Thomas Cup 2022: ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ

By Kannadaprabha NewsFirst Published May 10, 2022, 8:02 AM IST
Highlights

* ಥಾಮಸ್ ಕಪ್ ಫೈನಲ್ಸ್‌ನಲ್ಲಿ ಭಾರತ ಪುರುಷರ ತಂಡ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

* ಭಾರತ ತಂಡ ಸತತ 2ನೇ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌

* ಕೆನಡಾ ವಿರುದ್ಧ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಪುರುಷರ ತಂಡ 5-0 ಅಂತರದಲ್ಲಿ ಜಯ

ಬ್ಯಾಂಕಾಕ್(ಮೇ.10)‌: ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (Thomas Cup 2022) ಭಾರತ ತಂಡ ಸತತ 2ನೇ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಸೋಮವಾರ ಕೆನಡಾ ವಿರುದ್ಧ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಪುರುಷರ ತಂಡ 5-0 ಅಂತರದಲ್ಲಿ ಜಯ ಸಾಧಿಸಿತು. ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ (Kidambi Srikanth), ಎಚ್‌.ಎಸ್‌.ಪ್ರಣಯ್‌ ಹಾಗೂ ಪ್ರಿಯಾನ್ಶು ರಾಜಾವತ್‌ ಗೆಲುವು ಸಾಧಿಸಿದರೆ, ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ, ಕೃಷ್ಣಪ್ರಸಾದ್‌-ವಿಷ್ಣುವರ್ಧನ್‌ ಜೋಡಿ ಜಯಭೇರಿ ಬಾರಿಸಿತು. 

ಮೊದಲ ಪಂದ್ಯದಲ್ಲಿ ಜರ್ಮನಿ ವಿರುದ್ಧ 5-0 ಅಂತರದಲ್ಲಿ ಗೆದ್ದಿದ್ದ ತಂಡ ಕೊನೆ ಪಂದ್ಯದಲ್ಲಿ ಬುಧವಾರ ಚೈನೀಸ್‌ ತೈಪೆ ವಿರುದ್ಧ ಸೆಣಸಲಿದೆ. ಮಹಿಳಾ ತಂಡ ಉಬರ್‌ ಕಪ್‌ 2ನೇ ಪಂದ್ಯದಲ್ಲಿ ಮಂಗಳವಾರ ಅಮೆರಿಕ ವಿರುದ್ಧ ಆಡಲಿದೆ. ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ 4-1ರಲ್ಲಿ ಗೆದ್ದಿತ್ತು.

ರಾಜ್ಯ ಅಥ್ಲೆಟಿಕ್ಸ್‌ ಕೂಟ: ಆಳ್ವಾಸ್‌ ಚಾಂಪಿಯನ್‌

ಉಡುಪಿ: ಕರ್ನಾಟಕ ರಾಜ್ಯ ಹಿರಿಯ ಹಾಗೂ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್‌ ಸ್ಪೋಟ್ಸ್‌ರ್‍ ಕ್ಲಬ್‌ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕೂಟದ ಎರಡನೇ ಹಾಗೂ ಕೊನೆ ದಿನವಾದ ಸೋಮವಾರ 2 ಕೂಟ ದಾಖಲೆಗಳು ನಿರ್ಮಾಣವಾದವು. ಮಹಿಳಾ ವಿಭಾಗದ ಶಾಟ್‌ಪುಟ್‌ನಲ್ಲಿ ಮೈಸೂರಿನ ಅಂಬಿಕಾ 14.09 ಮೀ. ಎಸೆದು ದಾಖಲೆ ಬರೆದರೆ, ಅಂಡರ್‌-20 ವಿಭಾಗದ 5000 ಮೀ. ಓಟದಲ್ಲಿ ಬೆಂಗಳೂರಿನ ಶಿವಾಜಿ ಮಾದಪ್ಪಗೌಡ 14 ನಿ. 52.6 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. 

