Uber Cup 2022 : ಭಾರತ ಮಹಿಳಾ ಬ್ಯಾಡ್ಮಿಂಟನ್ ತಂಡ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

By Kannadaprabha NewsFirst Published May 11, 2022, 9:36 AM IST
Highlights

* ಉಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯ ಆಟಗಾರ್ತಿಯರ ಭರ್ಜರಿ ಪ್ರದರ್ಶನ

* ಅಮೆರಿಕಾ ವಿರುದ್ಧ ನಡೆದ ‘ಡಿ’ ಗುಂಪಿನ 2ನೇ ಪಂದ್ಯದಲ್ಲಿ ಮಹಿಳಾ ತಂಡ 4-1 ಅಂತರದಲ್ಲಿ ಗೆಲುವು

* ಮಹಿಳಾ ತಂಡ 3ನೇ ಹಾಗೂ ಕೊನೆ ಪಂದ್ಯದಲ್ಲಿ ಬುಧವಾರ ಕೊರಿಯಾ ವಿರುದ್ಧ ಆಡಲಿದೆ

ಬ್ಯಾಂಕಾಕ್(ಮೇ.11)‌: ಥಾಮಸ್‌ ಕಪ್‌ ಬಳಿಕ ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲೂ (Uber Cup Badminton Tournament) ಭಾರತ ಸತತ 2ನೇ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಅಮೆರಿಕಾ ವಿರುದ್ಧ ನಡೆದ ‘ಡಿ’ ಗುಂಪಿನ 2ನೇ ಪಂದ್ಯದಲ್ಲಿ ಮಹಿಳಾ ತಂಡ 4-1 ಅಂತರದಲ್ಲಿ ಗೆಲುವು ಸಾಧಿಸಿತು. ಮೊದಲ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು ಗೆಲ್ಲುವ ಮೂಲಕ ಭಾರತಕ್ಕೆ ಮುನ್ನಡೆ ಒದಗಿಸಿದರು. ಬಳಿಕ ತನಿಶಾ ಕ್ರಾಸ್ಟೋ-ತ್ರೀಸಾ, ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್‌ ಹಾಗೂ ಅಸ್ಮಿತಾ ಚಾಲಿಹಾ ಜಯಭೇರಿ ಬಾರಿಸಿದರು. 

ಆದರೆ 2ನೇ ಡಬಲ್ಸ್‌ನಲ್ಲಿ ಸಿಮ್ರಾನ್‌ ಸಿಂಗ್‌-ರಿತಿಕಾ ಜೋಡಿ ಸೋಲನುಭವಿಸಿತು. 2014, 2016ರಲ್ಲಿ ಕಂಚು ಗೆದ್ದಿರುವ ಮಹಿಳಾ ತಂಡ 3ನೇ ಹಾಗೂ ಕೊನೆ ಪಂದ್ಯದಲ್ಲಿ ಬುಧವಾರ ಕೊರಿಯಾ ವಿರುದ್ಧ ಆಡಲಿದೆ. ಥಾಮಸ್‌ ಕಪ್‌ನಲ್ಲಿ ಪುರುಷರ ತಂಡ ಕೊನೆ ಪಂದ್ಯದಲ್ಲಿ ಬುಧವಾರ ಚೈನೀಸ್‌ ತೈಪೆ ವಿರುದ್ಧ ಸೆಣಸಲಿದೆ.

ವಿಶ್ವ ಬಾಕ್ಸಿಂಗ್‌ ಕೂಟ: ಲವ್ಲೀನಾ ಶುಭಾರಂಭ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಕಂಚಿನ ಪದಕ ವಿಜೇತ ಬಾಕ್ಸರ್‌ ಲವ್ಲೀನಾ ಬೊರ್ಗೊಹೈನ್‌ ಸೋಮವಾರ ಇಸ್ತಾನ್‌ಬುಲ್‌ನಲ್ಲಿ ಆರಂಭವಾದ ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಒಲಿಂಪಿಕ್ಸ್‌ ಬಳಿಕ ಮೊದಲ ಬಾರಿ ಸ್ಪರ್ಧಾತ್ಮಕ ಟೂರ್ನಿಯಲ್ಲಿ ಆಡುತ್ತಿರುವ ಲವ್ಲೀನಾ 70 ಕೆ.ಜಿ. ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ತೈವಾನ್‌ನ ಚೆನ್‌ ನೀನ್‌ ಚಿನ್‌ ವಿರುದ್ಧ 3-2 ಅಂತರದಲ್ಲಿ ಜಯಗಳಿಸಿದರು. 

ಗ್ಯಾರೇಜ್ ಸೇರಬೇಕಿದ್ದ ಶೇಷೇಗೌಡ ಈಗ ರಾಷ್ಟ್ರೀಯ ಹಾಕಿಪಟು..!

