ಥಾಮಸ್‌, ಉಬರ್‌ ಕಪ್‌: ಭಾರತ ಭರ್ಜರಿ ಶುಭಾರಂಭ

By Kannadaprabha News  |  First Published May 9, 2022, 9:53 AM IST

* ಥಾಮಸ್&ಉಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯ ಶಟ್ಲರ್‌ಗಳ ಶುಭಾರಂಭ

* ಥಾಮಸ್‌ ಕಪ್‌ ‘ಸಿ’ ಗುಂಪಿನ ಪಂದ್ಯದಲ್ಲಿ ಪುರುಷರ ತಂಡ 

* ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೆನ್‌, ಕಿದಂಬಿ ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌ ಜಯಭೇರಿ


ಬ್ಯಾಂಕಾಕ್(ಮೇ.09)‌: ಥಾಮಸ್‌ ಹಾಗೂ ಉಬರ್‌ ಕಪ್‌ ಫೈನಲ್‌ (Thomas and Uber Cup Finals) ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತ ತಂಡಗಳು ಶುಭಾರಂಭ ಮಾಡಿವೆ. ಥಾಮಸ್‌ ಕಪ್‌ ‘ಸಿ’ ಗುಂಪಿನ ಪಂದ್ಯದಲ್ಲಿ ಪುರುಷರ ತಂಡ ಜರ್ಮನಿ ವಿರುದ್ಧ 5-0 ಅಂತರದಲ್ಲಿ ಜಯಿಸಿದರೆ, ಉಬರ್‌ ಕಪ್‌ ‘ಡಿ’ ಗುಂಪಿನ ಪಂದ್ಯದಲ್ಲಿ ಕೆನಡಾ ವಿರುದ್ಧ ಮಹಿಳಾ ತಂಡ 4-1ರಲ್ಲಿ ಗೆಲುವು ಪಡೆಯಿತು. ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೆನ್‌, ಕಿದಂಬಿ ಶ್ರೀಕಾಂತ್‌ (Kidambi Srikanth), ಎಚ್‌.ಎಸ್‌.ಪ್ರಣಯ್‌ ಜಯಗಳಿಸಿದರೆ, ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ, ಎಂ.ಆರ್‌.ಅರ್ಜುನ್‌-ಧೃವ್‌ ಕಪಿಲಾ ಜೋಡಿಗಳು ಗೆದ್ದವು. 

ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು (PV Sindhu), ಆಕರ್ಷಿ ಕಶ್ಯಪ್‌, ಅಶ್ಮಿತಾ ಚಲಿಹಾ ಜಯಗಳಿಸಿದರು. ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೋ-ಟ್ರೀಸಾ ಜಾಲಿ ಜೋಡಿ ಯಶಸ್ಸು ಕಂಡರೆ, ಶೃತಿ ಮಿಶ್ರಾ-ಸಿಮ್ರನ್‌ ಸಿಂಘಿ ಜೋಡಿ ಸೋಲುಂಡಿತು. ಪುರುಷರ ತಂಡ 2ನೇ ಪಂದ್ಯವನ್ನು ಸೋಮವಾರ ಕೆನಡಾ ವಿರುದ್ಧ ಆಡಲಿದ್ದು, ಮಹಿಳಾ ತಂಡ ಮಂಗಳವಾರ ಅಮೆರಿಕವನ್ನು ಎದುರಿಸಲಿದೆ.

Latest Videos

undefined

ಕಿವುಡರ ಒಲಿಂಪಿಕ್ಸ್‌: ಚಿನ್ನ ಗೆದ್ದ 15ರ ಅಭಿನವ್‌

ನವದೆಹಲಿ: ಬ್ರೆಜಿಲ್‌ನಲ್ಲಿ ನಡೆಯುತ್ತಿರುವ 24ನೇ ಕಿವುಡರ ಒಲಿಂಪಿಕ್ಸ್‌ನಲ್ಲಿ ಭಾರತ 3ನೇ ಚಿನ್ನದ ಪದಕ ಗೆದ್ದಿದೆ. ಪುರುಷರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ 15 ವರ್ಷದ ಅಭಿನವ್‌ ದೇಶ್ವಾಲ್‌ ಚಿನ್ನದ ಪದಕ ಜಯಿಸಿದರು. ಉತ್ತರಾಖಂಡದ ಅಭಿನವ್‌, ಫೈನಲ್‌ನಲ್ಲಿ 24 ಯತ್ನಗಳ ಮುಕ್ತಾಯಕ್ಕೆ ಉಕ್ರೇನ್‌ನ ಒಲೆಸ್ಕಿ ಲೆಜೆಬ್ನೆಯಕ್‌ ಜೊತೆ 234.2 ಅಂಕಗಳಲ್ಲಿ ಸಮಬಲ ಸಾಧಿಸಿದ್ದರು. ಬಳಿಕ ಶೂಟ್‌ ಆಫ್‌ನಲ್ಲಿ ಅಭಿನವ್‌ 10.3 ಅಂಕ ಗಳಿಸಿದರೆ, ಒಲೆಸ್ಕಿ 9.7 ಅಂಕಕ್ಕೆ ಗಳಿಸಿ ಬೆಳ್ಳಿಗೆ ತೃಪ್ತಿಪಟ್ಟರು. ಭಾರತ 3 ಚಿನ್ನ, 2 ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ರಾಜ್ಯ ಅಥ್ಲೆಟಿಕ್ಸ್‌: 3 ಕೂಟ ದಾಖಲೆ