ಅಂಡರ್‌-20 ಪುರುಷರ ವಿಭಾಗದಲ್ಲಿ ಬೆಂಗಳೂರಿನ ಡಿವೈಇಎಸ್‌ ಸ್ಪೋರ್ಟ್ಸ್‌ ಹಾಸ್ಟೆಲ್‌, ಹಿರಿಯ ಪುರುಷರ ಹಾಗೂ ಮಹಿಳಾ ವಿಭಾಗ, ಅಂಡರ್‌-20 ಮಹಿಳಾ ವಿಭಾಗದಲ್ಲಿ ಆಳ್ವಾಸ್‌ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ನಿವೃತ್ತಿಯಿಂದ ಹೊರಬಂದ ಹಾಕಿ ಆಟಗಾರ ಸುನಿಲ್‌

ಬೆಂಗಳೂರು: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಹಾಕಿಗೆ ಗುಡ್‌ಬೈ ಹೇಳಿದ್ದ ಭಾರತದ ಫಾರ್ವರ್ಡ್‌ ಆಟಗಾರ, ಕರ್ನಾಟಕದ ಎಸ್‌.ವಿ.ಸುನಿಲ್‌ ನಿವೃತ್ತಿಯಿಂದ ಹೊರಬಂದಿದ್ದು, ಮತ್ತೆ ಹಾಕಿ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋಮವಾರ ಪ್ರಕಟಗೊಂಡ ಏಷ್ಯಾ ಕಪ್‌ ಭಾರತ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ. 14 ವರ್ಷಗಳ ಕಾಲ ರಾಷ್ಟ್ರೀಯ ತಂಡದ ಪರ ಆಡಿರುವ ಸುನಿಲ್‌, ಗಾಯದ ಸಮಸ್ಯೆಯಿಂದಾಗಿ ಟೋಕಿಯೋ ಒಲಿಂಪಿಕ್ಸ್‌ ತಂಡಕ್ಕೆ ಆಯ್ಕೆಯಾಗಿರಲಿಲ್ಲ.

ಥಾಮಸ್‌, ಉಬರ್‌ ಕಪ್‌: ಭಾರತ ಭರ್ಜರಿ ಶುಭಾರಂಭ

2007ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಅವರು 264 ಪಂದ್ಯಗಳಲ್ಲಿ 72 ಗೋಲು ಬಾರಿಸಿದ್ದಾರೆ. 2012, 2016ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಸುನಿಲ್‌ 2017ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.

ಏಷ್ಯಾ ಕಪ್‌ ಹಾಕಿ: ಭಾರತ ತಂಡಲ್ಲಿ ರಾಜ್ಯದ ಮೂವರು

ನವದೆಹಲಿ: ಇಂಡೋನೇಷ್ಯಾದ ಜರ್ಕಾತದಲ್ಲಿ ಮೇ 23ರಿಂದ ಜೂನ್‌ 1ರ ವರೆಗೆ ನಡೆಯಲಿರುವ ಏಷ್ಯಾ ಕಪ್‌ ಹಾಕಿ ಟೂರ್ನಿಯ ಭಾರತ ಪುರುಷರ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸೋಮವಾರ ಹಾಕಿ ಇಂಡಿಯಾ 20 ಆಟಗಾರರ ತಂಡವನ್ನು ಪ್ರಕಟಿಸಿತು. 

ರಾಜ್ಯದ ಶೇಷೇ ಗೌಡ ಬಿ.ಎಂ. ಹಾಗೂ ಆಭರಣ್‌ ಸುದೇವ್‌ ಇದೇ ಮೊದಲ ಬಾರಿ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದು, ಹಿರಿಯ ಫಾರ್ವರ್ಡ್‌ ಆಟಗಾರ ಎಸ್‌.ವಿ.ಸುನಿಲ್‌ ಕೂಡಾ ತಂಡಕ್ಕೆ ಮರಳಿದ್ದಾರೆ. ಇತ್ತೀಚೆಗಷ್ಟೇ ನಿವೃತ್ತಿ ಘೋಷಿಸಿ ಬಳಿಕ ಹಿಂಪಡೆದ ರೂಪಿಂದರ್‌ ಸಿಂಗ್‌ ಪಾಲ್‌ ನಾಯಕ, ಬಿರೇಂದ್ರ ಲಕ್ರಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

click me!