2018ರ ಆವೃತ್ತಿಯಲ್ಲಿ ಸೆಮಿಫೈನಲ್‌ನಲ್ಲಿ ಚೆನ್‌ ವಿರುದ್ಧ ಸೋತಿದ್ದ ಲವ್ಲಿನಾ ಈ ಬಾರಿ ಸೇಡು ತೀರಿಸಿಕೊಂಡರು. 2018 ಮತ್ತು 2019ರಲ್ಲಿ ಕಂಚು ಗೆದ್ದಿರುವ ಅವರು ಅಂತಿಮ 16ರ ಸುತ್ತಿನಲ್ಲಿ ಇಂಗ್ಲೆಂಡ್‌ನ ಸಿಂಡಿ ಗಂಬಾ ವಿರುದ್ಧ ಸೆಣಸಲಿದ್ದಾರೆ.

ಏಷ್ಯಾ ಕಪ್‌ ಆರ್ಚರಿ: 3 ಚಿನ್ನ ಗೆದ್ದ ಭಾರತ

ಸುಲೈಮಾನಿಯಾ(ಇರಾಕ್‌): ಏಷ್ಯಾ ಕಪ್‌ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕ್ರೀಡಾಪಟುಗಳು ಮಂಗಳವಾರ 3 ಚಿನ್ನ ಸೇರಿದಂತೆ 4 ಪದಕಗಳನ್ನು ಬಾಚಿಕೊಂಡಿದ್ದಾರೆ. ಮಹಿಳೆಯರ ಕಾಂಪೌಂಡ್‌ ತಂಡ ವಿಭಾಗದಲ್ಲಿ ಪರ್ಣೀತ್‌ ಕೌರ್‌, ಅದಿತಿ, ಸಾಕ್ಷಿ ಅವರನ್ನೊಳಗೊಂಡ ತಂಡ ಮೊದಲ ಚಿನ್ನಕ್ಕೆ ಮುತ್ತಿಕ್ಕಿದರೆ, ಪುರುಷರ ವಿಭಾಗದಲ್ಲಿ ಪ್ರಥಮೇಶ್‌, ರಿಷಭ್‌ ಹಾಗೂ ಜಾವ್ಕರ್‌ ಸಮಾಧಾನ್‌ ಅವರ ತಂಡ ಕೂಡಾ ಚಿನ್ನ ಗೆದ್ದಿತು. ಬಳಿಕ ಕಾಂಪೌಂಡ್‌ ಮಿಶ್ರ ವಿಭಾಗದಲ್ಲಿ ಪ್ರಥಮೇಶ್‌-ಪ್ರರ್ಣೀತ್‌ ಜೋಡಿ ಸ್ವರ್ಣ ತಮ್ಮದಾಗಿಸಿಕೊಂಡರೆ, ಪುರುಷರ ವೈಯಕ್ತಿಕ ವಿಭಾಗದಲ್ಲಿ ಜಾವ್ಕರ್‌ ಕಂಚಿನ ಪದಕ ಪಡೆದರು.

ಬೆಂಗ್ಳೂರು 10ಕೆ ಓಟಕ್ಕೆ ಒಲಿಂಪಿಕ್ಸ್‌ ಬೆಳ್ಳಿ ವಿಜೇತ!

ಬೆಂಗಳೂರು: ಮೇ 15ರಂದು ನಡೆಯಲಿರುವ ಪ್ರತಿಷ್ಠಿತ ವಿಶ್ವ 10ಕೆ ಬೆಂಗಳೂರು ಸ್ಪರ್ಧೆಯಲ್ಲಿ 2016ರ ರಿಯೋ ಒಲಿಂಪಿಕ್ಸ್‌ನ 10000 ಮೀ. ಓಟದ ಬೆಳ್ಳಿ ಪದಕ ವಿಜೇತ, ಕೀನ್ಯಾದ ಪಾಲ್‌ ತನುಯಿ ಕಣಕ್ಕಿಳಿಯಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನ 5000 ಮೀ. ಓಟದಲ್ಲಿ 4ನೇ ಸ್ಥಾನ ಪಡೆದ ಕೀನ್ಯಾದ ನಿಕೋಲಸ್‌ ಕಿಮೆಲಿ ಸಹ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. 

ಬೆಂಗಳೂರು 10ಕೆ ಓಟದ ದಾಖಲೆ ಕೀನ್ಯಾದ ಜೋಫ್ರಿ ಕಾಮೊರೊರ್‌ ಹೆಸರಿನಲ್ಲಿದೆ. 2014ರಲ್ಲಿ ಅವರು 27.44 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿದ್ದರು. ಈ ವರ್ಷ ಕಣದಲ್ಲಿರುವ ಓಟಗಾರರ ಪೈಕಿ ಒಟ್ಟು 7 ಮಂದಿ, ಜೋಫ್ರಿ ಅವರಿಗಿಂತ ಕಡಿಮೆ ಸಮಯದಲ್ಲಿ ಓಟ ಪೂರ್ಣಗೊಳಿಸುವ ದಾಖಲೆ ಹೊಂದಿದ್ದು, ಪ್ರಶಸ್ತಿಗಾಗಿ ಭಾರೀ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.

click me!