ಉಡುಪಿ: ಭಾನುವಾರದಿಂದ ಆರಂಭಗೊಂಡ ಕರ್ನಾಟಕ ರಾಜ್ಯ ಹಿರಿಯ ಹಾಗೂ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಮೊದಲ ದಿನ ಮೂರು ನೂತನ ಕೂಟ ದಾಖಲೆಗಳು ನಿರ್ಮಾಣವಾದವು. ಮಹಿಳೆಯರ 400 ಮೀ. ಓಟದಲ್ಲಿ ಆಳ್ವಾಸ್‌ ಕ್ರೀಡಾ ಕ್ಲಬ್‌ನ ಲಿಖಿತಾ (53.18 ಸೆಕೆಂಡ್‌), ಪುರುಷರ ಕಿರಿಯರ(ಅಂಡರ್‌-20) ಟ್ರಿಪಲ್‌ ಜಂಪ್‌ನಲ್ಲಿ ಉಡುಪಿಯ ಅಖಿಲೇಶ್‌(15.40 ಮೀ.) ಹಾಗೂ ಮಹಿಳೆಯರ ಟ್ರಿಪಲ್‌ ಜಂಪ್‌ನಲ್ಲಿ ಫ್ಯಾಷನ್‌ ಅಥ್ಲೆಟಿಕ್ಸ್‌ ಕ್ಲಬ್‌ನ ಐಶ್ವರ್ಯ ಬಿ(13.30 ಮೀ.) ಕೂಟ ದಾಖಲೆ ಬರೆದರು.

ಇಂದಿನಿಂದ ಥಾಮಸ್‌, ಉಬರ್‌ ಕಪ್‌ ಬ್ಯಾಡ್ಮಿಂಟನ್‌

ಮಹಿಳಾ ಹಾಕಿ: ಸತತ 2ನೇ ಜಯ ಕಂಡ ರಾಜ್ಯ

ಭೋಪಾಲ್‌: ರಾಷ್ಟ್ರೀಯ ಹಿರಿಯ ಮಹಿಳೆಯರ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿದ್ದು, ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವುದು ಖಚಿತವೆನಿಸಿದೆ. ಭಾನುವಾರ ನಡೆದ ‘ಎಫ್‌’ ಗುಂಪಿನ ಪಂದ್ಯದಲ್ಲಿ ಕರ್ನಾಟಕ, ತಮಿಳುನಾಡು ವಿರುದ್ಧ 3-0 ಗೋಲುಗಳ ಜಯ ಪಡೆಯಿತು. 3ನೇ ನಿಮಿಷದಲ್ಲಿ ಪೂಜಾ ಎಂ.ಡಿ., 9ನೇ ನಿಮಿಷದಲ್ಲಿ ನಿಶಾ ಪಿ.ಸಿ., 15ನೇ ನಿಮಿಷದಲ್ಲಿ ಶೈನಾ ತಂಗಮ್ಮ ಗೋಲು ಗಳಿಸಿದರು. ಮೊದಲ ಪಂದ್ಯದಲ್ಲಿ ಅರುಣಾಚಲ ವಿರುದ್ಧ ಜಯಿಸಿದ್ದ ಕರ್ನಾಟಕಕ್ಕೆ, ಗುಂಪು ಹಂತದಲ್ಲಿ ಇನ್ನೊಂದು ಪಂದ್ಯ ಬಾಕಿ ಇದ್ದು, ಮೇ 12ರಂದು ಅಂಡಮಾನ್‌ ಮತ್ತು ನಿಕೋಬಾರ್‌ ವಿರುದ್ಧ ಆಡಲಿದೆ.

click me!