Neeraj Chopra: ಚಿನ್ನದ ಹುಡುಗನಿಗೆ ಒಲಿದ 'ಸ್ಪೋರ್ಟ್‌ಸ್ಟಾರ್ ವರ್ಷದ ಪ್ರಶಸ್ತಿ'

By Suvarna News  |  First Published Mar 20, 2022, 5:16 PM IST

* ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸಾಧನೆಗೆ ಮತ್ತೊಂದು ಗರಿ

* 2022ನೇ ಸಾಲಿನ ಸ್ಪೋರ್ಟ್‌ಸ್ಟಾರ್ ವರ್ಷದ ಪ್ರಶಸ್ತಿ'' ಪಾತ್ರರಾದ ನೀರಜ್ ಚೋಪ್ರಾ

* ಮಹಿಳಾ ವಿಭಾಗದಲ್ಲಿ ವೇಟ್‌ ಲಿಫ್ಟರ್ ಮೀರಾಬಾಯಿ ಚಾನುಗೆ ಒಲಿದ ಪ್ರತಿಷ್ಠಿತ ಪ್ರಶಸ್ತಿ


ಮುಂಬೈ(ಮಾ.20): ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಚಿನ್ನದ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ (Neeraj Chopra) 2022ನೇ ಸಾಲಿನ ''ಸ್ಪೋರ್ಟ್‌ಸ್ಟಾರ್ ವರ್ಷದ ಪ್ರಶಸ್ತಿ''(ಪುರುಷರ ವಿಭಾಗ)ಗೆ ಪಾತ್ರರಾಗಿದ್ದಾರೆ. ಇನ್ನು ಟೋಕಿಯೋ ಒಲಿಂಪಿಕ್ಸ್‌ನ ವೇಟ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ವಿಜೇತೆ ಸೈಕೋಮ್ ಮೀರಾಬಾಯಿ ಚಾನು (Mirabai Chanu) 2022ನೇ ಸಾಲಿನ ''ಸ್ಪೋರ್ಟ್‌ಸ್ಟಾರ್ ವರ್ಷದ ಪ್ರಶಸ್ತಿ''(ಮಹಿಳಾ ವಿಭಾಗ)ಗೆ ಪಾತ್ರರಾಗಿದ್ದಾರೆ. ಆದರೆ ಮೀರಾಬಾಯಿ ಚಾನು ಅನಿವಾರ್ಯ ಕಾರಣದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಪ್ರತಿಷ್ಠಿತ ಸ್ಪೋರ್ಟ್‌ಸ್ಟಾರ್ ವರ್ಷದ ಪ್ರಶಸ್ತಿ ಕಾರ್ಯಕ್ರಮವು ಇಲ್ಲಿನ ದ ತಾಜ್‌ ಮಹಲ್‌ ಪ್ಯಾಲೇಸ್ ಹೋಟೆಲ್‌ನಲ್ಲಿ ಜರುಗಿತು.

ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನೀರಜ್ ಚೋಪ್ರಾ, ''ಪ್ರಶಸ್ತಿಗಳನ್ನು ನನ್ನನ್ನು ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಿಸುತ್ತವೆ. ನನಗೆ ಈ ಪ್ರಶಸ್ತಿ ನೀಡಿದ್ದಕ್ಕೆ ಸ್ಪೋರ್ಟ್‌ಸ್ಟಾರ್ ಸಂಸ್ಥೆಗೆ ಧನ್ಯವಾದಗಳು. ಅಥ್ಲೀಟ್ಸ್‌ಗಳಾದ ನಾವು ಯಾವಾಗಲೂ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಜಗತ್ತಿನ ಮುಂದೆ ನಮ್ಮ ದೇಶವನ್ನು ಉನ್ನತ ಸ್ಥಾನದಲ್ಲಿಡಲು ಪ್ರಯತ್ನಿಸುತ್ತಲೇ ಇರುತ್ತೇವೆ. ಅದಕ್ಕಾಗಿ ಕಠಿಣ ಪರಿಶ್ರಮವನ್ನು ಪಡುತ್ತೇವೆ'' ಎಂದು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ದೇಶಕ್ಕೆ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಮೊದಲ ಚಿನ್ನ ಗೆದ್ದುಕೊಟ್ಟ ನೀರಜ್ ಚೋಪ್ರಾ ಹೇಳಿದ್ದಾರೆ.

