* ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟ ಜೋಕೋ
* ಕ್ಯಾಲೆಂಡರ್ ಸ್ಲಾಂ ಗೆದ್ದು ದಾಖಲೆ ನಿರ್ಮಿಸಲು ಮತ್ತಷ್ಟು ಹತ್ತಿರವಾದ ಸರ್ಬಿಯಾದ ಟೆನಿಸಿಗ
* ಮೊದಲ ಬಾರಿಗೆ ಯುಎಸ್ ಓಪನ್ ಕ್ವಾರ್ಟರ್‌ನಲ್ಲಿ ಅಮೆರಿಕ ಆಟಗಾರರು ಇಲ್ಲ!
ನ್ಯೂಯಾರ್ಕ್(ಸೆ.08): ಈ ವರ್ಷ ನಾಲ್ಕೂ ಗ್ರ್ಯಾನ್ ಸ್ಲಾಂ ಗೆದ್ದು ಕ್ಯಾಲೆಂಡರ್ ಸ್ಲಾಂ ದಾಖಲೆ ಜೊತೆ ಸಾರ್ವಕಾಲಿಕ ಅಧಿಕ ಗ್ರ್ಯಾನ್ ಸ್ಲಾಂ ವಿಜೇತ ಎನ್ನುವ ಪಟ್ಟಕ್ಕೇರುವ ಉತ್ಸಾಹದಲ್ಲಿರುವ ವಿಶ್ವ ನಂ.1 ಸರ್ಬಿಯಾದ ನೋವಾಕ್ ಜೋಕೋವಿಚ್, ಯುಎಸ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಪ್ರಶಸ್ತಿ ಎತ್ತಿಹಿಡಿಯಲು ಜೋಕೋವಿಚ್‌ಗೆ ಕೇವಲ 3 ಗೆಲುವು ಬೇಕಿದೆ.
4ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ 20 ವರ್ಷದ ಜೆನ್ಸನ್ ಬ್ರೂಕ್ಸ್‌ಬೈ ವಿರುದ್ಧ 1-6, 6-3, 6-2, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಪಂದ್ಯದ ಮೊದಲ ಒಂದೂವರೆ ಸೆಟ್‌ನಲ್ಲಿ ಅರ್ಹತಾ ಸುತ್ತಿನಲ್ಲಿ ಗೆದ್ದು ಪ್ರಧಾನ ಸುತ್ತಿಗೇರಿದ, ವಿಶ್ವ ಶ್ರೇಯಾಂಕದಲ್ಲಿ 99ನೇ ಸ್ಥಾನದಲ್ಲಿರುವ ಜೆನ್ಸನ್ ಅಚ್ಚರಿಯ ಫಲಿತಾಂಶ ನೀಡುವ ನಿರೀಕ್ಷೆ ಮೂಡಿಸಿದರು. ಆದರೆ ಜೋಕೋವಿಚ್ ಅಂತಹ ಯಾವುದೇ ಪ್ರಸಂಗಕ್ಕೆ ಅವಕಾಶ ನೀಡದೆ ತಾವೇಕೆ ವಿಶ್ವ ನಂ.1 ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.
The wolf keeps on running 🐺 is three wins from the Grand Slam and 21 major titles. pic.twitter.com/VtdytEKUFi
— #AusOpen (@AustralianOpen)
undefined
ಯುಎಸ್ ಓಪನ್ ಟೆನಿಸ್: ಕಾರ್ಲೋಸ್ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಮೈಲಿಗಲ್ಲು
ಈ ವರ್ಷ ಗ್ರ್ಯಾನ್ ಸ್ಲಾಂಗಳಲ್ಲಿ 25-0 ಗೆಲುವು-ಸೋಲಿನ ದಾಖಲೆ ಹೊಂದಿರುವ ಜೋಕೋವಿಚ್, ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವ ನಂ.6, ಇಟಲಿಯ ಮ್ಯಾಟಿಯೊ ಬೆರಟ್ಟಿನಿ ಎದುರಾಗಲಿದ್ದಾರೆ. ಈ ವರ್ಷ ವಿಂಬಲ್ಡನ್ ಫೈನಲ್‌ನಲ್ಲಿ ಜೋಕೋವಿಚ್, ಬೆರಟ್ಟಿನಿ ವಿರುದ್ಧ ಜಯಿಸಿ ಚಾಂಪಿಯನ್ ಆಗಿದ್ದರು.
ಮೊದಲ ಬಾರಿಗೆ ಕ್ವಾರ್ಟರ್‌ನಲ್ಲಿ ಅಮೆರಿಕ ಆಟಗಾರರು ಇಲ್ಲ!
1888ರಲ್ಲೇ ಆರಂಭಗೊಂಡಿದ್ದ ಯುಎಸ್ ಓಪನ್ ಗ್ರ್ಯಾನ್ ಸ್ಲಾಂನಲ್ಲಿ ಇದೇ ಮೊದಲ ಬಾರಿಗೆ ಪುರುಷರ ಹಾಗೂ ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕ ಆಟಗಾರರಿಲ್ಲ. ರಿಚರ್ಡ್ ಸೀರ್ಸ್, ಮಿಲಿಯಮ್ ಲಾರ್ನೆಡ್, ಬಿಲ್ ಟಿಲ್ಡೆನ್, ಜಿಮ್ಮಿ ಕಾನರ್ಸ್, ಪೀಟ್ ಸ್ಯಾಂಪ್ರಸ್, ಮೊಲ್ಲಾ ಮಲ್ಲೊರಿ, ಕ್ರಿಸ್ ಎವರ್, ಸೆರೆನಾ ವಿಲಿಯಮ್ಸ್‌ರಂತಹ ದಿಗ್ಗಜ ಅಮೆರಿಕನ್ನರು ಹಲವು ಬಾರಿ ಸಿಂಗಲ್ಸ್ ಚಾಂಪಿಯನ್ ಆಗಿದ್ದಾರೆ. ಈ ವರ್ಷ ಅಮೆರಿಕದ ಒಬ್ಬರೂ ಅಂತಿಮ 8ರ ಸುತ್ತಿಗೆ ಪ್ರವೇಶಿಸದೆ ಇರುವುದು ಆ ದೇಶದ ಟೆನಿಸ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ.
ಬೋಪಣ್ಣ ಜೋಡಿಗೆ ಸೋಲು
ಭಾರತದ ರೋಹನ್ ಬೋಪಣ್ಣ ಹಾಗೂ ಕ್ರೊವೇಷಿಯಾದ ಇವಾನ್ ಡಾಡಿಗ್ ಜೋಡಿ ಪುರುಷರ ಡಬಲ್ಸ್ 3ನೇ ಸುತ್ತಿನಲ್ಲಿ ಅಮೆರಿದ ರಾಜೀವ್ ರಾಮ್ ಹಾಗೂ ಬ್ರಿಟನ್‌ನ ಜೋ ಸಾಲಿಸ್ಬರಿ ಜೋಡಿ ವಿರುದ್ಧ 7-6, 4-6, 6-7 ಸೆಟ್‌ಗಳಲ್ಲಿ ವೀರೋಚಿತ ಸೋಲು ಕಂಡು ಹೊರಬಿತ್ತು.