ. 

Latest Videos

ಯಾವುದೇ ಕುಸ್ತಿಪಟು ಗಾಯಗೊಂಡಿದ್ದಾಗಿ ತಿಳಿಸಿದರೆ, ಅದನ್ನು ಕೂಟದ ವೈದ್ಯಕೀಯ ಅಧಿಕಾರಿಗಳು ದೃಢಪಡಿಸಬೇಕು. ಅಲ್ಲದೇ, ತೂಕ ಪರೀಕ್ಷಿಸುವ ಪ್ರಕ್ರಿಯೆಯಲ್ಲಿ ಕುಸ್ತಿಪಟು ಪಾಲ್ಗೊಳ್ಳಲೇಬೇಕು. ಒಂದು ವೇಳೆ ಆಡುವಾಗ ಗಾಯಗೊಂಡರೆ ಮಾತ್ರ, ತೂಕ ಪರೀಕ್ಷೆ ಇರುವುದಿಲ್ಲ. ಹೀಗಾಗಿ, ವಿನೇಶ್‌ ಗಾಯಗೊಂಡಿದ್ದಾಗಿ ನೆಪ ಹೇಳಿದ್ದರೂ, ತೂಕ ಪರೀಕ್ಷೆಗೆ ಹಾಜರಾಗಲೇಬೇಕಿತ್ತು.

ರೂಲ್ಸ್ ಬದಲಿಸಿ, ವಿನೇಶ್ ಫೋಗಟ್‌ಗೆ ಬೆಳ್ಳಿ ಪದಕ ನೀಡಿ: ಅಮೆರಿಕದ ಮಾಜಿ ಒಲಿಂಪಿಕ್ ಚಾಂಪಿಯನ್ ಒತ್ತಾಯ

ತೂಕ ಹಾಕುವ ಪ್ರಕ್ರಿಯೆ ಹೇಗೆ?

ಕುಸ್ತಿಯ ಸ್ಪರ್ಧೆ ಆರಂಭಗೊಳ್ಳುವ ದಿನದ ಬೆಳಗ್ಗೆ ಕುಸ್ತಿಪಟುಗಳ ದೇಹದ ತೂಕವನ್ನು ಪರಿಶೀಲಿಸಲಾಗುತ್ತದೆ. ಅವರು ಯಾವ ವಿಭಾಗದಲ್ಲಿ ಸ್ಪರ್ಧೆ ಮಾಡುತ್ತಾರೋ, ಅವರ ದೇಹದ ತೂಕ ಸರಿಯಾಗಿ ಅಷ್ಟೇ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ವಿನೇಶ್‌ ಮೊದಲ ದಿನ ತೂಕ ಹಾಕಿದಾಗ 49.90 ಕೆ.ಜಿ ಇದ್ದರು. ತೂಕ ಹಾಕುವ ಪ್ರಕ್ರಿಯೆ ಮುಗಿದಾಗಿನಿಂದ, ಮೊದಲ ಪಂದ್ಯ ಆರಂಭಗೊಳ್ಳುವುದರ ನಡುವೆ ಕೆಲ ಗಂಟೆಗಳ ಸಮಯ ಸಿಗಲಿದೆ.

ಆ ವೇಳೆ ಆಹಾರ, ನೀರು ಸೇವಿಸಿ ಕುಸ್ತಿಪಟುಗಳು ತೂಕ ಹೆಚ್ಚಿಸಿಕೊಳ್ಳುತ್ತಾರೆ. ಇಲ್ಲವಾದರೆ, ನಿಶಕ್ತಿಯಿಂದಾಗಿ ಮ್ಯಾಟ್‌ನಲ್ಲೇ ಕುಸಿದು ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ, ವಿನೇಶ್‌ ಮೊದಲ ಸುತ್ತಿನಲ್ಲಿ ಆಡಲು ಮ್ಯಾಟ್‌ಗೆ ಇಳಿಯುವಾಗ ಅವರ ದೇಹದ ತೂಕ ಸಹಜವಾಗಿಯೇ ಹೆಚ್ಚಾಗಿತ್ತು. ಸೆಮಿಫೈನಲ್‌ನಲ್ಲಿ ಗೆದ್ದ ಬಳಿಕ ತೂಕ ಹಾಕಿದಾಗ, ವಿನೇಶ್‌ 52.7 ಕೆ.ಜಿ. ಇದ್ದರು.

ವಿನೇಶ್ ಫೋಗಟ್‌ಗಿದೆ ಒಲಿಂಪಿಕ್ ಪದಕ ಗೆಲ್ಲಲು ಲಾಸ್ಟ್‌ ಚಾನ್ಸ್‌..! ಆದ್ರೆ ಪವಾಡ ನಡಿಬೇಕು..!

ಪದಕ ಸುತ್ತುಗಳಿಗೆ ಕಾಲಿಟ್ಟ ಕುಸ್ತಿಪಟುಗಳ ದೇಹದ ತೂಕವನ್ನು ಮತ್ತೆ 2ನೇ ದಿನ ಬೆಳಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಅಷ್ಟರಲ್ಲಿ ಮತ್ತೆ ನಿಗದಿತ ತೂಕಕ್ಕೆ ದೇಹ ಇಳಿದಿರಬೇಕು. ಬುಧವಾರ ಬೆಳಗ್ಗೆ ತೂಕ ಹಾಕಿದಾಗ ವಿನೇಶ್‌ 50.1 ಕೆ.ಜಿ. ಇದ್ದರು. ಒಂದೇ ರಾತ್ರಿಯಲ್ಲಿ 2.6 ಕೆ.ಜಿ. ತೂಕ ಇಳಿಸಿದರೂ, ಕೊನೆಯ 100 ಗ್ರಾಂ ಇಳಿಸಲು ಸಾಧ್ಯವೇ ಆಗದ ಕಾರಣ ವಿನೇಶ್‌ ಅನರ್ಹಗೊಳ್ಳಬೇಕಾಯಿತು.

ವಿನೇಶ್‌ಗೆ ಎದುರಾದ ಈ ಸನ್ನಿವೇಶವನ್ನು ವಿಪರ್ಯಾಸ ಎನ್ನಬೇಕೋ, ಅವರ ದೌರ್ಭಾಗ್ಯ ಎನ್ನಬೇಕೋ, ಅಜಾಗರೂಕತೆಯಿಂದ ಆಗಿದ್ದು ಎನ್ನಬೇಕೋ ಗೊತ್ತಿಲ್ಲ. ಆದರೆ ಈ 100 ಗ್ರಾಂನಿಂದಾಗಿ 140 ಕೋಟಿ ಭಾರತೀಯರಿಗೆ ಜೀರ್ಣಿಸಿಕೊಳ್ಳಲಾಗದಷ್ಟು ದುಃಖವಾಗಿದೆ. ಒಲಿಂಪಿಕ್ಸ್‌ ಪೋಡಿಯಂ ಮೇಲೆ ನಿಂತು ಪದಕಕ್ಕೆ ಮುತ್ತಿಕ್ಕಲು ಹಲವು ವರ್ಷಗಳಿಂದ ತಪ್ಪಸ್ಸು ಮಾಡಿರುವ ವಿನೇಶ್‌ ಫೋಗಟ್‌ರ ಮನಸ್ಥಿತಿ ಈಗ ಹೇಗಿರಬಹುದು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಅವರ ಕನಸುಗಳೆಲ್ಲಾ ಈಗ ನುಚ್ಚು ನೂರಾಗಿದೆ.
 

click me!