Tap to resize

Latest Videos

ಭಾರತದ ಕ್ರೀಡಾ ಇತಿಹಾಸದಲ್ಲಿ ಕಳಸಪ್ರಾಯ ಎನ್ನುವಂತೆ, ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದರು. ಅಥ್ಲೆಟಿಕ್ಸ್ ವಿಭಾಗದಲ್ಲಿ ಒಲಿಂಪಿಕ್ಸ್‌ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ಗೆಲ್ಲುವುದರ ಜತೆಗೆ, ಒಟ್ಟಾರೆ ಒಲಿಂಪಿಕ್ಸ್‌ನಲ್ಲಿ ವೈಯುಕ್ತಿಕ ವಿಭಾಗದಲ್ಲಿ ಅಭಿನವ್ ಬಿಂದ್ರಾ (Abhinav Bindra) ಬಳಿಕ ಚಿನ್ನದ ಪದಕ ಗೆದ್ದ ಭಾರತದ ಎರಡನೇ ಕ್ರೀಡಾಪಟು ಎನ್ನುವ ಶ್ರೇಯ ಕೂಡಾ ನೀರಜ್ ಚೋಪ್ರಾ ಪಾಲಾಗಿದೆ. ಈ ಮೊದಲು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿದ್ದರು.   

Neeraj Chopra, who claimed a first Olympic gold medal in athletics for India, wins the Sportsman of the Year (Track and Field)! 🏆 | pic.twitter.com/IgfJUlbRYP

— Sportstar (@sportstarweb)

ಪಾಣಿಪತ್ ಮೂಲದ ನೀರಜ್ ಚೋಪ್ರಾ, ಕಾಮನ್‌ವೆಲ್ತ್‌ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದಷ್ಟೇ ಅಲ್ಲದೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ವಿಶ್ವದ ನಂ.1 ಜಾವೆಲಿನ್ ಥ್ರೋ ಪಟು ಜರ್ಮನಿಯ ಜೋಹಾನ್ನೆಸ್ ವೆಟ್ಟರ್ ಅವರನ್ನು ಹಿಂದಿಕ್ಕಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಕೊನೆಯ ದಿನ ನಡೆದ ಚಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಕೊಟ್ಟ ಮಾತು ಉಳಿಸಿದ ಮಹೀಂದ್ರಾ: ಚಿನ್ನದ ಹುಡುಗ ನೀರಜ್‌ಗೆ ದುಬಾರಿ ಗಿಫ್ಟ್!

ಇನ್ನುಳಿದಂತೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಬಾಕ್ಸರ್ ಲವ್ಲೀನ್ ಬೋರ್ಗುಹೈನ್‌(ವರ್ಷದ ಮಹಿಳಾ ಆಟಗಾರ್ತಿ, ವೈಯುಕ್ತಿ ಸ್ಪರ್ಧೆ ವಿಭಾಗ), ಅವನಿ ಲೆಖಾರ(ವರ್ಷದ ಪ್ಯಾರಾ ಅಥ್ಲೀಟ್‌, ಮಹಿಳಾ ವಿಭಾಗ), ಪ್ರಮೋದ್ ಭಗತ್(ವಿಶೇಷ ಮನ್ನಣೆ ಪ್ರಶಸ್ತಿ), ಸವಿತಾ(ತಂಡದ ವಿಭಾಗದಲ್ಲಿ ವರ್ಷದ ಮಹಿಳಾ ಆಟಗಾರ್ತಿ), ಟೋಕಿಯೋ ಒಲಿಂಪಿಕ್ಸ್‌ ಹಾಕಿಯಲ್ಲಿ ಕಂಚಿನ ಪದಕ ವಿಜೇತ ತಂಡದ ಸದಸ್ಯ ರೂಪಿಂದರ್ ಪಾಲ್ ಸಿಂಗ್(ತಂಡದ ವಿಭಾಗದಲ್ಲಿ ವರ್ಷದ ಪುರುಷ ಆಟಗಾರ) ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ನೇತೃತ್ವದಲ್ಲಿ, ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ಎಂ.ಎಂ. ಸೌಮ್ಯ, ಚೆಸ್ ದಂತಕಥೆ ವಿಶ್ವನಾಥನ್ ಆನಂದ್, ಭಾರತದ ಮಾಜಿ ಫುಟ್ಬಾಲ್ ನಾಯಕ ಬೈಚುಂಗ್ ಭುಟಿಯಾ ಹಾಗೂ ಒಲಿಂಪಿಯನ್‌ ಅಂಜಲಿ ಭಗವತ್, ಅಪರ್ಣ ಪೋಪಟ್ ಅವರನ್ನೊಳಗೊಂಡ ಜೂರಿ ಕಮಿಟಿಯು ಈ ಮೇಲ್ಕಂಡ ಕ್ರೀಡಾಪಟುಗಳನ್ನು ಕ್ರೀಡಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

click me!